ಮದುವೆಯ ದಿನವೇ ಕಲ್ಯಾಣ ಮಂಟಪದಿಂದ ವಧು ಪರಾರಿ

ಹುಳಿಯಾರು
            ಮದುವೆಯ ದಿನವೇ ಸಿನಿಮೀಯ ರೀತಿಯಲ್ಲಿ ವಧು ಪರಾರಿಯಾಗಿ ಮದುವೆ ಸ್ಥಗಿತವಾಗಿರುವ ಘಟನೆ ಹುಳಿಯಾರಿನಲ್ಲಿ ಭಾನುವಾರ ನಡೆದಿದೆ.
              ಪರಾರಿಯಾದ ವಧು ಹುಳಿಯಾರು ಹೋಬಳಿಯ ಸಿಂಗಾಪುರ ಗ್ರಾಮದ ಶೋಭಾ ಎನ್ನಲಾಗಿದೆ. ಈಕೆಯನ್ನು ಹುಳಿಯಾರು ಹೋಬಳಿಯ ಕುರಿಹಟ್ಟಿ ಗ್ರಾಮದ ಮಾರುತಿ ಎನ್ನುವ ವರನೊಂದಿಗೆ ಸೆ.2 ರ ಭಾನುವಾರ ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ಮದುವೆ ನಡೆಯುತ್ತಿತ್ತು. ಶನಿವಾರ ಸಂಜೆ ಮದುವೆಯ ಆರತಕ್ಷತೆ, ಅರಿಶಿನಶಾಸ್ತ್ರ, ಬಳೆಶಾಸ್ತ್ರ ಹೀಗೆ ವಿವಿಧ ಮಂಗಳ ಕಾರ್ಯದಲ್ಲಿ ವರನೊಂದಿಗೆ ಲವಲವಿಕೆಯಿಂದ ವಧು ಭಾಗವಹಿಸಿದ್ದಳು.
                ಭಾನುವಾರ ಮುಂಜಾನೆಯೂ ಸಹ ಎಂದಿನಂತೆ ಸಹಜವಾಗಿಯೇ ಇದ್ದ ವಧು ಶೋಭಾ ತಿಂಡಿಯ ನಂತರ ದೂರವಾಣಿಯಲ್ಲಿ ಮಾತನಾಡುತ್ತಾ ಮಾತನಾಡುತ್ತಾ ಸಮುದಾಯ ಭವನದಿಂದ ಕಾಲ್ಕಿತ್ತಿದ್ದಾಳೆ. ಈ ವಿಷಯ ತಿಳಿಯದ ವಧು ಹಾಗೂ ವರನ ಕಡೆಯವರು ಮದುವೆಯ ಮುಹೂರ್ತ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಮುಹೂರ್ತದ ಸಮಯ ಹತ್ತಿರ ಬಂದಾಗ ವಧುವನ್ನು ಸಿದ್ದ ಮಾಡಲು ಹುಡುಕಾಡಿದಾಗ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.
                 ವಿಷಯ ತಿಳಿದ ತಕ್ಷಣ ವಧುವಿನ ತಂದೆ ಸಿದ್ಧರಾಮಯ್ಯ ಅವಮಾನ ಎದುರಿಸಲಾಗದೆ ತನ್ನ ಬೈಕ್ ಏರಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಇತ್ತ ವಧುವಿನ ತಾಯಿ ಹಾಗೂ ಕುಟುಂಬದವರು ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ ವರ ದಿಕ್ಕೇ ತೋಚದಾಗಿ ಮೌನಕ್ಕೆ ಶರಣಾಗಿದ್ದನು. ಮದುವೆಗೆ ಬಂದ ನೆಂಟರಿಷ್ಟರು ವಧುವಿಗೆ ಹಿಡಿ ಶಾಪ ಹಾಕಿ ಹಿಂದಿರುಗಿದರು. ನಿಗದಿಯಾದ ಮುಹೂರ್ತದಲ್ಲೇ ಹುಡುಗನಿಗೆ ಬೇರೆ ಕನ್ಯೆಯೊಂದಿಗೆ ಮದುವೆ ಮಾಡಲು ಇನ್ನಿಲ್ಲದ ಕಸರತ್ತು ಮಾಡಿದರಾದರೂ ವಿಫಲವಾಗುವ ಮೂಲಕ ನಿಶ್ಚಯವಾದ ಮದುವೆ ಕಾರ್ಯ ಮುರಿದು ಬಿದ್ದಿತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link