ಬೀಜಿಂಗ್:
ಭಾರತ – ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಸಕಾರಾತ್ಮಕ ಹೇಳಿಕೆಗಳನ್ನು ಸ್ವಾಗತಿಸಿದ ಚೀನಾ, ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆಗೆ ತಾನು ರಚನಾತ್ಮಕ ಪಾತ್ರ ವಹಿಸಲು ಸಿದ್ಧ ಎಂದು ಬುಧವಾರ ಹೇಳಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳ ಸುಧಾರಣೆ ಮತ್ತು ಅಭಿವೃದ್ಧಿಯು ಪ್ರಾದೇಶಿಕ ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿಗೆ ಬಹಳ ಮುಖ್ಯವಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಅವರು ಹೇಳಿದ್ದಾರೆ.
ಇಮ್ರಾನ್ ಖಾನ್ ಅವರು ಪಾಕ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತ ಮತ್ತು ಪಾಕಿಸ್ತಾನದ ನಾಯಕರು ನೀಡಿದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಲು ಕಾಂಗ್ ಅವರು, ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಸಂಬಂಧಿಸಿದಂತೆ ಭಾರತ -ಪಾಕ್ ಪ್ರಧಾನಿಗಳ ಹೇಳಿಕೆಗಳನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ಅತ್ಯಂತ ಮಹತ್ವದ ರಾಷ್ಟ್ರಗಳು. ಆ ಎರಡು ರಾಷ್ಟ್ರಗಳಿಗೆ ಚೀನಾ ಒಬ್ಬ ಸಾಮಾನ್ಯ ನೆರೆಯ ರಾಷ್ಟ್ರವಾಗಿ, ಪರಸ್ಪರ ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ದೃಢವಾದ ಬೆಂಬಲ ನೀಡುತ್ತದೆ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಪ್ರಾದೇಶಿಕವಾಗಿ ಶಾಂತಿ ಕಾಪಾಡಲು ಮತ್ತು ಅಭಿವೃದ್ಧಿ ಬದ್ಧವಾಗಿವೆ ಎಂಬ ವಿಶ್ವಾಸವನ್ನು ಚೀನಾ ವ್ಯಕ್ತಪಡಿಸಿದೆ.
ಕಳೆದ ಆಗಸ್ಟ್ 20ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದಿದ್ದ ಪ್ರಧಾನಿ ಮೋದಿ, ರಚನಾತ್ಮಕ ಮತ್ತು ಅರ್ಥಪೂರ್ಣ ಮಾತುಕತೆಗೆ ಭಾರತ ಸಿದ್ಧವಿದೆ ಎಂದು ಹೇಳಿದ್ದರು.
ಇನ್ನು ಇಮ್ರಾನ್ ಖಾನ್ ಸಹ, ಸ್ಥಗಿತಗೊಂಡಿರುವ ಭಾರತ -ಪಾಕ್ ಶಾಂತಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಲು ಸಿದ್ಧ ಎಂದು ಟ್ವೀಟ್ ಮಾಡಿದ್ದರು.
