ಹುಳಿಯಾರು:

ಮೇ ತಿಂಗಳಲ್ಲಿ ಬಿದ್ದ ಮಳೆಗೆ ಖುಷಿಗೊಂಡ ಹುಳಿಯಾರು ಹೋಬಳಿಯ ರೈತರು ಭೂಮಿಯನ್ನು ಅಚ್ಚುಕಟ್ಟು ರಾಗಿ ಬಿತ್ತಿ ಈಗ ಮಳೆಗಾಗಿ ಕಾದು ಕುಳಿತಿದ್ದಾನೆ.
ಇಲ್ಲಿನ ರೈತರು ಮಳೆಯನ್ನು ಆಶ್ರಯಿಸಿಕೊಂಡು ವಾರ್ಷಿಕ ರಾಗಿ ಬೆಳೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಪ್ರತಿ ವರ್ಷ ಮಳೆ ಶುರುವಾಗುತ್ತಿದ್ದಂತೆ ಬಿತ್ತನೆ ವೇಳೆಗೆಲ್ಲ ಸಾಲ ಸೋಲ ಮಾಡಿ ರಾಗಿ ಹೊಲಗಳನ್ನು ಹದ ಮಾಡಿ ಇಟ್ಟುಕೊಳ್ಳುವ ರೈತರು, ಸಕಾಲಕ್ಕೆ ಬಿತ್ತನೆ ಮಾಡಿ ಉತ್ತಮ ಬೆಳೆಯಾಗಲಿ ಎಂದು ಆಶಿಸುತ್ತಾರೆ. ಆದರೆ, ರೈತರ ಈ ಆಸೆ, ನಿರೀಕ್ಷೆಗಳು ಇತ್ತೀಚಿನ 2-3 ವರ್ಷಗಳಲ್ಲಿ ಉಲ್ಟಾ ಹೊಡೆಯುತ್ತಿದೆ.
ಉತ್ತಮ ಬೆಳೆ ನಿರೀಕ್ಷೆಯನ್ನು ಹೊಂದುವ ರೈತರ ಪಾಲಿಗೆ ಮಳೆ ಕೈ ಕೊಡುತ್ತಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ.
ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರೂ ಈ ಮಳೆ ಕೃಷಿ ಚಟುವಟಿಕೆಗಳ ಉಪಯೋಗಕ್ಕೆ ಬಂದಿಲ್ಲ. ಆಗಸ್ಟ್‍ನಲ್ಲಿ ಶೇ.35 ಮಳೆ ಕೊರತೆ ಎದುರಾಗಿದ್ದು, ಬಿದ್ದ ಮಳೆ ಬಿತ್ತನೆಗೆ ನೆರವಾಗಿಲ್ಲ. ಸೆಪ್ಟೆಂಬರ್ ಮಾಹೆಯೊಳಗೆ ಬಿತ್ತನೆ ಕಾರ್ಯ ಬಹುತೇಕ ಪೂರ್ಣವಾಗಬೇಕಿತ್ತು. ಆದರೆ, ಮಳೆ ಕೊರತೆಯಿಂದಾಗಿ ಬಿತ್ತನೆ ಮಾಡುವುದನ್ನು ಬಹುತೇಕ ರೈತರು ಕೈಬಿಟ್ಟಿದ್ದು, ಈಗಾಗಲೇ ಬಿತ್ತನೆ ಮಾಡಿರುವ ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.
ಕಳೆದ ವರ್ಷದಲ್ಲೂ ರಾಗಿ ಬೆಳೆಗಾರರ ಪರಿಸ್ಥಿತಿ ಇದೇ ಮಾದರಿಯಾಗಿತ್ತು. ಮೊದಲ ಹಂತದಲ್ಲಿ ಬಿತ್ತನೆ ಮಾಡಿದ ರಾಗಿ ಬೆಳೆ ಮೊಳಕೆಯಲ್ಲಿಯೇ ತೇವಾಂಶ ಇಲ್ಲದೆ ಒಣಗಿ ನಾಶವಾಗಿತ್ತು. ಮಳೆ ಮತ್ತು ರೈತರ ನಡುವಿನ ಈ ಜೂಜಾಟದಲ್ಲಿ ದಶಕಗಳಿಂದ ರೈತ ಸೋಲುತ್ತಿದ್ದಾನೆ. ಆದರೂ ಛಲ ಬಿಡದೆ ಸಾಲಸೂಲ ಮಾಡಿ ರೈತರು ಒಕ್ಕಲುತನ ಮಾಡುತ್ತಿದ್ದಾರೆ. ಈ ಬಾರಿ ಹೆಸರು, ಅಲಸಂದೆ ಉತ್ತಮ ಇಳುವರಿ ಬರುತ್ತದೆನ್ನಲಾಗಿದ್ದರೂ ಕುಂಠಿತವಾಯಿತು. ಇದರಿಂದಲೂ ಧೃತಿಗೆಡದೆ ರೈತ ರಾಗಿ ಬಿತ್ತಿ ಈಗ ಮಳೆಯ ನಿರೀಕ್ಷೆಯಲ್ಲಿದ್ದಾನೆ.
ಆದರೆ ಅದೇಕೋ ಇನ್ನೂ ವರುಣನ ಮುನಿಸು ಇನ್ನೂ ಕಡಿಮೆಯಾಗಿಲ್ಲ. ಮೋಡಮುಸುಕಿನ ವಾತಾವರಣ ಇರುತ್ತದಾದರೂ ಮಳೆಯಾಗುವುದಿಲ್ಲ. ಮುಂದಿನ ಒಂದು ವಾರದಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೆ, ಬೆಳೆಗಳು ಸಂಪೂರ್ಣ ಹಾಳಾಗಲಿವೆ. ನಿತ್ಯ ರೈತರು ಇಂದು ಮಳೆ ಆಗಬಹುದು, ನಾಳೆ ಮಳೆಯಾಗಬಹುದೆಂದು ಚಾತಕ ಪಕ್ಷಿಯಂತೆ ಮಳೆ ಕಾಯುತ್ತಿದ್ದಾನೆ. ನಿಲ್ಲಿ ಮೋಡಗಳೆ ನಾಲ್ಕು ಹನಿಗಳ ಚೆಲ್ಲಿ ಎಂದು ಪ್ರಾರ್ಥಿಸುತ್ತಿದ್ದಾನೆ.
ಇನ್ನು 8-10 ದಿನಗಳಲ್ಲಿ ಮಳೆಯಾಗದಿದ್ದರೆ ಈಗಿರುವ ರಾಗಿ ಪೈರು ಸಂಪೂರ್ಣ ಒಣಗಿ ಹಾಳಾಗುವ ಸಂಭವ ಹೆಚ್ಚಾಗಿದ್ದು, ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆ ತಾಲ್ಲೂಕಿನಲ್ಲಿ ರಾಗಿ ಬೆಳೆಗಾರರು ಪರಿಸ್ಥಿತಿ ಅಯೋಮಯವಾಗಿದ್ದು, ಪ್ರತಿನಿತ್ಯ ರೈತ ಆಗಸದತ್ತ ಮಳೆಗಾಗಿ ಎದುರು ನೋಡುವಂತಾಗಿದೆ.
ಬಿತ್ತನೆ ಮಾಡಿದ ರಾಗಿ ಹೊಲಗಳಲ್ಲಿ ಮೊಳಕೆ ಹೊಡೆದಿರುವ ಪೈರಿಗೆ ತೇವಾಂಶದ ಕೊರತೆ ಎದುರಾಗಿದೆ. ಬಿಸಿಲಿನ ತಾಪಕ್ಕೆ ಮೊಳಕೆ ಬಾಡಿ ಮುದುಡಿಕೊಂಡಿದೆ. ಇನ್ನು ಕೆಲವಡೆ ರಾಗಿ ಮೊಳಕೆಯೇ ಹೊಡೆದಿಲ್ಲ. ಇದರಿಂದ ರೈತರು ಸಾಲ, ಸೋಲ ಮಾಡಿ ಬಿತ್ತನೆಗೆ ಹಾಕಿದ ಬಂಡವಾಳಕ್ಕೂ ಕೊಕ್ಕೆಯಾಗುವ ಸಂಭವ ಹೆಚ್ಚಾಗಿದ್ದು, ನಿತ್ಯ ರೈತ ಹೊಲಕ್ಕೆ ಹೋಗಿ ಸಪ್ಪೆ ಮೊರೆ ಹಾಕಿಕೊಂಡು ಬೆಳೆ ನೋಡಿ ವಾಪಸ್ ಆಗುತ್ತಿದ್ದಾರೆ.
ಕಳೆದ ಒಂದು ವಾರದಿಂದ ಮೋಡಗಳು ಚೆಲ್ಲಾಟ ನಡೆಸುತ್ತಿವೆ. ಆಗಸದಲ್ಲಿ ಮೋಡಗಳು ಕಂಡರೂ ಮಳೆ ಬರುತ್ತಿಲ್ಲ. ಮಳೆಯ ಆಸೆಯನ್ನು ನೀಡುತ್ತಿರುವ ಮೋಡಗಳು ಮಳೆಯನ್ನು ಸುರಿಸದೆ ಸಂಕಷ್ಟಕ್ಕೆ ರೈತರನ್ನು ಈಡು ಮಾಡುತ್ತಿದೆ. ಸಕಾಲಕ್ಕೆ ಆಗದ ಕಾರಣ ಒಣ ಹವೆ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ವ್ಯಾಪಕ ಬೆಳೆ ನಷ್ಟವಾಗುವ ಆತಂಕವಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








