‘ಮಕ್ಕಳ ಸಾಧನೆ ಪೋಷಕರ ಹೆಮ್ಮೆ’

ತುಮಕೂರು  :

              “ಎಲ್ಲ ತಂದೆತಾಯಿ ಹಾಗೂ ಗುರುಗಳು ತಮ್ಮಿಂದ ತಮ್ಮ ಮಕ್ಕಳು ಗುರುತಿಸಲ್ಪಡುವುದಕ್ಕಿಂತ ತಾವು ತಮ್ಮ ಮಕ್ಕಳಿಂದ ಗುರುತಿಸಲ್ಪಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಮಕ್ಕಳ ಸಾಧನೆ ಪೋಷಕರಿಗೆ ಹೆಮ್ಮೆಯ ಸಂಗತಿ. ಅವರ ಆ ಸಾತ್ತ್ವಿಕ ಬಯಕೆಯನ್ನು ಸಾರ್ಥಕ ರೀತಿಯಲ್ಲಿ ನೆರವೇರಿಸಿಕೊಡುವುದು ವಿದ್ಯಾರ್ಥಿಗಳ ಜವಾಬ್ದಾರಿ. ಅದನ್ನು ನೀವೆಲ್ಲರೂ ಖಂಡಿತವಾಗಿ ಸಾಧಿಸಬಲ್ಲಿರಿ. ವಿದ್ಯಾರ್ಥಿ ಜೀವನ ಇದಕ್ಕೆ ಅತ್ಯಂತ ಸೂಕ್ತವಾದ ಸನ್ನಿವೇಶ. ವಿದ್ಯಾರ್ಥಿ ಜೀವನವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು,” ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀರವರು ನುಡಿದರು.

                   ಅವರು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ‘ಚಿಕಾಗೋ ಉಪನ್ಯಾಸ’ದ 125ನೇ ವರ್ಷದ ಸಂಸ್ಮರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
                   ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ಡಾ. ಗೀತಾ ವಸಂತ್‍ರವರು, “ಸ್ವಾಮಿ ವಿವೇಕಾನಂದರ ವಾಣಿ ಸಿಂಹವಾಣಿ, ಧೀರವಾಣಿ. ಅವರ ಸಂದೇಶಗಳು ಇಂದು ಅತ್ಯಂತ ಆವಶ್ಯಕವಾಗಿ ಬೇಕಾಗಿದೆ. ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದಲ್ಲಿ ಚುಂಬಕ ಶಕ್ತಿಯಿದೆ. ಪ್ರತಿಯೊಬ್ಬರಲ್ಲಿಯೂ ಸ್ಫೂರ್ತಿಯನ್ನು ತುಂಬುವ, ಉನ್ನತ ಆದರ್ಶದೆಡೆಗೆ ಸೆಳೆಯುವ ಒಂದು ಶಕ್ತಿಯಿದೆ. ಅಂತಹ ಸಂದೇಶಗಳಿಂದ ಪ್ರೇರೇಪಿತವಾದ ಧನಾತ್ಮಕ ಆಲೋಚನೆಗಳು ಮಾತ್ರ ದೇಶದ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಾಧ್ಯ,” ಎಂದು ಅಭಿಪ್ರಾಯಪಟ್ಟರು.
                   “ಉನ್ನತ ವಿಚಾರಗಳ ಅಧ್ಯಯನ, ಶ್ರವಣ, ಸಜ್ಜನರೊಂದಿಗಿನ ಒಡನಾಟ, ಉತ್ತಮ ಆಲೋಚನೆಗಳು, ಅವುಗಳ ಪ್ರಸರಣ ಇವೆಲ್ಲವುಗಳಿಂದ ರಾಷ್ಟ್ರೋತ್ಥಾನ ತನ್ನಿಂದ ತಾನೇ ಸಾಧ್ಯವಾಗುತ್ತದೆ. ಶ್ರೇಷ್ಠ ಚಿಂತನೆಗಳನ್ನು ಭಾವಿಸಿ ಅಂತರ್ಗತ ಮಾಡಿಕೊಂಡು ನಡೆನುಡಿಗಳಲ್ಲಿ ಅವು ಪ್ರತಿಫಲಿಸುವಂತಾದರೆ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ,” ಎಂದು ಖ್ಯಾತ ಶಿಕ್ಷಣತಜ್ಞ ಶ್ರೀ ಸಿ.ವಿ.ಎನ್. ಮೂರ್ತಿರವರು ನುಡಿದರು.

                    ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ಇಂದಿನ ಅಗತ್ಯ ಜೀವನೋಪಾಯದ ಶಿಕ್ಷಣವಲ್ಲ, ಜೀವನ ಕಲೆಯ ಶಿಕ್ಷಣ” ಎಂಬ ವಿಷಯದ ಕುರಿತು ನೆರವೇರಿದ ಕನ್ನಡ ಚರ್ಚಾಸ್ಪರ್ಧೆಯಲ್ಲಿ ಶಿರಾ ನಗರದ ‘ದಿ ಪ್ರೆಸಿಡೆನ್ಸಿ ಪಬ್ಲಿಕ್ ಸ್ಕೂಲ್’ನ ಚಿ.ಸುಭಾಷ್ ಚಂದ್ರ ಮತ್ತು ಚಿ.ವಿವೇಕ್ ಜೋಷಿ ಕ್ರಮವಾಗಿ ಪ್ರಥಮ ಹಾಗೂ ತೃತೀಯ ಬಹುಮಾನಗಳನ್ನು ಗೆದ್ದು ತಮ್ಮ ಶಾಲೆಗೆ ಪರ್ಯಾಯ ಪಾರಿತೊಷಕವನ್ನು ಪಡೆದುಕೊಂಡರು. ತಿಪಟೂರಿನ ‘ಕಲ್ಪತರು ಸೆಂಟ್ರಲ್ ಸ್ಕೂಲ್’ನ ಕು. ಯುಕ್ತಿ ಸಾಹಿತ್ಯ ದ್ವಿತೀಯ ಬಹುಮಾನವನ್ನು ಪಡೆದರು.
ಕಾಲೇಜು ವಿದ್ಯಾರ್ಥಿಗಳಿಗೆ “ಚಾರಿತ್ರ್ಯ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ” ಎಂಬ ವಿಷಯದ ಕುರಿತು ನೆರವೇರಿದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ತುಮಕೂರಿನ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ಕು.ಸುಶ್ರಿತಾ ಭಾರದ್ವಾಜ್ ಪ್ರಥಮ ಬಹುಮಾನ ಪಡೆದು ಪರ್ಯಾಯ ಪಾರಿತೋಷಕವನ್ನು ತಮ್ಮ ಕಾಲೇಜಿಗೆ ದಕ್ಕಿಸಿಕೊಟ್ಟರು.

                   ತುಮಕೂರಿನ ಮಹೇಶ್ ಪದವಿಪೂರ್ವ ಕಾಲೇಜಿನ ಕು.ಮೇಘರವರು ದ್ವಿತೀಯ ಬಹುಮಾನ ಹಾಗೂ ಸರ್ವೋದಯ ಪಿ.ಯು. ಕಾಲೇಜಿನ ಚಿ.ಸುಬ್ರಹ್ಮಣ್ಯ ನಾವಡ ತೃತೀಯ ಬಹುಮಾನ ಪಡೆದುಕೊಂಡರು.
“ದೀನ-ದುರ್ಬಲರ ಏಳಿಗೆ ಧಾರ್ಮಿಕ ಪ್ರಜ್ಞೆಯಿಂದ ಸಾಧ್ಯ” ಎಂಬ ವಿಷಯದ ಕುರಿತು ಸಾರ್ವಜನಿಕರಿಗಾಗಿ ನೆರವೇರಿದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಶ್ರೀ ಜಿ.ಎಸ್. ಶ್ರೀನಿವಾಸಮೂರ್ತಿರವರು ಪ್ರಥಮ, ಡಾ. ಎನ್. ನಾಗಭೂಷಣ್‍ರವರು ದ್ವಿತೀಯ ಹಾಗೂ ಶ್ರೀಮತಿ ದಾಕ್ಷಾಯಿಣಿರವರು ತೃತೀಯ ಬಹುಮಾನ ಪಡೆದುಕೊಂಡರು.
                   ಪ್ರತಿಯೊಂದು ವಿಭಾಗದಲ್ಲಿಯೂ ಹನ್ನೆರಡು ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು. ಸುಮಾರು 92(ತೊಂಬತ್ತೆರಡು) ಪ್ರೌಢಶಾಲಾ ವಿದ್ಯಾರ್ಥಿಗಳು, 60(ಅರವತ್ತು) ಕಾಲೇಜು ವಿದ್ಯಾರ್ಥಿಗಳು ಹಾಗೂ 25(ಇಪ್ಪತ್ತೈದು) ಮಂದಿ ಸಾರ್ವಜನಿಕರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಪೂಜ್ಯ ಸ್ವಾಮಿ ಪ್ರಣವಾನಂದಜೀ ಹಾಗೂ ಪೂಜ್ಯ ಸ್ವಾಮಿ ಧೀರಾನಂದಜೀ ಮತ್ತು ಪ್ರೊ. ಚಂದ್ರಣ್ಣರವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link