ಮಕ್ಕಳಲ್ಲಿ ಜ್ಞಾನ ತುಂಬಿ ಸುಂದರ ಬದುಕು ಕಟ್ಟಿಕೊಡಿ

ದಾವಣಗೆರೆ :

      ಶಿಕ್ಷಣ ಎಂದರೆ, ಜ್ಞಾನ ಸಂಪಾದನೆಯಾಗಿದ್ದು, ಶಿಕ್ಷಕರು ಮಕ್ಕಳಲ್ಲಿ ಜ್ಞಾನ ತುಂಬುವ ಮೂಲಕ ಮಕ್ಕಳ ಬದುಕು ಸುಂದರಗೊಳಿಸುವ ಪ್ರಯತ್ನ ಮಾಡಬೇಕೆಂದು ಚಿತ್ರದುರ್ಗ ಎಸ್‍ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಸಲಹೆ ನೀಡಿದರು.

       ನಗರದ ಮಾಗನೂರು ಬಸಪ್ಪ ಸಭಾಭವನದಲ್ಲಿ ಶನಿವಾರ ಡಾ.ಹೆಚ್.ವಿ.ವಾಮದೇವಪ್ಪ ಚಾರಿಟಬಲ್ ಮತ್ತು ಎಜುಕೇಷನಲ್ ಟ್ರಸ್ಟ್‍ನ ಉದ್ಘಾಟನೆ ಮತ್ತು ಟ್ರಸ್ಟ್‍ನಿಂದ ನೀಡುವ ‘ಗುರುಚೇತನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗುವ ಗೊಂದಲಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಂಘಟನಾತ್ಮಕ ಹೋರಾಟ ನಡೆಸಬೇಕಾಗಿದೆ. ಈ ದಿಸೆಯಲ್ಲಿ ಅನೇಕ ಆಶಯಗಳನ್ನು ಹೊತ್ತು ಡಾ.ಹೆಚ್.ವಿ.ವಾಮದೇವಪ್ಪ ಚಾರಿಟಬಲ್ ಮತ್ತು ಎಜುಕೇಷನಲ್ ಟ್ರಸ್ಟ್ ಜನ್ಮ ತಳೆದಿರುವುದು ಅತ್ಯಂತ ಸಂತೋಷಕರ ಸಂಗತಿಯಾಗಿದೆ. ಈ ಟ್ರಸ್ಟ್ ಶಿಕ್ಷಣ ರಂಗದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವ ಮೂಲಕ ಇತರೆ ಸಂಸ್ಥೆಗಳಿಗೆ ದಾರಿ ದೀಪವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

      ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿನ ಕೆಲ ಅವಾಂತರಗಳನ್ನು ನೋಡಿದರೆ, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯು ಹಲವು ಸಂಕೋಲೆಗಳನ್ನು ಹೊಂದಿರುವ ಕಾರಣಕ್ಕೆ ಗಟ್ಟಿಯಾಗಿ ಮಾತನಾಡುವುದು ಅಸಾಧ್ಯವಾಗಿದೆ. ಆ ಕ್ಷೇತ್ರದಿಂದ ಹೊರ ನಂತರವಷ್ಟೆ ಆ ಸಮಸ್ಯೆಗಳ ಬಗ್ಗೆ ಮಾತನಾಡಲು ಸಾಧ್ಯ. ಈ ನಿಟ್ಟಿನಲ್ಲಿ ಟ್ರಸ್ಟ್ ಪ್ರಶಿಕ್ಷಣಾರ್ಥಿಗಳು ಹಾಘೂ ವಿದ್ಯಾರ್ಥಿಗಳ ಪರವಾಗಿ ಗಟ್ಟಿ ಧ್ವನಿ ಎತ್ತುವ ಮೂಲಕ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಒದುಗಿಸಲು ವೇದಿಕೆಯಾಗಿ ಕಾರ್ಯನಿರ್ವಗಿಸಬೇಕೆಂದು ಸಲಹೆ ನೀಡಿದರು.

      ಪ್ರಶಿಕ್ಷಣಾರ್ಥಿಗಳು ಎರಡು ವರ್ಷ ವ್ಯಾಸಂಗ ಮಾಡಿದರೂ ಉದ್ಯೋಗ ಭದ್ರತೆ ಇಲ್ಲವಾಗಿದೆ. ಆದ್ದರಿಂದ ಸಾವಿರಾರು ಪ್ರಶಿಕ್ಷಣಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಎರಡು ವರ್ಷಗಳ ಕಾಲ ತಮ್ಮ ಉದ್ಯೋಗಕ್ಕೆ ಬೇಕಾದ ಜ್ಞಾನ ಪಡೆಯುವ ಪ್ರಶಿಕ್ಷಣಾರ್ಥಿಗಳೀಗೆ ಸರ್ಕಾರಗಳು ಉದ್ಯೋಗ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

      ಹಲವು ಹುದ್ದೆಗಳಿಗೆ ಸರ್ಕಾರ ನೇಮಕಾತಿ ಮಡಿಕೊಂಡ ಮೇಲೆ ತರಬೇತಿ ನೀಡುತ್ತದೆ. ಆದರೆ, ಉದ್ಯೋಗಕ್ಕಿಂತ ಮೊದಲು ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳನ್ನು ಕಡೆಗಣಿಸಲಾಗುತ್ತಿದೆ. ಇಂಥ ವೈವಿದ್ಯಮಯ ಅಂಶಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕಾಗಿದೆ ಎಂದರು.

     ಈ ಸಂದರ್ಭದಲ್ಲಿ ಮೈಸೂರಿನ ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾನಿಲಯದ ಡಾ.ಹೆಚ್.ಎನ್. ವಿಶ್ವನಾಥ ಅವರಿಗೆ ‘ಗುರುಚೇತನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಟ್ರಸ್ಟ್‍ನ ಅಧ್ಯಕ್ಷ ಪ್ರೊ.ಹೆಚ್.ಎಸ್. ಶಾಂತವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‍ನ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು , ವಿಶ್ರಾಂತ ಪ್ರಾಚಾರ್ಯ ಡಾ.ಹೆಚ್.ವಿ.ವಾಮದೇವಪ್ಪ ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ಬಸವರಾಜ ಸೋಮನಹಳ್ಳಿ ಸ್ವಾಗತಿಸಿದರು. ನಿರ್ದೇಶಕ ಶಿವರಾಜ ಕಬ್ಬೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧ್ಯಕ್ಷ ವೈ.ಎಂ. ವಿಠ್ಠಲ್‍ರಾವ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap