ಮತಹಕ್ಕು ಚಲಾಯಿಸದ್ದಿದ್ದರೆ ವೇತನ ಕಡಿತ

ಚಿತ್ರದುರ್ಗ:

       ಮುಂದಿನ ತಿಂಗಳ ಹದಿನೆಂಟರಂದು ನಡೆಯುವ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸದ ಸರ್ಕಾರಿ ನೌಕರರ ಒಂದು ದಿನದ ಇಲ್ಲವೇ ಅರ್ಧ ದಿನದ ವೇತನವನ್ನು ಕಡಿತಗೊಳಿಸುವಂತೆ ಎಲ್ಲಾ ಇಲಾಖೆಗೂ ಪತ್ರ ಬರೆದಿದ್ದೇನೆ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಹೇಳಿದರು.

        ಜಿ.ಪಂ., ಪಶು ಸಂಗೋಪನಾ ಇಲಾಖೆ, ಪಶುಪಾಲನಾ ಮತ್ತು ಪಶುವ್ಯದ್ಯ ಸೇವಾ ಇಲಾಖೆ, ಪಶು ವೈದ್ಯಕೀಯ ಸಹಾಯಕರು, ಪರೀಕ್ಷಕರು, ಜಾನುವಾರು ಅಭಿವೃದ್ದಿ ಅಧಿಕಾರಿಗಳಿಗೆ ಎ.ಪಿ.ಎಂ.ಸಿ.ಯಲ್ಲಿರುವ ಐ.ಎ.ಟಿ.ಯಲ್ಲಿ ಮಂಗಳವಾರ ನಡೆದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

      ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಎಲ್ಲಾ ನೌಕರರ ಹೆಸರಿರಬೇಕು. ಸಂವಿಧಾನದಲ್ಲಿ ಸರ್ಕಾರಿ ನೌಕರರಿಗೆ ವಿಫುಲವಾದ ಅವಕಾಶ ನೀಡಲಾಗಿದೆ. ಹಾಗಾಗಿ ಮತದಾನದ ದಿನದಂದು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ ತಪ್ಪದೆ ಎಲ್ಲಾ ನೌಕರರು ಮತಚಲಾಯಿಸಿ ಸಂವಿಧಾನ ಬಲವಾಗಿ ನಿಲ್ಲಲು ಕೈಜೋಡಿಸಿ ಎಂದು ಪಶುಪಾಲನಾ ಇಲಾಖೆ ನೌಕರರಿಗೆ ಸೂಚಿಸಿದ ಸತ್ಯಭಾಮ ಮತದಾನ ಮಾಡದವರಿಗೆ ಅರ್ಧ ದಿನ ಇಲ್ಲವೇ ಒಂದು ದಿನದ ವೇತನ ಕಟ್‍ಮಾಡಲಾಗುವುದು ಎಂದು ಎಚ್ಚರಿಸಿದರು.

      ಕೆಲವೊಮ್ಮೆ ಅಧಿಕಾರಿಗಳು ಹಾಗೂ ನೌಕರರು ಅಂಚೆ ಮತಪತ್ರದಲ್ಲಿ ಸರಿಯಾಗಿ ಮತದಾನ ಮಾಡಿರುವುದಿಲ್ಲ. ಇದರಿಂದ ಮತ ಚಲಾಯಿಸಿದರೂ ತಿರಸ್ಕೃತವಾಗುತ್ತದೆ. ಇಂತಹ ಘಟನೆಗಳು ಸಾಕಷ್ಟು ನಡೆದಿರುವುದನ್ನು ನಾನು ನೋಡಿದ್ದೇನೆ. ಬಡವ-ಬಲ್ಲಿದ ಮೇಲು-ಕೀಳು ಎನ್ನುವ ತಾರತಮ್ಯವಿಲ್ಲದೆ ಸಂವಿಧಾನ ಎಲ್ಲರಿಗೂ ಒಂದೆ ಮತದಾನ ಮಾಡುವ ಹಕ್ಕು ನೀಡಿದೆ. ಮತದಾನವನ್ನು ಪ್ರಜಾಪ್ರಭುತ್ವದ ಹಬ್ಬವನ್ನಾಗಿ ಆಚರಿಸಿ.

      ಚುನಾವಣೆ ಸಂದರ್ಭದಲ್ಲಿ ರಜೆ ಕೇಳಿದರೆ ಕೊಡುವುದಿಲ್ಲ. ಇ.ವಿ.ಎಂ.ಬಗ್ಗೆ ತಪ್ಪು ಕಲ್ಪನೆ ಇರುವುದು ಶುದ್ದ ಸುಳ್ಳು, ಯಂತ್ರಗಳಲ್ಲಿ ಯಾವುದೆ ಲೋಪವಿರುವುದಿಲ್ಲ. ಭಾರತದ ಬುದ್ದಿಮತ್ತೆಗೆ ಸುಂದರವಾದ ಓಟಿಂಗ್ ಮೆಷಿನ್ ಬಳಸಲಾಗುತ್ತಿದೆ. ಅಮೇರಿಕಾ ದೇಶಕ್ಕಿಂತ ಭಾರತದವರು ಬುದ್ದಿವಂತರು. ಏಕೆಂದರೆ ಅಲ್ಲಿ ಇನ್ನು ಮತಪತ್ರಗಳನ್ನು ಚುನಾವಣೆಯಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ನೀವುಗಳು ಮೊದಲು ಓಟ್ ಮಾಡಿ. ಅಕ್ಕ ಪಕ್ಕ ಬಂಧು ಬಳಗದವರಿಗೂ ಮತದಾನ ಮಾಡುವಂತೆ ಜಾಗೃತಿಗೊಳಿಸಿ ಎಂದು ಪಶುಪಾಲನಾ ಇಲಾಖೆ ನೌಕರರಿಗೆ ತಿಳಿಸಿದರು.

       ಪ್ರತಿಯೊಬ್ಬ ಮನುಷ್ಯನೂ ಪ್ರಾಣಿ ಜೊತೆ ಒಡನಾಟವಿಟ್ಟುಕೊಂಡಿರುತ್ತಾನೆ. ಆದರೆ ಪ್ರಾಣಿಗಳಿಂದ ಮನುಷ್ಯನಿಗೆ ರೋಗ ಬರುವುದು ತುಂಬಾ ಕಡಿಮೆ. ಜಿಲ್ಲೆಯಲ್ಲಿ ಹದಿನಾರು ಲಕ್ಷ ಜಾನುವಾರುಗಳಿವೆ. ಡೈರಿ ಉತ್ಪನ್ನಗಳೆ ಮಾನವನ ಜೀವನಕ್ಕೆ ಆಧಾರ ಎಂದರು.
ತಾಂತ್ರಿಕ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ.ಸಿ.ತಿಪ್ಪೇಸ್ವಾಮಿ ಮಾತನಾಡಿ ಕ್ಷೇತ್ರ ಮಟ್ಟದ ಅಧಿಕಾರಿಗಳಿಂದ ಪಶುಪಾಲನಾ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇಲಾಖೆಯ ಎಲ್ಲಾ ಯೋಜನೆಗಳನ್ನು ಗುರಿಮೀರಿ ಸಾಧಿಸಲಾಗಿದೆ.

        ಜಾನುವಾರು ಗಣತಿಯನ್ನು ದೇಶದಲ್ಲಿ ಚಿತ್ರದುರ್ಗ ಜಿಲ್ಲೆ ಪ್ರಥಮವಾಗಿ ಮಾಡಿ ಮುಗಿಸಿದೆ. ಜಿಲ್ಲೆಯಲ್ಲಿ ಬರಗಾಲವಿರುವುದರಿಂದ ಜಾನುವಾರುಗಳ ಮೇವು ನೀರಿಗೆ ಬರವಿದೆ. ಚಳ್ಳಕೆರೆ, ಮೊಳಕಾಲ್ಮುರು ತಾಲೂಕಿನಲ್ಲಿ ಗೋಶಾಲೆ ಮತ್ತು ಮೇವು ಬ್ಯಾಂಕ್ ತೆರೆಯಲಾಗಿದೆ. ಕುರಿ, ಮೇಕೆ, ಹಸು, ಎಮ್ಮೆಗಳಿಂದ ರೈತರಿಗೆ ಪರ್ಯಾಯ ಉದ್ದಿಮೆ ದೊರಕುತ್ತಿದೆ. ಮನುಷ್ಯನಿಗೆ ಬರುವ ಪ್ರಾಣಿಜನ್ಯ ರೋಗಗಳ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಕೊಂಡು ರೈತರಿಗೆ ಅರಿವು ಮೂಡಿಸಿ ಎಂದು ಪಶುಪಾಲನಾ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿದರು.

         ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಸುಂದರೇಶನ್ ಮಾನಾಡುತ್ತ ಬ್ಯಾಕ್ಟೀರಿಯಾ, ವೈರಸ್, ಪರೋಪಜೀವಿಗಳಿಂದ ಮಾನವನಿಗೆ ಪ್ರಾಣಿಗಳಿಂದ ರೋಗ ಹರಡುತ್ತದೆ. ಪ್ರಾಣಿಮೂಲದ ಆಹಾರ ಸೇವನೆಯಿಂದಲೂ ಮಾನವ ಪ್ರಾಣಿಜನ್ಯ ರೋಗಗಳಿಗೆ ತುತ್ತಾಗಬಹುದು. ಪರಿಸರದಲ್ಲಿಯೂ ಕೆಲವೊಮ್ಮೆ ರೋಗಗಳು ಮನುಷ್ಯನಿಗೆ ಹರಡುತ್ತದೆ. ಮಾಂಸ, ಮೊಟ್ಟೆ, ಹಾಲಿನ ಉತ್ಪನ್ನಗಳನ್ನು ಸರಿಯಾಗಿ ಬೇಯಿಸಿ ಸೇವಿಸಬೇಕು. ಇಲ್ಲದಿದ್ದರೆ ಸುಲಭವಾಗಿ ಪ್ರಾಣಿಜನ್ಯ ರೋಗಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಹೇಳಿದರು.

        ಒಂದು ಪ್ರಾಣಿಯಲ್ಲಿರುವ ರೋಗ ಮತ್ತೊಂದು ಪ್ರಾಣಿಗೆ ಇಲ್ಲವೇ ಪಕ್ಷಿಗೆ ಹರಡಬಹುದು. ಮನುಷ್ಯನಿಗೆ ಶೇ.60 ರಷ್ಟು ರೋಗಗಳು ಪ್ರಾಣಿ ಮೂಲದಿಂದ ಬರುತ್ತದೆ. ಹೆಚ್.1, ಎನ್-1, ಹಕ್ಕಿಜ್ವರ, ಸಾಕು ಪ್ರಾಣಿಗಳಿಂದಲೇ ಅಲ್ಲ. ವನ್ಯಜೀವಿ, ಪಕ್ಷಿಗಳಿಂದಲೂ ಪಸರಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯಿದ್ದಂತೆ ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯೂ ಇದೆ. ಪ್ಯಾರಿಸ್‍ನಲ್ಲಿ ಕೇಂದ್ರ ಸಂಸ್ಥೆಯಿದೆ. ಪ್ರಾಣಿ, ಪಕ್ಷಿಗಳ ಒಡನಾಟದಿಂದ ಮನುಷ್ಯ ದೂರವಿರಲು ಆಗುವುದಿಲ್ಲ. ಪ್ರಾಣಿ, ಪಕ್ಷಿ, ಪ್ರಕೃತಿ, ಮನುಷ್ಯ ಬಿಟ್ಟು ಯಾರು ಬೇರೆ ಇಲ್ಲ. ಹಾಗಾಗಿ ಪ್ರಾಣಿಜನ್ಯ ರೋಗಗಳ ಬಗ್ಗೆ ಸರಿಯಾದ ತಿಳುವಳಿಕೆ ಮೂಡಿಸಿಕೊಂಡು ಜನಸಾಮಾನ್ಯರು ಹಾಗೂ ರೈತರಲ್ಲಿ ಅರಿವು ಮೂಡಿಸಿ ಎಂದು ಪಶುಪಾಲನಾ ಇಲಾಖೆಯವರಿಗೆ ಕರೆ ನೀಡಿದರು.ಪಾಲಿಕ್ಲಿನಿಕ್ ಉಪನಿರ್ದೇಶಕ ಕೃಷ್ಣಪ್ಪ ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link