ಮಧುಗಿರಿ
ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಮಾರುತಿ ನಗರದಲ್ಲಿ ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇದೇ ಪೋಲಿಸ್ ಠಾಣಾ ವ್ಯಾಪ್ತಿಗೆ ಸೇರಿದ ಆರ್. ಗೊಲ್ಲರಹಟ್ಟಿ ಗ್ರಾಮದ ಭಾಗ್ಯಮ್ಮ (40) ಎನ್ನುವ ಮಹಿಳೆಯೆ ಸಾವಿಗೀಡಾದ ಮಹಿಳೆಯಾಗಿರುತ್ತಾಳೆ.
ಘಟನೆ ವಿವರ: ಭಾಗ್ಯಮ್ಮನಿಗೆ ಐ.ಡಿ.ಹಳ್ಳಿ ಹೋಬಳಿಯ ಪುಲಮಾಚಿ ಗ್ರಾಮದ ಗೋಪಾಲ ಎನ್ನುವರೊಂದಿಗೆ ವಿವಾಹವಾಗಿದ್ದು, ಕಳೆದ ನಾಲ್ಕಾರು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಬಂದು ಆಂಧ್ರ ರಾಜ್ಯದ ಮಡಕಶಿರಾ ತಾಲ್ಲೂಕಿನ ಯರಬೊಮ್ಮನಹಳ್ಳಿಯ ರಂಗಧಾಮಯ್ಯ ಎನ್ನುವ ವ್ಯಕ್ತಿಯೊಂದಿಗೆ ಒಟ್ಟುಗೂಡಿ ಸಂಸಾರ ನಡೆಸಿಕೊಂಡಿದ್ದರೆಂದು ತಿಳಿದು ಬಂದಿದೆ. ಆಕೆಗೆ ಓರ್ವ ಮಗಳೂ ಇರುತ್ತಾಳೆ.
ಸದರಿಯವರು ಈ ಹಿಂದೆ ಮಧುಗಿರಿಯ ಪಟ್ಟಣದಲ್ಲಿ ವಾಸವಿದ್ದರೆಂದು ತಿಳಿದು ಬಂದಿದ್ದು, ಕೇವಲ ನಾಲ್ಕೈದು ದಿನಗಳ ಹಿಂದೆಯಷ್ಟೇ ಮಿಡಿಗೇಶಿ ಗ್ರಾಮದ ಮಾರುತಿನಗರದ ನವೀನ ಎಂಬುವರ ಮನೆಯಲ್ಲಿ ಬಾಡಿಗೆಗೆ ಬಂದಿದ್ದರು. ಅ. 25 ರಂದು ಅಪರಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಭಾಗ್ಯಮ್ಮ ಸಾವಿಗಿಡಾಗಿರುವ ಬಗ್ಗೆ ವರದಿಯಾಗಿದೆ. ಮಿಡಿಗೇಶಿ ಪೊಲೀಸ್ ಠಾಣಾಧಿಕಾರಿ ಜಿ.ಪುರುಷೋತ್ತಮ್ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿರುತ್ತಾರೆ. ಮೃತಳೊಂದಿಗೆ ಸಂಬಂಧ ಹೊಂದಿದ್ದನೆನ್ನಲಾದ ವ್ಯಕ್ತಿ ರಂಗಧಾಮಯ್ಯ ತಲೆಮರೆಸಿಕೊಂಡಿರುತ್ತಾನೆ. ಸದರಿ ಘಟನೆಗೆ ಕಾರಣ ತಿಳಿದು ಬಂದಿರುವುದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
