ಚಿಕ್ಕನಾಯಕನಹಳ್ಳಿ
ಸ್ವರ್ಗಕ್ಕಿಂತ ಮಿಗಿಲಾದುದು ನಮ್ಮ ಭಾರತ ದೇಶ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳ ಸೇವೆ ಅನನ್ಯ ಎಂದು ತಹಸೀಲ್ದಾರ್ ಡಾ.ವಿ.ಮಂಜುನಾಥ್ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡಿದ್ದ ಕಿತ್ತೂರುರಾಣಿ ಚೆನ್ನಮ್ಮ, ಮಹಾತ್ಮಗಾಂಧೀಜಿ, ತಾತ್ಯಾಟೋಪಿ, ದಾಮೋದರ ಸಾವರ್ಕರ್, ಬೇಗಂಜೀನರ್‍ಮಗಲ್ ಸೇರಿದಂತೆ ಸಾವಿರಾರು ಕ್ರಾಂತಿಕಾರರು, ವೀರಸೇನಾನಿಗಳು ದೇಶಪ್ರೇಮಿಗಳು ತಮ್ಮ ಜೀವವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮುಡುಪಾಗಿಟ್ಟಿದ್ದರು. ಅವರ ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ದೇಶದ ಗೌರವವನ್ನು ಹೆಚ್ಚಿಸುವುದಕ್ಕಾಗಿ ಬಳಸಿಕೊಂಡ ಯುವ ಶಕ್ತಿಯು ಇಂದು ಮತ್ತೊಮ್ಮೆ ದೇಶದ ಅಭಿವೃದ್ಧಿಯ ಕಾರ್ಯಕ್ಕೆ ಕಂಕಣಕಟ್ಟಿಕೊಳ್ಳಬೇಕಾಗಿದೆ. ಯುವಶಕ್ತಿಯನ್ನು ದೇಶ ರಕ್ಷಿಸುವ, ಭಾರತವನ್ನು ಕಾಪಾಡುವ ಸೈನ್ಯಕ್ಕೆ ಕಳುಹಿಸಿ ನಮ್ಮ ದೇಶದ ಸೈನ್ಯವನ್ನು ಬಲಿಷ್ಠಗೊಳಿಸಬೇಕು ಎಂದ ಅವರು, ದೇಶದ್ರೋಹಿ, ವಿಚ್ಛಿದ್ರಕಾರಿ ಶಕ್ತಿಗಳನ್ನು ನಾವೆಲ್ಲರೂ ಒಟ್ಟಾಗಿ ದೇಶಭಿಮಾನದಿಂದ ಬಗ್ಗುಬಡಿಯುವಂತಾಗಬೇಕು. ವಿವಿಧ ಧರ್ಮ, ಜಾತಿ, ಪಂಗಡ, ಸಂಸ್ಕøತಿ, ಸಂಪ್ರದಾಯ, ಜನಾಂಗಗಳಿಂದ ತುಂಬಿ ಸಹಬಾಳ್ವೆಯನ್ನು ನಡೆಸುತ್ತಿರುವ ನಾವೆಲ್ಲಾ ವೈವಿಧ್ಯತೆಯ ಏಕತೆಯನ್ನು ಸಾಧಿಸಬೇಕಾಗಿದೆ ಎಂದರು.
ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತ ನಮ್ಮ ದೇಶವನ್ನು ಎಲ್ಲಾ ಹಂತಗಳಲ್ಲೂ ಅಭಿವೃದ್ಧಿ ಪಡಿಸುವ ರಾಷ್ಟ್ರ ನಾಯಕರುಗಳ, ಹೋರಾಟಗಾರರ, ಬೆಂಬಲ ಸಹಕಾರಕ್ಕೆ ಯುವ ಜನಾಂಗ ಸನ್ನದ್ಧರಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಮಹಾತ್ಮರ, ಹೋರಾಟಗಾರರ, ಸಾಧನೆ, ಆದರ್ಶಗಳನ್ನು ತಿಳಿದು ಅವರ ಸೇವೆಯನ್ನು ಸ್ಮರಿಸಬೇಕು ಎಂದರು.
ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ದೇಶಕ್ಕಾಗಿ ಹಲವು ಮಹಾನ್ ವ್ಯಕ್ತಿಗಳು ತಮ್ಮ ಜೀವವನ್ನೇ ಬಲಿದಾನ ಮಾಡಿದ್ದಾರೆ. ಅವರ ನೆನಪುಗಳು ಹಾಗೂ ಅವರು ದೇಶಕ್ಕಾಗಿ ತೋರಿಸುತ್ತಿದ್ದ ಪ್ರೀತಿ, ಕಾಳಜಿಯನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು. ಮಹಾತ್ಮಗಾಂಧೀಜಿ ನಾಯಕತ್ವದಂತೆ ದೇಶಕ್ಕಾಗಿ ಹೋರಾಟ ಮಾಡುವ, ದೇಶವನ್ನು ಕಟ್ಟುವ ನಾಯಕರು ಮುಂದೆ ಬರಬೇಕು ಎಂದ ಅವರು, ಹಸಿರೇ ಉಸಿರು, ಪರಿಸರ ಸಂರಕ್ಷಣೆ, ಸ್ವಚ್ಛತೆ ಇದ್ದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ತಾಲ್ಲೂಕನ್ನು ಬಹಿರ್ದೆಸೆ ಮುಕ್ತವನ್ನಾಗಿ ಮಾಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಾ.ಫೈಸುದ್ದೀನ್‍ಸಾಹೇಬ್, ವರದರಾಜು, ರಾಮಲಿಂಗಯ್ಯ, ವಿದ್ಯಾರ್ಥಿನಿ ಚಿನ್ಮಯಿ ಪೋಷಕರನ್ನು ಶಾಸಕ ಜೆ.ಸಿ.ಮಾಧುಸ್ವಾಮಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಹೊನ್ನಮ್ಮ ಶೇಷಯ್ಯ, ಪುರಸಭಾಧ್ಯಕ್ಷ ಮಹಮದ್ ಖಲಂದರ್, ಬಿಇಓ ಕಾತ್ಯಾಯಿನಿ, ವೃತ್ತನಿರೀಕ್ಷಣಾಧಿಕಾರಿ ನರಸಿಂಹಮೂರ್ತಿ ಉಪಸ್ಥಿತರಿದ್ದರು.