ದಾವಣಗೆರೆ :
ತುಳಿತಕ್ಕೊಳಗಾದವರಿಗಾಗಿ ದುಡಿದ ಮಹಾತ್ಮರ ಸಾಮಾಜಿಕ ಕಳಕಳಿಯನ್ನು ಬದಿಗೆ ಸರಿಸಿ, ಮಹಾನ್ ವ್ಯಕ್ತಿಗಳನ್ನು ಕೇವಲ ಧಾರ್ಮಿಕ ಸಂಸ್ಥಾಪಕರಂತೆ ನೋಡುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದು ವಿಚಾರವಾದಿ ಡಾ. ಎ.ಬಿ ರಾಮಚಂದ್ರ ಆತಂಕ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಆರ್ಯ ಈಡಿಗರ ಸಂಘದ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘ, ಇವುಗಳ ಸಂಯುಕ್ತಾಶ್ರದಲ್ಲಿ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯಲ್ಲಿ ಭಾಗವಹಿಸಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸರ್ವರ ಸಮಾನತೆಗಾಗಿ ಹೋರಾಡಿದ ಮಹಾನ್ ಪುರುಷರನ್ನು ಅವರ ಸಾಮಾಜಿಕ, ಸಾಂಸ್ಕೃತಿಕ ಇತರೆ ಕಳಕಳಿಗಳನ್ನು ಹೊರತುಪಡಿಸಿ ಕೇವಲ ಧಾರ್ಮಿಕ ಸಂಸ್ಥಾಪಕರಂತೆ ಕಾಣುತ್ತಿರುವುದು ಅಪಯಾಕಾರಿಯಾಗಿದ್ದು, ಈ ಮನೋಭಾವದಿಂದ ಮೊದಲು ಹೊರಬರಬೇಕಾಗಿದೆ. ದೇವಾಲಯದೊಳಗಿನ ಶೋಷಣೆ ತಡೆಗಟ್ಟಲು ಬಸವಣ್ಣ ಅಂಗದಲ್ಲಿ ಲಿಂಗವೆಂಬ ತತ್ವ ಪ್ರತಿಪಾದಿಸಿದರು. ಶೂದ್ರರಿಗೆ ಗುಡಿ ಪ್ರವೇಶ ನೀಡದಿದ್ದಕ್ಕಾಗಿ ಬ್ರಹ್ಮಶ್ರೀ ನಾರಾಯಣ ಗುರು ಗುಡಿಗಳೇ ಶೂದ್ರರ ಬಳಿ ಬರುವಂತೆ ಮಾಡುತ್ತೇನೆಂದು ನಿರ್ಧರಿಸಿ, ದಲಿತರಿಗಾಗಿ ಗುಡಿ ಕಟ್ಟಿಸಿ ಶಿವಲಿಂಗ ಸ್ಥಾಪಿಸಿದರು. ಶೂದ್ರರಿಗೆ ಗುಡಿಗಳನ್ನು ಕಟ್ಟುವ ಮೂಲಕ ಪರಿವರ್ತನೆಗೆ ರಹದಾರಿ ಮಾಡಿಕೊಟ್ಟರು. ಈ ಗುಡಿಗಳು, ದಲಿತರ ಆರ್ಥಿಕತೆ, ಶೈಕ್ಷಣಿಕ, ಸಾಮಾಜಿಕತೆಯನ್ನು ಜಾಗೃತಿಗೊಳಿಸುವ ಕೇಂದ್ರಗಳಾಗಿ, ಮಹಿಳಾ ತಾಣಗಳಾಗಿ, ಆಸ್ಪತ್ರೆ, ಗ್ರಂಥಾಲಯ ಸೇರಿದಂತೆ ಪರಿವರ್ತನಾ ಕೇಂದ್ರಗಳಾಗುವ ಮೂಲಕ ಸಾಮಾಜಿಕ ಸಮಾನತೆಗೆ ದಾರಿ ಮಾಡಿಕೊಟ್ಟಿದ್ದವು ಎಂದು ಸ್ಮರಿಸಿದರು.
ಸುಮಾರು 150 ವರ್ಷಗಳ ಹಿಂದೆ ಕೇರಳದಲ್ಲಿ ಅಸಮಾನತೆ, ಅಸ್ಪಶ್ಯತೆ ವಿರುದ್ಧ ಮಹತ್ವದ ಹೋರಾಟ ಮಾಡಿದ ಸಾಮಾಜಿಕ ಪರಿವರ್ತಕ ಬ್ರಹ್ಮಶ್ರೀ ನಾರಾಯಣ ಗುರು. ನಮ್ಮ ಭಾರತ ಬಹುತ್ವದ ದೇಶ. ಅನೇಕ ಸಮುದಾಯ, ಸಂಸ್ಕೃತಿ ಪ್ರದೇಶಗಳನ್ನೊಳಗೊಂಡ ನಾಡು. ಪ್ರತಿ ಸಮುದಾಯ ತಮ್ಮದೇ ನಾಯಕನನ್ನು ಹೊಂದಿದೆ. ಈ ರೀತಿ ಕೇರಳದಲ್ಲಿ ಈಳವ ಎಂಬ ಹಿಂದುಳಿದ ಸಮುದಾಯದಲ್ಲಿ ಸಾಮರಸ್ಯ, ಸಮಾನತೆ, ಸಂಸ್ಕೃತಿಯನ್ನು ಎತ್ತಿ ಹಿಡಿದ ನಾಯಕ ಇವರು. ಈಗಿನ ಕೇರಳಕ್ಕೂ ಹಿಂದಿನ ಕೇರಳಕ್ಕೂ ತುಂಬಾ ವ್ಯತ್ಯಾಸವಿದೆ. ದಲಿತ ಮಹಿಳೆಯರು ತೆರೆದ ಎದೆಯಲ್ಲಿ ಓಡಾಡಬೇಕಿತ್ತು. ಈಳವ ದಲಿತ ಸಮಾಜದವರು ನಂಬೂದರಿ ಬ್ರಾಹ್ಮಣರಿಂದ ಸುಮಾರು 12 ಅಡಿ ದೂರದಲ್ಲಿ ನಿಂತು ಮಾತನಾಡಬೇಕಿತ್ತು. ಈ ಸಮಾಜವನ್ನು ಅತಿ ನಿಕೃಷ್ಟವಾಗಿ ಕಾಣುತ್ತಿದ್ದ ಕಾಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಈ ಸಮುದಾಯಗಳ ಸಾಮಾಜಿಕ ಸಮಾನತೆಗಾಗಿ ತಮ್ಮದೇ ಆದ ರೀತಿಯ ಚಳವಳಿ ನಡೆಸಿದ್ದರು ಎಂದು ಮಾಹಿತಿ ನೀಡಿದರು.
ಅಂಬೇಡ್ಕರ್ ಹೇಳಿದಂತೆ ಎಲ್ಲ ಸಮಾಜದ ಮಹಿಳೆಯೂ ದಲಿತಳೇ. ದೇವರ ಪರಿಕಲ್ಪನೆಯೇ ಸ್ತ್ರೀ ವಿರೋಧಿಯಾಗಿದ್ದು, ಎಷ್ಟೋ ಮಂದಿರಗಳಿಗೆ ಸ್ತ್ರೀ ಪ್ರವೇಶ ನಿಷಿದ್ದ, ಪೂಜೆ ನಿಷಿದ್ಧ, ಈ ಬಗ್ಗೆ ಮಹಿಳೆ ತಕರಾರು ತೆಗೆಯಬೇಕಾಗಿದೆ. ತಾಮಸ, ಮೌಢ್ಯ, ಕಂದಾಚಾರ ಅನಾದಿ ಕಾಲದಿಂದ ನಡೆದುಕೊಂಡು ಬಂದಿದ್ದು ಅಲಕ್ಷಿತ ಸಮಾಜವನ್ನು ಆಳಲಿಕ್ಕಾಗಿ ಇದನ್ನು ಮಾಡಿಕೊಂಡಿರುವುದಾಗಿದೆ. ಅಲಕ್ಷಿತ ಸಮುದಾಯಗಳಿಗೆ ಒಂದೊಂದು ಕುಲಕಸುಬಗಳನ್ನು ಆರೋಪಿಸಿ ಅವರು ಆರ್ಥಿಕವಾಗಿ ಬೆಳೆಯದಂತೆ ನೋಡಿಕೊಳ್ಳಲಾಗಿದ್ದು, ಕುಲ ಕಸುಬಿನ ಅಮಲಿನಿಂದ ಮುಕ್ತವಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದದವರ ಜಯಂತಿ ಆಚರಣೆ ಹಿಂದೆ ಒಂದೊಳ್ಳೆ ಆಶಯ ಇರುತ್ತದೆ. ಎಷ್ಟೋ ಜನರಿಗೆ ಈ ಮಹಾನ್ ವ್ಯಕ್ತಿಗಳ ಪರಿಚಯ ಇರುವುದಿಲ್ಲ. ಸಾಮಾನ್ಯವಾಗಿ ನಾವು ದೇವರ ಫೋಟೊ ಇಟ್ಟು ಪೂಜಿಸುತ್ತೇವೆ. ಸಮಾನತೆ ಹರಿಕಾರರಾದ ಇಂತಹ ಓಡಾಡುವ ದೇವರ ಬಗ್ಗೆ ಈ ಜಯಂತಿಗಳ ಮೂಲಕ ತಿಳಿದಂತಾಗುತ್ತದೆ. ವರ್ಣ, ವರ್ಗ ಪದ್ದತಿಯಲ್ಲಿ ತುಳಿತಕ್ಕೊಳಗಾದವರಿಗೆ ದಾರಿದೀಪವಾದ ಈ ಮಹಾನ್ ವ್ಯಕ್ತಿಗಳು ನಮಗೆಲ್ಲ ಪ್ರೇರಣೆಯಾಗಬೇಕು. ಅವರು ತೋರಿದ ದಾರಿದೀಪದ ಬೆಳಕಲ್ಲಿ ನಾವೆಲ್ಲ ಸಾಗೋಣ. ಈಡಿಗ ಸಮಾಜ ಒಂದು ಸಣ್ಣ ಸಮುದಾಯವಾಗಿದ್ದು, ಈ ಸಮುದಾಯ ಇನ್ನೂ ಸಂಘಟಿತರಾಗಬೇಕು, ಶೈಕ್ಷಣಿಕವಾಗಿ, ರಾಜಕೀಯವಾಗಿ ಪ್ರಗತಿ ಕಾಣಬೇಕು. ಸಮಾಜ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದೆ. ಅದೇ ರೀತಿ ಸ್ಪರ್ಧಾತ್ಮಕ ಕೇಂದ್ರಗಳನ್ನು ತೆರೆದು ತರಬೇತಿ ನೀಡಬೇಕು ಎಂದು ಆಶಿಸಿದರು.
ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷ ಹೆಚ್ ಶಂಕರ್ ಮಾತನಾಡಿ, ಕೊಡಗು ಮತ್ತು ಕೇರಳ ರಾಜ್ಯದಲ್ಲಿ ನೆರೆಯಿಂದಾದ ನೋವಿನ ಹಿನ್ನೆಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದ ಅವರು ಕೇವಲ ಆಯಾ ಸಮಾಜಕ್ಕೆ ಮಾತ್ರವಲ್ಲದೆ ಎಲ್ಲ ಸಮುದಾಯಗಳಿಗೆ ಮಹಾನ್ ವ್ಯಕ್ತಿಗಳ ಚಿಂತನೆಗಳು, ಧ್ಯೇಯೋದ್ದೇಶಗಳನ್ನು ತಲುಪಿಸಲು ಇಂತಹ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಶೈಕ್ಷಣಿಕವಾಗಿ ಎಲ್ಲ ಸಮುದಾಯಗಳು ಸದೃಢಗೊಳ್ಳಬೇಕೆಂದರು.
ಜಿಲ್ಲಾ ಆರ್ಯ ಈಡಿಗ ಸಮಾಜದ ಕಾರ್ಯದರ್ಶಿ ಎ.ಹೆಚ್.ನಾಗರಾಜ್ ಸ್ವಾಗತಿಸಿದರು. ಜಿಲ್ಲಾ ಆರ್ಯ ಈಡಿಗ ಸಂಘದ ಉಪಾಧ್ಯಕ್ಷ ರವೀಂದ್ರಬಾಬು, ಸಂಘದ ಖಜಾಂಚಿ ದೇವೇಂದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಉಪಸ್ಥಿತರಿದ್ದರು. ಸಮತಿ ಜಯಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.








