ದಾವಣಗೆರೆ:
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಾವುದೇ ಕೊರತೆ ಎದುರಾಗದಂತೆ, ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಭರವಸೆ ನೀಡಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಸಕರ ಅನುದಾನದಲ್ಲಿ ಕಾಲೇಜಿಗೆ 10 ಲಕ್ಷ ರೂಗಳನ್ನು ನೀಡುತ್ತಿದ್ದೇನೆ ಎಂದು ಘೋಷಿಸಿದ ರವೀಂದ್ರನಾಥ್ ಮುಂದಿನ ದಿನಗಳಲ್ಲಿ ಇನ್ನೂ ಹಂತ ಹಂತವಾಗಿ ಅನುದಾನ ನೀಡುತ್ತೇನೆ ಎಂದರು.
ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೂ ಕಾಲೇಜಿಗೆ ಹೆಚ್ಚಿನ ಅನುದಾನ ನೀಡುವಂತೆ ಪತ್ರ ಬರೆಯುತ್ತೇನೆ. ಕಾಲೇಜಿನಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ನೀಡಬೇಕೆಂದು ಒತ್ತಾಯ ಮಾಡಲಾಗಿದೆ. ನನ್ನ ಅವಧಿಯಲ್ಲಿ ಕಾಲೇಜಿಗೆ ಯಾವುದೇ ಕುಂದು-ಕೊರತೆ ಬಾರದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಪೊಷಕರು-ಗುರುಹಿರಿಯರಿಗೆ ಗೌರವ ತರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು. ಓದಿದ್ದೇನೆ ಎಂದು ಗರ್ವ, ಅಹಂ ತೋರದೆ ನಮ್ಮ ದೇಶದ ನಡೆ-ನುಡಿ, ಸಂಸ್ಕೃತಿಗೆ ತಕ್ಕಂತೆ ನಡೆದುಕೊಳ್ಳಲ್ಲಿಕ್ಕಾಗಿ ಉತ್ತಮ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ವಿದ್ಯಾಭ್ಯಾಸ ಕಲಿಸಿದ ಗುರುಗಳು ಎಲ್ಲೆ ಸಿಗಲಿ ಅವರಿಗೆ ಗೌರವ ನೀಡಬೇಕೆಮಧೂ ಸಲಹೆ ನೀಡಿದರು.
ನಾವು ಎಷ್ಟೇ ಓದಿದರು ಎಂತಹ ಉನ್ನತ ಉದ್ಯೋಗದಲ್ಲಿದ್ದರು ನಮ್ಮ ನಡವಳಿಕೆ ಸರಿ ಇಲ್ಲದಿದ್ದರೆ ಜನರೇ ನಮ್ಮನ್ನು ತಿದ್ದುತ್ತಾರೆ. ನಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇದಕ್ಕೆ ಆಸ್ಪದ ನೀಡಬಾರದು. ಉತ್ತಮ ನಡೆ ನುಡಿ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಬಿ.ಎಸ್.ಸತೀಶ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ 1 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದೂರದ ಹಳ್ಳಿಗಳಿಂದ ಆಗಮಿಸುತ್ತಿದ್ದಾರೆ. ಶಿಫ್ಟ್ ಅವಧಿಯಲ್ಲಿ ಕಾಲೇಜು ನಡೆಯುತ್ತಿದೆ. ಇದರಿಂದಾಗಿ ವಿದ್ಯಾರ್ಥಿನಿಯರಿಗೆ ಅನಾನುಕೂಲವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಲೇಜಿಗೆ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಅದಕ್ಕಾಗಿ ಕಾಲೇಜಿನ ಪರವಾಗಿ ಕೊಠಡಿಗಳನ್ನು ನಿರ್ಮಿಸಿಕೊಡಬೇಕು ಹಾಗೂ ಕಾಲೇಜಿಗೆ ಹೆಚ್ಚುವರಿಯಾಗಿ 10 ಕೊಠಡಿಗಳ ಅವಶ್ಯಕತೆ ಇದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಕಂಪ್ಯೂಟರ್ ಪ್ರಯೋಗಾಲಯಗಳ ಅವಶ್ಯಕತೆ ಇದ್ದು, ಇವುಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೋ.ದಾದಪೀರ್ ನವಿಲೆಹಾಳ್, ಕಾಲೇಜಿನ ಅಧೀಕ್ಷಕ ಟಿ.ಶೇಷಪ್ಪ, ನಿವೃತ್ತ ಪ್ರಾಂಶುಪಾಲ ಎಸ್.ಟಿ.ಶಿವಪ್ಪ, ಡಿ.ನಾಗೇಂದ್ರನಾಯ್ಕ, ಕೆ.ಮಲ್ಲಿಕಾರ್ಜುನಗೌಡ ತೂಲಹಳ್ಳಿ, ಅನುರಾಧ, ಡಾ.ಶಕುಂತಲಾ ಎನ್, ಕೆ.ಎ.ಬಾಬು ಮತ್ತಿತರರು ಉಪಸ್ಥಿತರಿದ್ದರು.