ಹಿರಿಯೂರು :
ಬಡ ಕುಟುಂಬದಲ್ಲಿ ಹುಟ್ಟಿ ಇಚ್ಚಾಶಕ್ತಿ, ಕ್ರಿಯಾಶಕ್ತಿ ಹಾಗೂ ಜ್ಞಾನಶಕ್ತಿ ಹೊಂದಿದ್ದರೆ ಎಂತಹ ಸಾಧನೆ ಬೇಕಾದರು ಮಾಡಬಹುದು ಎಂಬುದಕ್ಕೆ ಸಾಕ್ಷಿಯಾದ ಶಿಕ್ಷಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಹಾಗೂ ಉಪ ರಾಷ್ಟ್ರಪತಿ ಡಾ.ಸರ್ವಪಲ್ಲಿರಾಧಕೃಷ್ಣನ್ ಎಂದು ಮಾಜಿ ಶಾಸಕ ಆರ್.ರಾಮಯ್ಯ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜು ಹಾಗೂ ಗೌತಮ್ ಅಕಾಡೆಮಿ ಶಾಲೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿದ್ಯೆಯೆ ಮಹಾ ಸಂಪತ್ತು ಹಾಗೂ ಶಕ್ತಿ. ಶ್ರದ್ದೆ, ಏಕಾಗ್ರತೆಯಿಂದ ವ್ಯಾಸಂಗ ಮಾಡಿದರೆ ಉನ್ನತ ಸ್ಥಾನಕ್ಕೆ ಹೋಗಬಹುದು. ಇಂದಿನ ಟಿವಿ, ಮೊಬೈಲ್ ಮುಂತಾದ ಹವ್ಯಾಸಗಳಿಂದ ದೂರವಿದ್ದು, ಡಾ.ಬಿ.ಆರ್.ಅಂಬೇಡ್ಕರ್, ಸರ್.ಎಂ.ವಿಶ್ವೇವೇಶ್ವರಯ್ಯ ಹಾಗೂ ಡಾ.ರಾಧಕೃಷ್ಣನ್ ಮುಂತಾದ ಮಹಾನ್ ವ್ಯಕ್ತಿಗಳ ಆದರ್ಶ ಹಾಗೂ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.
ತಾಪಂ ಸದಸ್ಯ ಓಂಕಾರಪ್ಪ ಮಾತನಾಡಿ ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ ಶಿಕ್ಷಣ ಪೇಮಿ ಡಾ.ರಾಧಕೃಷ್ಣನ್. ವಿದ್ಯಾರ್ಥಿಗಳಿಗೆ ರಾಷ್ಟ್ರ, ಸಮಾಜವನ್ನು ಬದಲಾವಣೆ ಮಾಡುವಂತಹ ಶಕ್ತಿಯನ್ನು ತುಂಬುವ ಹಾಗೂ ಸಾಮಥ್ರ್ಯ ಬೆಳೆಸುವಂತಹ ಸೇವೆಯನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ ಎಂದರು. ವಕೀಲ ರಾಜಣ್ಣ ಮಾತನಾಡಿ ಭವಿಷ್ಯತ್ತಿನ ದೇಶವನ್ನು ರೂಪಿಸುವಂತಹ ವಿದ್ಯಾರ್ಥಿಗಳನ್ನು ಸಿದ್ದಗೊಳಿಸುವಂತಹ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತಿರುವವರು ಶಿಕ್ಷಕರು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ ಸರ್ವರಿಗೂ ಶಿಕ್ಷಣ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಸ್ತ್ರ ಇಂದು ಪ್ರತಿಯೊಬ್ಬರು ಸಮಾನವಾಗಿ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಕಾಲೇಜಿನ ಯಶಸ್ವಿಗೆ ಸಿಬ್ಬಂದಿಯ ಶ್ರಮವೇ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಗಣೇಶ್, ಉಪನ್ಯಾಸಕರಾದ ಕೆ.ರಂಗಪ್ಪ, ಶಾಂತಕುಮಾರ್, ಪ್ರಕಾಶ್, ಮಂಜು, ರಜಾಕ್ಸಾಬ್, ಎಚ್.ಆರ್.ಲೋಕೇಶ್, ಈ.ನಾಗೇಂದ್ರಪ್ಪ, ಮುಖ್ಯಶಿಕ್ಷಕಿ ವೈಶಾಲಿ, ಸುನೀತಕುಮಾರಿ, ತ್ರಿವೇಣಿ, ಜಯಶೀಲ, ಪ್ರಿಯಾಂಕ, ಅಂಬುಜಾ, ಇತರರು ಉಪಸ್ಥಿತರಿದ್ದರು.