ಮಧುಗಿರಿ :
ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಇದ್ದವರಿಗೆ ಮಾತ್ರ ಜಿಲ್ಲೆಯಲ್ಲಿ ಪ್ರತಿನಿತ್ಯ 7000 ಮಂದಿಗೆ ಕೊರೋನ ಪರೀಕ್ಷೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಅವರು ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ತಾಲ್ಲೂಕಿನಲ್ಲಿ ಕೊರೋನ ವೈರಸ್ ಹರಡದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚೆಗೆ ಕೋವಿಡ್ ಪಾಸಿಟಿವ್ ಬಂದಂತಹವರನ್ನು ಕೋವಿಡ್ ಕೇರ್ ಸೆಂಟರ್ಗೆ ಸೇರಿಸಿ ಹಾರೈಕೆ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ನಾಲ್ಕು ಗ್ರಾಮ ಪಂಚಾಯತಿ ಮತ್ತು ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಅಧಿಕ ಸೋಂಕಿತರು ಪತ್ತೆಯಾಗಿರುವುದರಿಂದ ಹಾಟ್ಸ್ಪಾಟ್ಗಳೆಂದು ಗುರುತಿಸಲಾಗಿದೆ ಎಂದರು.
ಮಧುಗಿರಿ ಪುರಸಭಾ ವ್ಯಾಪ್ತಿಯ ಶ್ರೀನಿವಾಸ ಬಡಾವಣೆ, ಕೆ.ಆರ್.ಬಡಾವಣೆ, ರಾಘವೇಂದ್ರ ಕಾಲನಿ, ತಾಲ್ಲೂಕಿನ ಮಿಡಿಗೇಶಿ, ಬ್ಯಾಲ್ಯ, ದೊಡ್ಡೇರಿ, ಚಂದ್ರಗಿರಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಹೆಚ್ಚು ಸೋಂಕಿತರು ಕಂಡುಬಂದಿರುವುದರಿಂದ ಹಾಟ್ ಸ್ಪಾಟ್ಗಳಾಗಿ ಘೋಷಿಸಲಾಗಿದೆ. ಗ್ರಾಮಾಂತರ ಭಾಗದ ಹಾಟ್ಸ್ಪಾಟ್ನಲ್ಲಿರುವ ಸೋಂಕಿತರನ್ನು ತಕ್ಷಣವೆ ಕೋವಿಡ್ ಕೇರ್ಸೆಂಟರ್ನಲ್ಲಿ ಚಿಕಿತ್ಸೆಗಾಗಿ ದಾಖಲಿಸಿ ಮತ್ತು ಸೋಂಕಿತ ವ್ಯಕ್ತಿಗೆ ಸಂಬಂಧಿಸಿದ ಮನೆಯಲ್ಲಿರುವ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸುವಂತೆ ಸಚಿವರು ಸೂಚಿಸಿದರು.
ಮಧುಗಿರಿ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ 50 ಬೆಡ್ಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಬೆಡ್ಗಳಲ್ಲಿ ಇತರೆ ಕಾಯಿಲೆಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಾದ ರಾಘವೇಂದ್ರ ಆಸ್ಪತ್ರೆಯನ್ನು ಕೋವಿಡ್ ಕೇರ್ ಗೆ ಬಳಸಿಕೊಳ್ಳುವಂತೆ ಸಚಿವರು ಸೂಚಿಸಿದರು. ತಾಲ್ಲೂಕಿನಲ್ಲಿ 1018 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಸಚಿವರು ತಿಳಿಸಿದರು.
ಶೇ. 38 ರಷ್ಟು ವ್ಯಾಕ್ಸಿನೇಷನ್ :
ತಾಲ್ಲೂಕಿನಲ್ಲಿ ಇಲ್ಲಿಯವರೆಗೂ 33134 ಕೋವಿಡ್ ವ್ಯಾಕ್ಸಿನೇಷನ್ ಮಾಡಲಾಗಿದೆ. ಮೊದಲ ಹಂತದಲ್ಲಿ 27,758, ಎರಡನೆ ಹಂತದಲ್ಲಿ 5,416 ಆಗಿದ್ದು ಶೇಕಡ 38 ರಷ್ಟು ಲಸಿಕೆ ನೀಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು ತಿಳಿಸಿದ್ದಾರೆ.
ಹೊರಗಿನವರ ಬಗ್ಗೆ ಎಚ್ಚರ:
ಆಂಧ್ರ ದ ಗಡಿಭಾಗಕ್ಕೆ ಹೊಂದಿಕೊಂಡಿರುವುದರಿಂದ ತಾಲ್ಲೂಕಿಗೆ ಹೊರಗಿನವರು ಹೆಚ್ಚಾಗಿ ಗ್ರಾಮಗಳಿಗೆ ಪ್ರವೇಶಿಸಿದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಅವರುಗಳನ್ನು 5 ದಿನ ಕಡ್ಡಾಯವಾಗಿ ಮನೆಯಲ್ಲೇ ಇರುವಂತೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಪ್ರಸ್ತುತ ಸಾರ್ವಜನಿಕ ಆಸ್ಪತ್ರೆಯಲ್ಲಿ 33 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಮಧುಗಿರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಸಿಬ್ಬಂದಿಯೂ ಸೇರಿದಂತೆ 16 ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇವರೆಲ್ಲ ಚಿಕಿತ್ಸೆಗೆ ಒಳಗಾಗಿರುವುದರಿಂದ ಸಿಬ್ಬಂದಿ ಕೊರತೆಯಿದ್ದು, ಇದನ್ನು ತುಂಬಿಕೊಡುವಂತೆ ಡಿಹೆಚ್ಓರವರಿಗೆ ವೈದ್ಯ ಡಾ.ಗಂಗಾಧರ್ ಮನವಿ ಮಾಡಿದರು.
ಬೈಕ್ ಮತ್ತು ಕಾರುಗಳಿಗೆ ಕಡಿವಾಣ :
ಕಳೆದ ಲಾಕ್ ಡೌನ್ ವೇಳೆ ದ್ವಿಚಕ್ರ ವಾಹನ ಮತ್ತು ಕಾರುಗಳ ಸಂಚಾರ ಕಟ್ಟುನಿಟ್ಟಾಗಿ ತಡೆಯಲಾಗಿತ್ತು. ಆದರೆ ಈ ಬಾರಿ ಜಿಲ್ಲಾದ್ಯಂತ ನಿಯಂತ್ರಣಕ್ಕೆ ಬಂದಿಲ್ಲ. ಮುಂದಿನ ಹದಿನೈದು ದಿನಗಳ ಕಾಲ ಕಟ್ಟುನಿಟ್ಟಾಗಿ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದಾಗ, ಮಧುಗಿರಿ ಡಿವೈಎಸ್ಪಿ ಕೆ.ಜಿ ರಾಮಕೃಷ್ಣ ಇಲ್ಲಿಯವರೆಗೂ 683 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮನೆಯಲ್ಲಿ ಐಸೋಲೇಷನ್ನಲ್ಲಿರುವ ಸೋಂಕಿತರಿಗೆ ಊಟದ ವ್ಯವಸ್ಥೆಯನ್ನು ತಾಲ್ಲೂಕು ಆಡಳಿತ ಸಮರ್ಪಕವಾಗಿ ಮಾಡಬೇಕು. ಇಲ್ಲವಾದರೆ ಸೋಂಕಿತ ಹೊರಗಡೆ ಬಂದು ವೈರಸ್ ಹರಡಲು ಸಹಕಾರಿಯಾಗುತ್ತದೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಶಾಸಕ ಎಂ.ವಿ.ವೀರಭಧ್ರಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ದಿನೆದಿನೆ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಈಗಾಗಲೇ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸಿದ್ದತೆ ಮಾಡಿಕೊಳ್ಳಲಾಗಿದೆ. 50 ಆಕ್ಸಿಜನ್ ಬೆಡ್ಗಳಿದ್ದು, 5 ಐಸಿಯು, ದಿನಕ್ಕೆ ಮೂರು ಬಾರಿ ಆಕ್ಸಿಜನ್ ತುಂಬಲಾಗುತ್ತಿದೆ. ಪ್ರಥಮ ಅಲೆಯ ವೇಳೆ ಆಶಾ ಕಾರ್ಯಕರ್ತರು ಕಾರ್ಯನಿರ್ವಹಿಸಿದ ರೀತಿಗೂ ಈಗ ನಿರ್ವಹಿಸುತ್ತಿರುವ ರೀತಿಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸರ್ಕಾರಿ ಹಾಸ್ಟೆಲ್ಗಳನ್ನು ಕೋವಿಡ್ ಕೇರ್ ಸೆಂಟರ್ಗಳಾಗಿ ಪರಿವರ್ತಿಸಬೇಕು ಎಂದು ತಿಳಿಸಿ, ಆ್ಯಂಬ್ಯುಲೆನ್ಸ್ ಕೊರತೆ ಇರುವುದನ್ನು ಸಭೆಯ ಗಮನಕ್ಕೆ ತಂದರು. ಆಗ ಡಿಹೆಚ್ಓ ತುರ್ತಾಗಿ ಆ್ಯಂಬ್ಯುಲೆನ್ಸ್ ನೀಡುವುದಾಗಿ ತಿಳಿಸಿದರು.
ಪ್ರಥಮ ಬಾರಿಗೆ ತ್ರಿಶತಕದತ್ತ ಮಧುಗಿರಿ :
ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆಯುಳ್ಳ ಸೋಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚಳವಾಗುತ್ತಿದ್ದು, ಸೋಮವಾರ ಸಂಜೆಗೆ 262 ಸೋಂಕಿತರು ಪತ್ತೆಯಾಗಿದ್ದು, 107 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆನ್ನಲಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿ.ಪಂ ಸಿಇಒ ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ, ತಹಶೀಲ್ದಾರ್ ವೈ.ರವಿ, ತಾ.ಪಂ ಇಒ ದೊಡ್ಡಸಿದ್ದಪ್ಪ, ಟಿ.ಹೆಚ್ಒ ರಮೇಶ್ ಬಾಬು, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಗಂಗಾಧರ್, ಪುರಸಭಾ ಮುಖ್ಯಾಧಿಕಾರಿ ಅಮರ್ ನಾರಾಯಣ್, ಸಿಪಿಐ ಎಂ.ಎಸ್. ಸರ್ದಾರ್, ಸಿಡಿಪಿಒ ಅನಿತಾ, ಬಿಇಒ ನಂಜುಂಡಯ್ಯ, ಬಿಆರ್ಸಿ ಮಂಜುನಾಥಸ್ವಾಮಿ, ಆಹಾರ ಶಿರಸ್ತೇದಾರ್ ಗಣೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ