ಮಕ್ಕಳಲ್ಲಿನ ಅಪೌಷ್ಠಿಕತೆ ದೂರಾಗಿಸಲು ಬಂದ ಕ್ಷೀರ ಭಾಗ್ಯಕ್ಕೆ ದಶಕದ ಸಂಭ್ರಮ

ತುಮಕೂರು:

     ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಮಾಡುವ ಬಹು ಮಹತ್ವಾಕಾಂಕ್ಷೆಯ ಕ್ಷೀರಭಾಗ್ಯ ಯೋಜನೆಗೆ ದಶಕ ತುಂಬಿದ ಸಂಭ್ರಮ. 2013 ರ ಆಗಸ್ಟ್ 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದ ಈ ಯೋಜನೆ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಪೌಷ್ಠಿಕತೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

    ಇದರ ಜೊತೆಗೆ ನಷ್ಟದ ಹಾದಿಯಲ್ಲಿದ್ದ ಹೈನೋದ್ಯಮಕ್ಕೆ ಮರು ಜನ್ಮ ನೀಡಿದ ಹೆಗ್ಗಳಿಕೆಯೂ ಕ್ಷೀರಭಾಗ್ಯಕ್ಕಿದೆ.ಕ್ಷೀರಭಾಗ್ಯ ಯೋಜನೆ ಅಸ್ತಿತ್ವಕ್ಕೆ ಬರಲು ಹಲವು ಕಾರಣಗಳಿವೆ. 2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

     ಹೊಸ ಸರ್ಕಾರ ರಚನೆಯಾದ ನಂತರ ಪ್ರಣಾಳಿಕೆಯಲ್ಲಿದ್ದ ಕೆಲವು ಯೋಜನೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳು ದಿಟ್ಟ ನಿಲುವು ಕೈಗೊಂಡರು. ಪ್ರಣಾಳಿಕೆಯ ಘೋಷಣೆಗಳನ್ನು ಜಾರಿಗೆ ತರಲು ಹೊರಟ ಸಂದರ್ಭದಲ್ಲಿಯೇ ಹೈನೋದ್ಯಮ ಸಂಕಷ್ಟದ ಹಾದಿ ಹಿಡಿದಿತ್ತು. ನಿತ್ಯ 53 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇದರಲ್ಲಿ 20 ಲಕ್ಷ ಲೀಟರ್ ಖರ್ಚಾಗದೆ ಉಳಿಯುವಂತಾಗಿತ್ತು. 29 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು, ಆಗಿನ ಕಾಲಕ್ಕೆ ಕೇವಲ10 ಲಕ್ಷ ಲೀಟರ್ ಹಾಲನ್ನು ಮಾತ್ರವೇ ಪುಡಿಯಾಗಿ ಪರಿವರ್ತಿಸುವ ವ್ಯವಸ್ಥೆಗೆ ಅವಕಾಶವಿತ್ತು.

    ಹೀಗಾಗಿ ಉಳಿಕೆಯಾಗುವ ಹೆಚ್ಚುವರಿ ಹಾಲನ್ನು ಹೊರರಾಜ್ಯಗಳಿಗೆ ಅನಿವಾರ್ಯವಾಗಿ ಕಳುಹಿಸಿಕೊಡಬೇಕಾಗಿತ್ತು. ಹೊರ ರಾಜ್ಯಗಳಿಗೆ ಹಾಲನ್ನು ಕಳುಹಿಸಿಕೊಡುವ ಹಾಗೂ ಹಾಲಿನ ಪುಡಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗಳಿಗೆ ಸಾಕಷ್ಟು ಹಣ ವ್ಯಯವಾಗುತ್ತಿತ್ತು. ಈ ಆರ್ಥಿಕ ಸಂಕಷ್ಟವನ್ನು ನಿವಾರಣೆ ಮಾಡುವುದು ಹೇಗೆ ಎಂಬುದು ಕೆ.ಎಂ.ಎಫ್. ವಲಯದಲ್ಲಿ ದೊಡ್ಡ ಸವಾಲಾಗಿ ಉಳಿಯಿತು. ಆಗ ಅಧಿಕಾರಿ ವಲಯಕ್ಕೆ ಒಂದು ಆಶಾಕಿರಣ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋಚರಿಸಿದರು.

     ಅಶಕ್ತರು, ಬಡವರ್ಗದವರಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅವರನ್ನು ಸಶಕ್ತರನ್ನಾಗಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಕಾರ್ಯ ಯೋಜನೆಗಳು ಯಶಸ್ವಿಯಾಗುತ್ತಿವೆ ಎಂಬುದು ಅಧಿಕಾರಿ ವರ್ಗಕ್ಕೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ನಷ್ಟವಾಗುವ ಹಾಲನ್ನು ಸಂರಕ್ಷಿಸುವ ಜೊತೆಗೆ ಹೈನೋದ್ಯಮವನ್ನು ಸುಸ್ಥಿತಿಯಲ್ಲಿಡುವ ಚಿಂತನೆ ಬಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದರು.

    ಸರ್ಕಾರಿ ಶಾಲಾ ಮಕ್ಕಳು ಮತ್ತು ಅಂಗನವಾಡಿ ಮಕ್ಕಳಿಗೆ ಹಾಲು ನೀಡುವ ಪ್ರಸ್ತಾಪ ಇಡುತ್ತಿದ್ದಂತೆ ಮುಖ್ಯಮಂತ್ರಿಗಳು ಹೆಚ್ಚು ಆಸಕ್ತಿ ತೋರಿದರು. ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಅಧಿಕಾರಿಗಳಿಗೆ ಗ್ರೀನ್ ಸಿಗ್ನಲ್ ನೀಡಿದರು. ಹೀಗಾಗಿ 2013ರ ಆಗಸ್ಟ್ 1 ರಿಂದ ಕರ್ನಾಟಕದಲ್ಲಿ ಒಂದು ಐತಿಹಾಸಿಕ ಎಂದೇ ಹೇಳಬಹುದಾದ ಕ್ಷೀರಭಾಗ್ಯ ಅನುಷ್ಠಾನಕ್ಕೆ ಬಂದಿತು.

      ಕ್ಷೀರಭಾಗ್ಯಕ್ಕೆ ಸರ್ಕಾರದಿಂದ ಅನುದಾನ ನೀಡುವ ಬದಲಿಗೆ ಕೆ.ಎಂ.ಎಫ್. ವತಿಯಿಂದಲೇ ಉಚಿತವಾಗಿ ಹಾಲು ಪೂರೈಸುವ ಬಗ್ಗೆ ಆರಂಭದಲ್ಲಿ ಕೆಲವು ಸಲಹೆಗಳು ಬಂದಿದ್ದವು. ಆದರೆ ಈ ವ್ಯವಸ್ಥೆ ಜಾರಿಯಾದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂಬುದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿತು. ಕೆ.ಎಂ.ಎಫ್.ನಿಂದ ಮಕ್ಕಳಿಗೆ ಉಚಿತವಾಗಿ ಹಾಲು ನೀಡಿದರೆ ಈಗಾಗಲೇ ಸಂಕಷ್ಟದಲ್ಲಿರುವ ಒಕ್ಕೂಟಗಳು ಮತ್ತಷ್ಟು ಸಂಕಟಕ್ಕೆ ಸಿಲುಕುವ ಜೊತೆಗೆ ಹಾಲು ಉತ್ಪಾದಕ ರೈತರನ್ನು ಪ್ರೋತ್ಸಾಹದಾಯಕರನ್ನಾಗಿಸುವ ವ್ಯವಸ್ಥೆಯೇ ಬುಡಮೇಲಾಗಲಿದೆ.

     ಕೃಷಿಗೆ ಪೂರಕವಾಗಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಮತ್ತು ಈ ವ್ಯವಸ್ಥೆಯನ್ನೇ ನಂಬಿ ಬದುಕುತ್ತಿರುವ ಹಾಲು ಉತ್ಪಾದಕರನ್ನು ಸಂರಕ್ಷಿಸುವ ಬಗ್ಗೆಯೂ ಅವಲೋಕನಗಳು ನಡೆದಾಗ ರೈತರ ನೆರವಿಗೆ ಬರಲು ಮುಖ್ಯಮಂತ್ರಿಗಳು ಸೂಚಿಸಿದರು.

     ಹೀಗಾಗಿ ಒಂದು ಕಡೆ ಅಪೌಷ್ಠಿಕತೆಯಿಂದ ನರಳುವ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಒಂದು ಅಮೃತದ ರೀತಿಯಲ್ಲಿ ನೆರವಾದರೆ, ಸಂಕಷ್ಟದಲ್ಲಿರುವ ಒಕ್ಕೂಟಗಳು ಮತ್ತು ರೈತರ ಹಿತ ಕಾಪಾಡುವುದು ಎರಡನೆಯ ಮಹತ್ವದ ಗುರಿಯಾಯಿತು. ಯೋಜನೆ ಜಾರಿಗೆ ಬಂದಾಗಿನಿಂದ ಸಾಕಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಮುಕ್ತರಾಗಿರುವುದನ್ನು ಶಿಕ್ಷಕರೇ ಹೇಳುತ್ತಾರೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶಿಶು ಮರಣ ಸಂಖ್ಯೆ ಹೇರಳವಾಗಿತ್ತು.

    ಆ ಭಾಗದಲ್ಲಿ ಅಪೌಷ್ಠಿಕತೆ ಹೆಚ್ಚಾಗಿತ್ತು. ಕ್ಷೀರಭಾಗ್ಯ ಜಾರಿಯಾದ ನಂತರ ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿ ವೃದ್ಧಿಯಾಗಲು ಕ್ಷೀರಭಾಗ್ಯ ಹೆಚ್ಚು ಸಹಕಾರಿಯಾಗಿದೆ.ಇಡೀ ಭಾರತದಲ್ಲಿ ಕೆಲವು ಮಹತ್ವದ ಯೋಜನೆಗಳಿಗೆ ಕರ್ನಾಟಕವೇ ಮಾದರಿ. ಅಂತಹ ವಿಶೇಷ ಯೋಜನೆಗಳನ್ನು ಇಲ್ಲಿ ಹಿಂದಿನಿಂದಲೂ ಜಾರಿಗೆ ತರಲಾಗುತ್ತಿದೆ. ಕ್ಷೀರಭಾಗ್ಯ ಅನುಷ್ಠಾನವು ದೇಶದಲ್ಲೇ ಮೊದಲು. ಇಲ್ಲಿನ ಯೋಜನೆಯನ್ನು ಬಹಳಷ್ಟು ರಾಜ್ಯಗಳು ಮತ್ತು ವಿವಿಧ ವಲಯಗಳ ತಜ್ಞರು ಕೊಂಡಾಡಿದ್ದಾರೆ.

    ಆರಂಭದಲ್ಲಿ ಈ ಯೋಜನೆ ವಾರದಲ್ಲಿ ಮೂರು ದಿನಗಳಿಗೆ ಸೀಮಿತವಾಗಿತ್ತು. ಒಂದರಿಂದ ಹತ್ತನೇ ತರಗತಿಯ ಶಾಲಾ ಮಕ್ಕಳಿಗೆ ತಲಾ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯನ್ನು 150 ಮಿಲಿ ಲೀಟರ್ ಪ್ರಮಾಣದೊಂದಿಗೆ ನೀಡಲಾಗುತ್ತಿತ್ತು. ಇದರ ಸದ್ಬಳಕೆ ಮತ್ತು ಅರ್ಥಪೂರ್ಣ ಯೋಜನೆ ಎಂಬುದನ್ನು ಮನದಟ್ಟು ಮಾಡಿಕೊಂಡ ಮುಖ್ಯಮಂತ್ರಿಗಳು ಸರ್ಕಾರಕ್ಕೆ ಮೂರು ವರ್ಷ ತುಂಬಿದ ಅವಧಿಯಲ್ಲಿ (2016) ವಾರದ ಎಲ್ಲ ದಿನವೂ ಕ್ಷೀರಭಾಗ್ಯ ಯೋಜನೆಯಡಿ ಹಾಲು ಪೂರೈಸಲು ಸೂಚಿಸಿದ್ದರು.

    ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಕಾರಣ ಮತ್ತು ಸ್ಪಷ್ಟತೆ ತುಂಬ ಮಹತ್ವದ್ದು. ಅಪೌಷ್ಠಿಕತೆ ಕಡಿಮೆ ಮಾಡುತ್ತಿರುವ ಹಾಗೂ ಶಾಲೆಯ ಹಾಜರಾತಿಯಲ್ಲಿ ಹೆಚ್ಚಿಸುತ್ತಿರುವ ಈ ಯೋಜನೆಗೆ ಸರ್ಕಾರ ಅನುದಾನ ನೀಡಿದರೆ ಅದು ವ್ಯರ್ಥವಾಗುವುದಿಲ್ಲ. ಬದಲಿಗೆ ಸದ್ವಿನಿಯೋಗವಾಗುತ್ತದೆ. ಕ್ಷೀರಭಾಗ್ಯದಿಂದ ಹಾಲು ಉತ್ಪಾದಕರಿಗೂ ಮಾರುಕಟ್ಟೆ ದೊರತಿದೆ.

    ಇದರಿಂದ ಹಾಲು ಕೃಷಿಕರಿಗೆ ಪ್ರತಿ ಲೀಟರ್ ಹಾಲಿಗೆ 4 ರೂ. ಪ್ರೋತ್ಸಾಹ ಧನ ನೀಡುವ ಕ್ಷೀರಧಾರೆ ಯೋಜನೆಯೂ ಯಶಸ್ಸು ಕಾಣಲಿದೆ ಎಂದಿದ್ದರು.ಇಡೀ ದಕ್ಷಿಣ ಭಾರತದಲ್ಲೇ ಕರ್ನಾಟಕದಲ್ಲಿ ಹಸಿವು ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಕೈಗೊಂಡ ಯೋಜನೆಗಳು ಗಮನಾರ್ಹ. ಅವುಗಳಲ್ಲಿ ಅನ್ನಭಾಗ್ಯ ಯೋಜನೆ ಇಡೀ ದೇಶದ ಗಮನ ಸೆಳೆದಿದೆ. ಹೆಚ್ಚು ಸಂಖ್ಯೆಯಲ್ಲಿದ್ದ ಬಡವರನ್ನು ಬಡತನದಿಂದ ವಿಮುಕ್ತರನ್ನಾಗಿಸುವ, ಹಸಿವಿನಿಂದ ನರಳುವವರನ್ನು ಹಸಿವು ಮುಕ್ತರನ್ನಾಗಿಸುವ ಯೋಜನೆ ಅರ್ಥಪೂರ್ಣವಾದಂತೆ ಕ್ಷೀರ ಭಾಗ್ಯವೂ ಇಲ್ಲಿ ಹೆಚ್ಚು ಅರ್ಥಪೂರ್ಣಗೊಂಡಿತು.

    ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತು ವಿದ್ಯಾಸಿರಿ ಯೋಜನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿಯ ಪ್ರಗತಿಗಾಮಿ ಯೋಜನೆಗಳು. ಇವೆಲ್ಲ ಅವರ ಸ್ವಂತ ಅನುಭವದ ಮೂಸೆಯಿಂದಲೇ ಮೂಡಿಬಂದಂತಹ ಕಾರ್ಯಕ್ರಮಗಳು. ಇಂತಹ ಯೋಜನೆಗಳನ್ನು ಕೇಳಿ, ನೋಡಿದವರು ಬಾಯಿಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap