ಚಿತ್ರದುರ್ಗ:
ಹಲವಾರು ವರ್ಷಗಳಿಂದಲೂ ಸರ್ಕಾರದ ವಿವಿಧ ತುಂಡು ಭೂಮಿಗಳನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ದಲಿತರು, ಆದಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಸೋಮವಾರ ಧರಣಿ ನಡೆಸಿ ಭೂಮಿ ಹಕ್ಕಿಗಾಗಿ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ನೇತೃತ್ವದಲ್ಲಿ ಧರಣಿ ನಡೆಸಿದ ದಲಿತರು ಹಾಗೂ ಆದಿವಾಸಿಗಳು ಚಳ್ಳಕೆರೆ ಟೌನ್ ವೆಂಕಟೇಶ್ವರ ನಗರ ಮತ್ತು ಜಿಲ್ಲೆಯ ಪ್ರತಿ ಗ್ರಾಮಗಳ ಎಲ್ಲಾ ಜಾತಿಯವರಿಗೆ ಉಳುಮೆ ಹಾಗೂ ಸ್ಮಶಾನಕ್ಕೆ ಕೂಡಲೆ ಭೂಮಿ ಮಂಜೂರು ಮಾಡಬೇಕು. ಚಳ್ಳಕೆರೆ ತಾಲೂಕು ರೇಣುಕಾಪುರ ಗ್ರಾಮದ ಭೂಹೀನರು ಮತ್ತು ಜಿಲ್ಲೆಯ ದಲಿತರು, ಆದಿವಾಸಿಗಳು ಬಡವರು ಹಲವಾರು ವರ್ಷಗಳಿಂದಲೂ ತುಂಡು ಭೂಮಿಗಳನ್ನು ಸಾಗುವಳಿ ಮಾಡಿಕೊಂಡು ಬದುಕು ಸವೆಸುತ್ತಿದ್ದಾರೆ. ಭೂಮಿಯ ಹಕ್ಕಿಗಾಗಿ ಅನೇಕ ಬಾರಿ ಹೋರಾಟಗಳನ್ನು ಮಾಡಿದ್ದರೂ ಇಲ್ಲಿಯವರೆಗೂ ಯಾವುದೇ ಸರ್ಕಾರಗಳಿಂದ ಸ್ಪಂದನೆ ಸಿಕ್ಕಿಲ್ಲ.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಕೊನೆಯ ಅವಧಿಯಲ್ಲಿ ಬಗರ್ ಹುಕುಂ ಸಮಿತಿ ಮುಂದೆ ಬಾಕಿಯಿರುವ ಫಾರಂ ನಂ.50-53 ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಆದೇಶ ಹೊರಡಿಸಿದರೂ ಭೂಮಂಜೂರಾತಿ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮವಾಗಿ ದಲಿತರು, ಬಡವರು, ಆದಿವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಧರಣಿನಿರತರು ಆಪಾದಿಸಿದರು.
ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ವಶಪಡಿಸಿಕೊಂಡಿರುವ ಸಿ ಮತ್ತು ಡಿ ವರ್ಗದ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ ಲ್ಯಾಂಡ್ ಬ್ಯಾಂಕಿನಲ್ಲಿರುವ ಕಂದಾಯ ಭೂಮಿಯನ್ನು ಸರ್ಕಾರ óಷರತ್ತುಗಳನ್ವಯ ಪುನಃ ವಾಪಾಸ್ ಪಡೆದುಕೊಂಡು ಈಗಾಗಲೆ ಸಾಗುವಳಿ ಮಾಡುತ್ತಿರುವವರಿಗೆ ಭೂಮಿ ಹಕ್ಕುಪತ್ರ ವಿತರಿಸಬೇಕೆಂದು ಧರಣಿನಿರತರು ಆಗ್ರಹಿಸಿದರು.
ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಭೂಮಂಜೂರಾತಿ ಸಮಿತಿಗಳನ್ನು ಕೂಡಲೆ ರಚಿಸಿ ಭೂಮಂಜೂರಾತಿ ಸಮಿತಿ ಮುಂದೆ ಬಾಕಿಯಿರುವ ಅರ್ಜಿಗಳನ್ನು ಇತ್ಯರ್ಥಪಡಿಸಿ ಭೂಮಿ ಹಕ್ಕುಪತ್ರಗಳನ್ನು ಕೊಡಬೇಕು.
ಕರ್ನಾಟಕ ಭೂಕಂದಾಯ ಕಾಯ್ದೆ 1964 ರ 94 ಸಿ ಅಡಿಯಲ್ಲಿ ನಗರ ಪ್ರದೇಶಗಳಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡವರಿಗೆ ಪುನಃ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿ ವಾಸವಿರುವ ಮನೆ ಹಾಗೂ ನಿವೇಶನಗಳನ್ನು ಸಕ್ರಮಗೊಳಿಸಿ ಹಕ್ಕುಪತ್ರಗಳನ್ನು ವಿತರಿಸಬೇಕು.
ದಲಿತರ ಎಸ್‍ಸಿಪಿಟಿಎಲ್ ಕಾಯ್ದೆಯಡಿಯಲ್ಲಿರುವ ಭೂಮಿಯನ್ನು ಬಿಡಿಸಿಕೊಡಬೇಕು. ಚಿತ್ರದುರ್ಗ ತಾಲೂಕು ಮುದ್ದಾಪುರ ಗ್ರಾಮದ ರಿ.ಸ.ನಂ. 158 ರಲ್ಲಿರುವ ಖಾತೆದಾರರ ಸ್ವಾಧೀನಕ್ಕೆ ನೀಡಬೇಕು ಎಂದು ಧರಣಿ ಕುಳಿತವರು ಪಟ್ಟು ಹಿಡಿದರು.
ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಸಂಚಾಲಕ ಶಿವಮೂರ್ತಿ ಭೀಮನಕೆರೆ, ಜಿಲ್ಲಾ ಸಂಘಟನಾ ಸಂಚಾಲಕಿ ಪಿ.ರೇಣುಕಮ್ಮ, ಎನ್.ಪ್ರಕಾಶ್, ಪಿ.ಜಯಣ್ಣ, ರಾಜಣ್ಣ, ಎನ್.ಹೊನ್ನೂರ್‍ಸ್ವಾಮಿ, ಹಿಮಂತರಾಜ್, ಸಿ.ದುರುಗಪ್ಪ, ಎಲ್.ತಿಮ್ಮಕ್ಕ, ಗೌರಮ್ಮ, ಕೆ.ಎಸ್.ಜಗದೀಶ್, ಪಿ.ಕೆ.ಪಾಪಕ್ಕ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.