ಚಿತ್ರದುರ್ಗ
ವಿಕಲಚೇತನರಾದರೂ, ನಾವೆಲ್ಲ, ಸ್ವಯಂ ಪ್ರೇರಣೆಯಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತೇವೆ. ಅದೇ ರೀತಿ ಎಲ್ಲ ಅರ್ಹ ಮತದಾರರೂ ಏ. 18 ರಂದು ನಡೆಯುವ ಮತದಾನದಂದು, ತಪ್ಪದೆ ಮತ ಚಲಾವಣೆ ಮಾಡುವಂತೆ ವಿಕಲಚೇತನರು ಚಿತ್ರದುರ್ಗದಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ಜಾಗೃತಿ ಮೂಡಿಸಿದರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ತಾಲ್ಲೂಕು ಸ್ವೀಪ್ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಲಚೇತನರು ನಡೆಸಿದ ತ್ರಿಚಕ್ರ ಮೋಟಾರು ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಆರ್.ವಿನೋತ್‍ಪ್ರಿಯಾ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಸತ್ಯಭಾಮ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣನಾಯಕ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.
ಪ್ರತಿಯೊಬ್ಬ ಅರ್ಹ ಮತದಾರರೂ ತಪ್ಪದೆ ಮತದಾನ ಮಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ವಿಕಲಚೇತನರಿಗೆ ಮತದಾನಕ್ಕಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ವಿಕಲಚೇತನರಿಗೆ ವಾಹನದ ವ್ಯವಸ್ಥೆ ಕೂಡ ಒದಗಿಸಲಾಗುತ್ತಿದೆ. ಹೀಗಾಗಿ ವಿಕಲಚೇತನ ಸ್ನೇಹಿ ಮತಗಟ್ಟೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಒಟ್ಟಾರೆ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯಲು ಕಸರತ್ತು ನಡೆಸಲಾಗುತ್ತಿದೆ. ಈ ದಿಸೆಯಲ್ಲಿ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ವಿಶೇಷವಾಗಿ ವಿಕಲಚೇತನರ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು.
ಸುಮಾರು 50 ವಿಕಲಚೇತನರು ತಮ್ಮ ತ್ರಿಚಕ್ರ ಮೋಟಾರು ವಾಹನದ ಮೂಲಕ ರ್ಯಾಲಿಯಲ್ಲಿ ಆಸಕ್ತಿಯಿಂದ ಪಾಲ್ಗೊಂಡಿದ್ದರು. ‘ನಮ್ಮ ಮತ, ನಮ್ಮ ಹಕ್ಕು’, ‘ಪ್ರತಿ ಮತವೂ ಅಮೂಲ್ಯ’ ಸೇರಿದಂತೆ ಮತದಾನ ಜಾಗೃತಿ ಸಂದೇಶಗಳುಳ್ಳ ಫಲಕವನ್ನು ಬೈಕ್‍ಗೆ ಅಳವಡಿಸಿಕೊಂಡಿದ್ದ ವಿಕಲಚೇತನರು, ತಾಲ್ಲೂಕು ಪಂಚಾಯತ್ ಕಚೇರಿ ಆವರಣದಿಂದ ರ್ಯಾಲಿಯನ್ನು ಆರಂಭಿಸಿ, ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ, ಮಹಾತ್ಮ ಗಾಂಧಿ ವೃತ್ತ, ಡಿ.ಸಿ. ಕಚೇರಿ ವೃತ್ತದ ವರೆಗೂ ಬೈಕ್ ರ್ಯಾಲಿ ನಡೆಸಿ, ಮತದಾನ ಜಾಗೃತಿ ಆಂದೋಲನದಲ್ಲಿ ಪಾಲ್ಗೊಂಡರು.