ಹೊನ್ನಾಳಿ:
ಮತದಾನವು ಪ್ರಜಾಪ್ರಭುತ್ವ ಎಂಬ ಭವ್ಯ ಕಟ್ಟಡದ ಬುನಾದಿ ಇದ್ದಂತೆ. ಬುನಾದಿ ಭದ್ರವಾಗಿದ್ದರೆ ಕಟ್ಟಡ ದೀರ್ಘಕಾಲ ಬಾಳಿಕೆ ಬರುತ್ತದೆ. ಆದ್ದರಿಂದ, ಎಲ್ಲಾ ನಾಗರೀಕರೂ ಮತದಾನದ ವಿಷಯದಲ್ಲಿ ಪ್ರಜ್ಞಾವಂತಿಕೆ ಮೆರೆಯಬೇಕು ಎಂದು ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಬಿದರಗಡ್ಡೆ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಮಂಗಳವಾರ ಶತಾಯುಷಿ ಡಿ.ಕೆ. ನಂಜಪ್ಪಗೌಡರ ಶಿವಗಣಾರಾಧನೆ ಪ್ರಯುಕ್ತ ಹಮ್ಮಿಕೊಂಡ ಸರ್ವ ಶರಣರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜೆಗಳ ಮತ ಅಮೂಲ್ಯವಾದುದು. ಆದ್ದರಿಂದ, ಯಾರೂ ಮತವನ್ನು ಮಾರಿಕೊಳ್ಳಬಾರದು. ಯೋಗ್ಯ ವ್ಯಕ್ತಿಗೆ ಮತವನ್ನು ದಾನ ಮಾಡಬೇಕು. ಮತವನ್ನು ಮಾರಿಕೊಂಡರೆ ಪ್ರಜಾಪ್ರಭುತ್ವ ನಾಶವಾಗುತ್ತದೆ. ಯಾವುದೇ ಪ್ರಲೋಭನೆಗೆ ಒಳಗಾಗದೇ ಮತದಾನ ಮಾಡಿದರೆ ಪ್ರಜಾಪ್ರಭುತ್ವ, ದೇಶ ಉಳಿಯುತ್ತದೆ ಎಂದು ತಿಳಿಸಿದರು.
ಮತದಾರ ಪ್ರಜಾಪ್ರಭುತ್ವದಲ್ಲಿ ಪ್ರಜ್ಞಾವಂತನಾಗಿರಬೇಕು. ತಾತ್ವಿಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ನಾಡಿಗೆ ಸ್ಪಂದಿಸುವ ಸಾತ್ವಿಕ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು. ಮತದಾನ ಒಂದು ಪವಿತ್ರವಾದ ಕರ್ತವ್ಯ. ಅರ್ಹರನ್ನು ಗುರುತಿಸಬೇಕಾದುದು ಜನತೆಯ ಹೊಣೆಗಾರಿಕೆಯಾಗಿದೆ. ಸಮಾಜದ ಸಮಸ್ಯೆಗಳನ್ನು ನಿವಾರಿಸುವ ದಾಷ್ಟ್ರ್ಯವುಳ್ಳ ವ್ಯಕ್ತಿಗಳನ್ನು ನಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕು. ಸಮಷ್ಟಿಯ ಅಭಿವೃದ್ಧಿ ಮರೆತು ತಮ್ಮ ವೈಯಕ್ತಿಕ ಅಭಿವೃದ್ಧಿಯಲ್ಲಿ ತೊಡಗುವವರನ್ನು ತಿರಸ್ಕರಿಸಬೇಕು ಎಂದು ವಿವರಿಸಿದರು.
“ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನ ವಿಧಾನಸೌಧ, ವಿಕಾಸಸೌಧಗಳಲ್ಲಿ ಬದುಕಿಯೂ ಸತ್ತಂತೆ ಇರುವವರು ಇದ್ದಾರೆ.
ಆದ್ದರಿಂದ, ನಮ್ಮ ರಾಜ್ಯ ಅಭಿವೃದ್ಧಿಪಥದಲ್ಲಿ ಮುಂದೆ ಸಾಗುತ್ತಿಲ್ಲ” ಎಂದು ಕಲಾವಿದರೊಬ್ಬರು ಕೆಲ ದಿನಗಳ ಹಿಂದೆ ಸಾಣೇಹಳ್ಳಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಆಡಿದ ಮಾತುಗಳನ್ನು ನೆನಪಿಸಿಕೊಂಡ ಸ್ವಾಮೀಜಿ, ಪ್ರಬುದ್ಧರನ್ನು ನಾವು ಶಾಸನ ಸಭೆಗಳಿಗೆ ಆಯ್ಕೆ ಮಾಡಿ ಕಳುಹಿಸಿದರೆ ಇಂಥ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಸೂಚ್ಯವಾಗಿ ನುಡಿದರು.
ನಮ್ಮ ಬದುಕನ್ನು ಸಾರ್ಥಕವಾಗಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಚಿಂತನೆ ನಡೆಸಬೇಕು. ಲೇಸೆನಿಸಿಕೊಂಡು ಐದು ದಿನ, ನಾಲ್ಕು ದಿನ, ಮೂರು ದಿನ ಬದುಕಿದರೇನು? ಕೂಡಲಸಂಗನ ಶರಣರಲ್ಲಿ ಲೇಸೆನಿಸಿಕೊಂಡು ಒಂದು ದಿನ ಬದುಕಿದರೂ ಬದುಕು ಸಾರ್ಥಕವಾಗುತ್ತದೆ ಎಂಬ ಶರಣರ ವಚನವನ್ನು ಪ್ರಸ್ತಾಪಿಸಿದ ಅವರು, ಉತ್ತಮವಾಗಿ ಕೆಲವೇ ವರ್ಷಗಳ ಕಾಲ ಬದುಕಿದರೆ ಸಾಕು ಬದುಕಿನ ಸಾರ್ಥಕ್ಯ ಸಾಧ್ಯ ಎಂದು ಹೇಳಿದರು.
ತಂದೆ-ತಾಯಿಗಳ ಆಸ್ತಿಗೆ ನಾವು ಹಕ್ಕುದಾರರಾಗುವುಷ್ಟೇ ಮುಖ್ಯವಲ್ಲ. ಅವರ ಆದರ್ಶಗಳಿಗೆ ನಾವು ಹಕ್ಕುದಾರರಾಗಬೇಕು. ಮನೆತನದ ಗೌರವ ಎತ್ತಿಹಿಡಿಯುವ ಮೂಲಕ ನಮ್ಮ ಹಿರಿಯರಿಗೆ ಗೌರವ ನೀಡಬೇಕು. ವಯೋವೃದ್ಧ ತಂದೆ-ತಾಯಿಗಳನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕು. ಮೂರು ತಿಂಗಳಿಗೊಮ್ಮೆ ಮಕ್ಕಳು ತಮ್ಮ ತಮ್ಮಲ್ಲಿಯೇ ತಂದೆ-ತಾಯಿಗಳನ್ನು ಹಂಚಿಕೊಂಡು ಸಾಕುವ ಇಲ್ಲವೇ ವೃದ್ಧಾಶ್ರಮಗಳಿಗೆ ಸೇರಿಸುವ ಪದ್ಧತಿ ಕೈಬಿಡಬೇಕು ಎಂದು ತಿಳಿಸಿದರು.
ಬಂಗಾರದ ಮೋಹದಿಂದ ಮನುಷ್ಯ ಹೊರಬರಬೇಕು. ಏಕೆಂದರೆ, ಬಂಗಾರಕ್ಕಿಂತ ನಮಗೆ ಆಹಾರ ಧಾನ್ಯಗಳು ಮುಖ್ಯ. ಹಾಗಾಗಿ, ಎಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ಅಡಕೆ ಬೆಳೆಯನ್ನೇ ಬೆಳೆದರೆ ಜೋಳ, ರಾಗಿ, ಭತ್ತ ಬೆಳೆಯುವವರು ಯಾರು? ಮುಂದೊಂದು ದಿನ ಆಹಾರದ ಕೊರತೆ ಆದರೆ ಗತಿ ಏನು ಎಂದು ಪ್ರಶ್ನಿಸಿದರು. ನೀರಿನ ಮಹತ್ವ ಅರಿಯದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿಯೇ ಯುದ್ಧ ನಡೆಯಬಹುದು. ನೀರನ್ನು ವ್ಯರ್ಥ ಮಾಡಬಾರದು. ಅದೇ ರೀತಿ ಸಾರ್ವಜನಿಕ ಸಮಾರಂಭಗಳಲ್ಲಿ ಅನ್ನವನ್ನು ಬಿಸಾಡಬಾರದು. ಒಂದು ಅಗುಳನ್ನೂ ಎಲೆಯಲ್ಲಿ ಬಿಡದೇ ಊಟ ಮಾಡಬೇಕು. ಅನ್ನದ ಪ್ರತಿ ಅಗುಳೂ ಪ್ರಸಾದ, ನೀರಿನ ಪ್ರತಿ ಹನಿಯೂ ತೀರ್ಥ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು.
ಶಾಸಕ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಸಾಹಿತಿ ಎಸ್.ಟಿ. ಶಾಂತಗಂಗಾಧರ್, ನಿವೃತ್ತ ಶಾಲಾ ತನಿಖಾಧಿಕಾರಿ ಟಿ.ಎ. ಶರಣಪ್ಪ, ಡಿ.ಜಿ. ಬೆನಕಪ್ಪಗೌಡ, ಬಸವಾಪಟ್ಟಣದ ಜಯಣ್ಣ ಮತ್ತಿತರರು ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷೆ ಶೀಲಾ ಗದ್ದಿಗೇಶ್, ತಾಲೂಕು ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಜಿ. ಮುರಿಗೆಪ್ಪಗೌಡ, ಸಂಸದ ಜಿ.ಎಂ. ಸಿದ್ಧೇಶ್ವರ್ ಪುತ್ರ ಜಿ.ಎಂ. ಅನಿಲ್‍ಕುಮಾರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕುಂದೂರು ಜಿ. ಹನುಮಂತಪ್ಪ, ಮುಖಂಡರಾದ ಡಿ.ಜಿ. ಮಂಜಪ್ಪ, ಡಿ.ಎಸ್. ಪ್ರದೀಪ್, ಡಿ.ಕೆ. ಭರ್ಮಪ್ಪಗೌಡ, ಡಿ.ಕೆ. ಹಾಲೇಶಪ್ಪ, ಡಿ.ಕೆ. ರಾಜಪ್ಪ, ಡಿ.ಕೆ. ನಾಗರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.ಬಿದರಗಡ್ಡೆ ಡಿ.ಕೆ. ಭರ್ಮಪ್ಪಗೌಡ ಮತ್ತು ಸಹೋದರರು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
