ಮಕ್ಕಳಿಗೆ ಸಾಮಾಜಿಕ ನಡೆವಳಿಕೆ ಕಲಿಸುವುದು ಅನಿವಾರ್ಯ

ತುಮಕೂರು:

ಮಕ್ಕಳು ಅದರಲ್ಲಿಯೂ ಹದಿ ಹರಯದ ಮಕ್ಕಳು ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಸಿದ್ದಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇಂದು ಹಮ್ಮಿಕೊಂಡಿರುವ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಕೌಶಲ್ಯಾಭಿವೃದ್ದಿ ಕುರಿತ ಕಾರ್ಯಾಗಾರ ಅತ್ಯಂತ ಉಪಯುಕ್ತ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.

ನಗರದ ಬಸವೇಶ್ವರ ಶಾಲಾ ಮೈದಾನದಲ್ಲಿರುವ ಶ್ರೀಸಿದ್ದಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯಿಂದ ಆಯೋಜಿಸಿದ್ದ ಮಕ್ಕಳ ವೈದ್ಯ ವೃತ್ತಿಯಲ್ಲಿ ನಿರತವಾಗಿರುವವರ ಕೌಶಲ್ಯಾಭಿವೃದ್ದಿ ಕಾರ್ಯಗಾರ ಉದ್ಘಾಟಿಸಿ ಮಾತನಾಡುತಿದ್ದ ಅವರು,ಮಕ್ಕಳಿಗೆ ಶಾಲೆಯಲ್ಲಿ ಕಲಿಯುವುದು ಎಷ್ಟು ಮುಖ್ಯವಿರುತ್ತದೆಯೋ, ಅದಕ್ಕಿಂತಲೂ ಹೆಚ್ಚು,ಮನೆಯಲ್ಲಿ,ತಾವು ಬೆಳೆಯುವ ಪರಿಸರದಿಂದ ಕಲಿಯುತ್ತಾರೆ.ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ, ಸ್ನೇಹಿತರೊಂದಿಗೆ,ಮನೆಯ ತಂದೆ,ತಾಯಿ,ಗುರು,ಹಿರಿಯರು,ಅಣ್ಣ ತಮ್ಮಂದಿರ ಜೊತೆಗೆ ಮಕ್ಕಳ ನಡವಳಿಕೆ ಹೇಗಿರಬೇಕು ಎಂಬುದನ್ನು ಅಗತ್ಯವಾಗಿ ಹೇಳಿಕೊಡಬೇಕಾಗಿದೆ.ಈ ನಿಟ್ಟಿನಲ್ಲಿ ಈ ಕಾರ್ಯಾಗಾರ ಅತ್ಯಂತ ಪ್ರಮುಖವಾದುದ್ದು ಎಂದರು.

ಇಂದಿನ ಸೋಷಿಯಲ್ ಮೀಡಿಯಾಗಳು ಮಕ್ಕಳನ್ನು ಅದರಲ್ಲಿಯೂ ಹದಿ ಹರೆಯದ ಮಕ್ಕಳನ್ನು ಹಾದಿ ತಪ್ಪಿಸುತ್ತಿವೆ. ಈ ಬಗ್ಗೆ ಶಿಕ್ಷಕರಿಗಿಂತ ಹೆಚ್ಚಾಗಿ ತಂದೆ ತಾಯಿಗಳು ಅತ್ಯಂತ ಜಾಗರೂಕತೆ ವಹಿಸಬೇಕಾಗಿದೆ.ವಯಸ್ಸಿಗೆ ಬಂದ ಮಕ್ಕಳನ್ನು ಎದುರು ಹಾಕಿಕೊಳ್ಳದೆ ಅವರನ್ನು ನಯವಾಗಿ ನಮ್ಮ ದಾರಿಗೆ ತಂದುಕೊಂಡು,ಒಳ್ಳೆಯದು,ಕೆಟ್ಟದ್ದರ ಪರಿಚಯ ಮಾಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮನೋರೋಗ ತಜ್ಞರಾದ ಡಾ.ಬಂಡಾರಿ ಅವರು ಮಕ್ಕಳು ಓದಿನ ಕಡೆಗೆ ಗಮನಹರಿಸುವಂತೆ ಮಾಡುವುದು ಹೇಗೆ, ಓದಿನಲ್ಲಿ ಆಸಕ್ತಿ ಹೆಚ್ಚಿಸುವುದು ಹೇಗೆ ಎಂಬ ಬಗ್ಗೆ ವಿವರಿಸಿದರೆ, ಬಾಗಲಕೋಟೆಯ ವೈದ್ಯ ಡಾ.ಯತೀಶ್ ಎಂ.ಪೂಜಾರ,ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡುವ ಬಗ್ಗೆ ಮಾಹಿತಿ ನೀಡಿದರು.ಸ್ತ್ರೀರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಮಕ್ಕಳಲ್ಲಿ ಆರೋಗ್ಯಕರ ಲೈಂಗಿಕ ವಿಚಾರಗಳ ಕುರಿತು ಮಾಹಿತಿ ನೀಡಿದರು.

ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್ ಸ್ವಾಗತಿಸಿದರು. ವೇದಿಕೆಯಲ್ಲಿ ಮಕ್ಕಳ ವೈದ್ಯರ ಅಕಾಡೆಮಿ ತುಮಕೂರು ಜಿಲ್ಲಾಧ್ಯಕ್ಷ ಡಾ.ರಂಗಸ್ವಾಮಿ,ಕಾರ್ಯದರ್ಶಿ ಡಾ.ಈಶ್ವರ್ ಎ.ಮಾಕಂ ಮತ್ತಿತರರು ಭಾಗವಹಿಸಿದ್ದರು.ವಿವಿಧ ಆಸ್ಪತ್ರೆಗಳ ಮಕ್ಕಳ ವೈದ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link