ಮೈಸೂರು:
ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ನಿನ್ನೆ ಮಂಗಳವಾರ ಜೈಲಿನಿಂದ ಬಿಡುಗಡೆ ಆಗಿ ತಮ್ಮ ತಂದೆ ಹೆಚ್ ಡಿ ದೇವೇಗೌಡ ನಿವಾಸಕ್ಕೆ ಆಗಮಿಸಿ ತಂದೆ-ತಾಯಿ ಕಾಲಿಗೆ ನಮಸ್ಕರಿಸಿ ಮಾತುಕತೆ ನಡೆಸಿದ ನಂತರ ಸಾಯಂಕಾಲ ಟೆಂಪಲ್ ರನ್ ನಡೆಸಿದ್ದಾರೆ.
ಬಸವನಗುಡಿಯಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತದನಂತರ ಬನಶಂಕರಿಯ ತಮ್ಮ ನಿವಾಸಕ್ಕೆ ಆಗಮಿಸಿ ಅಲ್ಲಿಯೂ ಸಹ ದೇವರ ಪ್ರಾರ್ಥನೆ ಮಾಡಿದರು. ಬಳಿಕ ಅಲ್ಲಿಂದ ನೇರವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡಿನ ದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿ ವಿದೇಶದಲ್ಲಿ ತಲೆಮರೆಸಿ ಕೊಂಡಿರುವ ಪುತ್ರ ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದರು. ಕುಟುಂಬದ ಪ್ರತಿಯೊಬ್ಬರ ಹೆಸರು ಹಾಗೂ ನಕ್ಷತ್ರ ಹೇಳಿ ಅರ್ಚನೆ ಮಾಡಿಸಿದರು. ಬಳಿಕ ದೇವಾಲಯದಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಏಕಾಂಗಿಯಾಗಿ ಕುಳಿತು ದೇವಿಗೆ ಪ್ರಾರ್ಥನೆ ಮಾಡಿದರು.
ತಾಯಿ ಚಾಮುಂಡಿಗೆ ಎಲ್ಲವನ್ನೂ ಬಿಟ್ಟು ಬಿಟ್ಟೀದ್ದೀನಿ:ದೇಗುಲದಿಂದ ಹೊರಬಂದು ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಿದಾಗ, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಈ ಬಗ್ಗೆ ಮಾತನಾಡುವುದಿಲ್ಲ. ನನಗೆ ನ್ಯಾಯಾಂಗದ ಮೇಲೆ ಗೌರವವಿದೆ. ತಾಯಿ ಚಾಮುಂಡಿಯ ದರ್ಶನ ಮಾಡಿದ್ದೇನೆ. ನನಗೆ ದೇವರು ಮತ್ತು ಈ ರಾಜ್ಯದ ಜನತೆ ಮೇಲೆ ನಂಬಿಕೆಯಿದೆ ಎಂದರು.
40 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೇನೆ. ಇದೇ ಮೊದಲು ನ್ಯಾಯಾಲಯದಲ್ಲಿ ನನ್ನ ಕೇಸು ದಾಖಲಾಗಿರುವುದು. ನ್ಯಾಯಾಂಗದ ಮೇಲೆ ನಂಬಿಕೆಯಿರಿಸಿದ್ದೇನೆ. ತಾಯಿ ಚಾಮುಂಡೇಶ್ವರಿಗೆ ಎಲ್ಲವನ್ನೂ ಬಿಟ್ಟಿದ್ದೇನೆ ಎಂದರು.
