ಮಹಾರಾಣಿ ಕಾಲೇಜಿನ ಗೋಡೆ ಕುಸಿದು ಓರ್ವ ಸಾವು….!

ಮೈಸೂರು:

     ನಗರದ ಮಹಾರಾಣಿ ಕಾಲೇಜಿನಲ್ಲಿ ಶಿಥಿಲ ಕಟ್ಟಡದ ದುರಸ್ತಿ ವೇಳೆ ಗೋಡೆ ಕುಸಿದು, ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ . ಮೈಸೂರಿನ ಗೌಸಿಯಾ ನಗರದ ನಿವಾಸಿ ಸದ್ದಾಂ ಮೃತ ಯುವಕ. ಅಗ್ನಿಶಾಮಕದಳ ಸಿಬ್ಬಂದಿ‌ ಮತ್ತು ಪೊಲೀಸರಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

    ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದರಿಂದ ದುರಸ್ತಿ ಕಾರ್ಯ ನಡೆಯುತ್ತಿತ್ತು. ಕಿಟಕಿಗಳನ್ನು ತೆಗೆದು ಹಾಕುವ ವೇಳೆ ಕಟ್ಟಡ ಕುಸಿದಿದೆ. ಜೆಸಿಬಿ ಮೂಲಕ ಅವಶೇಷಗಳನ್ನು ತೆರವು ಮಾಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ಹರೀಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಾರ್ಮಿಕರು ಹೊಸ ಕಟ್ಟಡ ನಿರ್ಮಾಣಕ್ಕಾಗಿ ಶಿಥಿಲಗೊಂಡಿದ್ದ ಕಟ್ಟಡವನ್ನು ಒಡೆಯುವ ಕೆಲಸ ಮಾಡುತ್ತಿದ್ದರು. ಹಳೆಯ ಕಟ್ಟಡದಲ್ಲಿದ್ದ ಸಾಮಗ್ರಿಯನ್ನು ತೆರವುಗೊಳಿಸಿದ ಬಳಿಕ ಮೂವರು ಕಾರ್ಮಿಕರು ಕಿಟಕಿಗಳನ್ನು ತೆರವು ಮಾಡಲು ಮುಂದಾಗಿದ್ದಾರೆ. ಆಗ ಗೋಡೆ ಕುಸಿದಿದೆ. ಇಬ್ಬರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಅವಶೇಷಗಳಡಿ ಸಿಲುಕಿಕೊಂಡಿದ್ದ ಸದ್ದಾಂ ಮೃತಪಟ್ಟಿದ್ದಾರೆ.

    ಸ್ಥಳಕ್ಕೆ ಶಾಸಕರಾದ ಹರೀಶ್ ಗೌಡ, ತನ್ವೀರ್ ಸೇಠ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಕಮಿಷನರ್ ಸೀಮಾ ಲಟ್ಕರ್ ಸೇರಿದಂತೆ ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ.