ಬ್ಯಾಡಗಿ:
“ಬ್ಯಾಡಗಿ ಚಿಲ್ಲಿ ಎಕ್ಸಪೋ-2018” ದೇಶದಲ್ಲಿ ಪ್ರಥಮ ಬಾರಿಗೆ ಜರುಗುತ್ತಿದ್ದು ಮೆಣಸಿನಕಾಯಿ ಉದ್ಯಮದಲ್ಲಿ ಮಹತ್ತರ ಬದಲಾವಣೆ ತರುವ ಮೂಲಕ ಔದ್ಯೋಗಿಕ ಕ್ರಾಂತಿಯನ್ನು ಸೃಷ್ಟಿಸಲಿದೆ ಎಂದು ಶಾಸಕ ಸುರೇಶಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶನಿವಾರ (ಸೆ.8)ಮತ್ತು ಭಾನುವಾರ (ಸೆ.9) ನಡೆಯಲಿರುವ ಚಿಲ್ಲಿ ಎಕ್ಸಪೋ-2018 ಕಾರ್ಯಕ್ರಮದ ಪೂರ್ವ ಸಿದ್ಧತೆ ಪರೀಕ್ಷಿಸಿ ಅವರು ಮಾತನಾಡಿದರು. ಚಿಲ್ಲಿ ಎಕ್ಸ್‍ಪೋ ಕಾರ್ಯಕ್ರಮವು ಬ್ಯಾಡಗಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದು ವಿವಿಧೆಡೆಗಳಿಂದ ಆಗಮಿಸಿದ ಸುಮಾರು 40 ಸುಪ್ರಸಿದ್ಧ ಮೆಣಸಿಕಾಯಿಪುಡಿ, ಓಲಿಯೋರಿಸನ್ ಸೇರಿದಂತೆ ಪೌಡರ್ ಪ್ಯಾಕಿಂಗ್ ಇನ್ನಿತರ ಘಟಕಗಳು ಎರಡು ದಿನಗಳ ಕಾಲ ಪ್ರಾತ್ಯಕ್ಷಿಕೆ ನಡೆಸಲಿವೆ ಎಂದರು.
ರೈತ ಪ್ರತಿನಿಧಿಗಳು ಎಕ್ಸ್‍ಪೋದಲ್ಲಿ ಭಾಗಿ: ಗುಜರಾತ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಆಂದ್ರಪ್ರದೇಶದಿಂದ 200 ಕ್ಕೂ ಹೆಚ್ಚು ರೈತ ಪ್ರತಿನಿಧಿಗಳು ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಉದ್ಯಮಿಗಳು ರೈತರು ಹಾಗೂ ರೈತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸೋಲಾರ ಕಂಪನಿಗಳು, ವಾಣಿಜ್ಯ ವಾಹನಗಳು ಸಹ ಮೇಳದಲ್ಲಿ ಸೇರುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಆಧುನಿಕ ತಂತ್ರಜ್ಞಾನ: ಎಕ್ಸ್‍ಪೋದಲ್ಲಿ ರೈತರಿಗೆ ಆಧುನಿಕ ತಂತ್ರಜ್ಞಾನ ಬಳಸಿ ಡ್ರೈಯಾರ್ಡ ಮೆಣಸಿನಕಾಯಿ ಮೇಲಿನ ನೈಸರ್ಗಿಕ ಬಣ್ಣಕ್ಕೆ ಧಕ್ಕೆಯಾಗದಂತೆ ಕಾಪಾಡಿಕೊಳ್ಳುವ ಕುರಿತು ಮಾಹಿತಿ ಸೇರಿದಂತೆ ಉದ್ಯಮವಾಗಿ ಪರಿವರ್ತನೆಗೊಂಡ ಮೆಣಸಿನಕಾಯಿಯಲ್ಲಿ ಆಧುನಿಕ ತಂತ್ರಜ್ಞಾನದ ಮಾಹಿತಿ ನೀಡಲಾಗುವುದು ಎಂದರು.
ಮಳೆಯಾದರೂ ತೊಂದರೆಯಾಗದಂತೆ ರಕ್ಷಣೆ: ಕಾರ್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು ಮಳಿಗೆಗಳ ಮೇಲೆ ತಗಡಿನ ಹೊದಿಕೆಯನ್ನು ಹಾಕಲಾಗಿದ್ದು ಮಳೆಯಿಂದ ಎಲ್ಲ ಮಳಿಗೆಗಳನ್ನು ರಕ್ಷಿಸಲಾಗಿದೆ, ಹೀಗಾಗಿ ಎಕ್ಸ್‍ಪೋ ಕಾರ್ಯಕ್ರಮಕ್ಕೆ ಯಾವುದೇ ವಿಘ್ನಗಳು ಬಾರದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಹಣಕಾಸಿನ ನೆರವು ಧಾವಿಸಿದ ಬ್ಯಾಂಕಗಳು:ಸುರೇಶ ಮೇಲಗಿರಿ ಮಾತನಾಡಿ, ಉದ್ಯಮಿಗಳಿಗೆ ಹಣಕಾಸು ನೆರವು ಒದಗಿಸಲು ವಿವಿಧ ಯೋಜನೆಗಳನ್ನು ಒಳಗೊಂಡ ಮಾಹಿತಿಯನ್ನು ಎಸ್‍ಬಿಐ ಸೇರಿದಂತೆ ಸುಮಾರು 7 ಬ್ಯಾಂಕ್‍ಗಳು, ಸಾಮಾನ್ಯ ವಿಮೆ ಕಂಪನಿಗಳು ನೀಡಲಿವೆ, ಒಣ ಮೆಣಸಿನಕಾಯಿಗೆ ಬೇಕಾದ ಎಲ್ಲ ವಸ್ತುಗಳು ತಂತ್ರಜ್ಞಾನ ಸೇರಿದಂತೆ ಎಲ್ಲ ಮಾಹಿತಿಗಳು ಒಂದೇ ಸೂರಿನಡಿ ದೊರೆಯುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಲ್ಲಲ್ಲಿ ಮಳಿಗೆಗಳು: ದತ್ತಾತ್ರೇಯ ಸಾಳುಂಕೆ ಮಾತನಾಡಿ, ಸಿದ್ದೇಶ್ವರ ಕಲ್ಯಾಣ ಮಂಟಪ ಸೇರಿದಂತೆ ಮಾರುಕಟ್ಟೆ ಪ್ರಾಂಗಣದ ಹೊರಭಾಗದಲ್ಲಿಯೂ ಸಹ ಮಳಿಗೆಗಳನ್ನು ಹಾಕಲಾಗಿದ್ದು ವಾಣಿಜ್ಯ ವಾಹನಗಳ ಪ್ರದರ್ಶನಕ್ಕೆ ಮುಂಭಾಗದಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ, ಇನ್ನೂ ಕಲ್ಯಾಣ ಮಂಟಪದ ಆವರಣದಲ್ಲಿ ಚಿಕ್ಕಚಿಕ್ಕ ಮಳಿಗೆಗಳನ್ನು ಹಾಕಲಾಗಿದ್ದು ಅಲ್ಲಿಯೇ ಲೈವ್ ಡೆಮೋ ನಡೆಯಲಿದೆ ಎಂದು ಟೆಂಡರ್ ಟುಡೇ ಗ್ರೂಪ್‍ನ ಶ್ರೀಹರಿ ಮಾಹಿತಿ ನೀಡಿದರು.
ಬೃಹತ್ ಯಂತ್ರಗಳು:ಮಹಾಂತೇಶ ಆಲದಗೇರಿ ಮಾತನಾಡಿ, ಸುಮಾರು 40ಕ್ಕೂ ಹೆಚ್ಚಿನ ಕಂಪನಿಗಳು ಇದರಲ್ಲಿ ಪಾಲ್ಗೊಳ್ಳಲಿವೆ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮೆಣಸಿನಕಾಯಿಪುಡಿ ತಯಾರಿಕೆ, ಅದರಲ್ಲಿರುವ ಬಣ್ಣದ ಅಂಶವನ್ನು ಪ್ರತ್ಯೇಕಿಸುವುದು, ಪಾಕೆಟ್‍ಗಳ ತಯಾರಿಕೆ ಮತ್ತು ಖಾರದ ಅಂಶವನ್ನು ಪತ್ತೆ ಮಾಡುವುದು ಸೇರಿದಂತೆ ಬೃಹತ್ ಯಂತ್ರಗಳ ಮೂಲಕ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಆನಂದ ಸೊರಟೂರ, ಜಗದೀಶ ರೋಣದ ಸೇರಿದಂತೆ ವರ್ತಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.