ಶಿರಾ :
ಹೆರಿಗೆಗೆಂದು ತವರಿಗೆ ಹೋದ ನಂತರ ತನ್ನ ಮಡದಿಯನ್ನು ಒಮ್ಮೆಯೂ ತಿರುಗಿ ನೋಡದ ಪತಿಯ ಮನೆಯ ಮುಂದೆ ಮಡದಿಯೊಬ್ಬರು ಗಂಡ ಬೇಕೆಂದು ಹಠ ಹಿಡಿದು ಧರಣಿಗೆ ಕುಳಿತ ಪ್ರಸಂಗವೊಂದು ತಾಲ್ಲೂಕಿನ ಹೊನ್ನಗೊಂಡನಹಳ್ಳಿ ಗ್ರಾಮದ ಅಪ್ಪಿಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಅಪ್ಪಿಹಳ್ಳಿ ಗ್ರಾಮದ ಚಂದ್ರಶೇಖರ್ ಎಂಬ ವ್ಯಕ್ತಿಯೊಂದಿಗೆ 2021ರಲ್ಲಿ ಶೋಭಾ ಎನ್ನುವವರ ವಿವಾಹ ನಡೆದಿತ್ತು. ಒಂದು ವರ್ಷದ ನಂತರ ಶೋಭಾ ಗರ್ಭಿಣಿಯಾಗಿ ಸೀಮಂತ ಕಾರ್ಯಕ್ರಮ ಮುಗಿಸಿಕೊಂಡು, ಹೆರಿಗೆಗೆಂದು ತವರಿಗೆ ಹೋಗಿದ್ದರು ಎನ್ನಲಾಗಿದೆ. ಆದರೆ ತವರಿನಲ್ಲಿದ್ದ ಹೆಂಡತಿ ಮತ್ತು ಮಗುವನ್ನು ನೋಡಲಿಕ್ಕಾಗಲಿ, ಮಾತನಾಡಿಸಲಾಗಲಿ ಆಕೆಯ ಪತಿ ಚಂದ್ರಶೇಖರ್ ಹೋಗಲೇ ಇಲ್ಲ. ಪತ್ನಿಯ ದೂರವಾಣಿ ಕರೆಯನ್ನು ಆತ ಸ್ವೀಕರಿಸದಂತಾಗಿಬಿಟ್ಟ. ಅಷ್ಟೇ ಅಲ್ಲದೆ ಗಂಡನ ತಂದೆ-ತಾಯಿಗಳು ಸಹ ಈಕೆಯನ್ನು ಮನೆಗೆ ಬಿಟ್ಟುಕೊಳ್ಳದಂತಾಗಿಬಿಟ್ಟರು.
ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಕಾಣದ ಶೋಭಾ, ಕೊನೆಗೆ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋದಳು. ಸಾಂತ್ವನ ಕೇಂದ್ರದಿAದ ನೋಟೀಸ್ ಜಾರಿಯಾದರೂ ಆಕೆಯ ಪತಿ ಮಾತ್ರ ಯಾವುದಕ್ಕೂ ಸೊಪ್ಪು ಹಾಕಲೇ ಇಲ್ಲ.
ಕೊನೆಗೆ ಬೇರೆ ದಾರಿ ಕಾಣದೆ ತನ್ನ ಪತಿಯ ಗ್ರಾಮವಾದ ಹೊನ್ನಗೊಂಡನಹಳ್ಳಿಗೆ ತನ್ನ ಮಗು ಹಾಗೂ ಹೆತ್ತವರೊಂದಿಗೆ ಬಂದ ಶೋಭಾ ಗಂಡನ ಮನೆಗೆ ಬೀಗ ಜಡಿದಿರುವುದನ್ನು ಕಂಡು ಗಂಡನ ಮನೆಯ ಬಾಗಿಲಲ್ಲಿಯೇ ಕೂಡಲೆ ನನಗೆ ನ್ಯಾಯ ಬೇಕೆಂದು ಹಠ ಹಿಡಿದು ಶೋಭಾ ಧರಣಿ ಕುಳಿತ್ತಿದ್ದಾರೆ.
ಆರಕ್ಷಕ ಇಲಾಖೆಗೆ ದೂರು ನೀಡಿದ್ದರೂ ಆರಕ್ಷಕ ಇಲಾಖೆಯ ಅಧಿಕಾರಿಗಳು ನನ್ನ ದೂರಿಗೆ ಕಿಂಚಿತ್ತೂ ಬೆಲೆ ನೀಡಿಲ್ಲ ಎಂದು ಶೋಭಾ ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ