ತುಮಕೂರು
ಸಾಮಾಜಿಕ ಜಾಲತಾಣದಲ್ಲಿ ಮಾಜಿ ಶಾಸಕರಾದ ಬಿ.ಸುರೇಶಗೌಡರಿಗೆ ಕೊಲೆ ಮಾಡುವುದಾಗಿ ಫೇಸ್ಬುಕ್‍ನಲ್ಲಿ ಬೆದರಿಕೆ ಹಾಕಿರುವವರನ್ನು ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಗೂಳೂರು ಶಿವಕುಮಾರ್ ತಿಳಿಸಿದರು. ಗುರುವಾರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಗೂಳೂರು ಶಿವಕುಮಾರ್ ಮಾತನಾಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ, ಒಮ್ಮೆ ರಾಜ್ಯದ ನಿಗಮ ಮಂಡಳಿಯಾದ ಮೈಸೂರ್ ಪೇಪರ್ ಮಿಲ್ಸ್‍ನ ಚೇರ್ಮನ್ ಆಗಿ, ಪ್ರಸ್ತುತ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾಗಿರುವ ಮಾಜಿ ಶಾಸಕರಾದ ಬಿ.ಸುರೇಶಗೌಡರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಡಿ.ಸಿ ಗೌರಿಶಂಕರ ಅವರ ಬೆಂಬಲಿಗ ಎಂದು ಗುರ್ತಿಸಿಕೊಂಡಿರುವ, ಹಿಂಬಾಲಕನೂ ಆಗಿರುವ ಪ್ರವೀಣ್ ಸೌಮ್ಯ ಎಂಬ ಕಿಡಿಗೇಡಿಯೊಬ್ಬ, ರಂಗನ್ನಾಥ ಗೌಡ್ರು ಎಂಬುವವರ ಆ. 25 ರ ಫೇಸ್‍ಬುಕ್‍ನಲ್ಲಿ ಗ್ರಾಮಾಂತರ ಶಾಸಕ ಗೌರಿಶಂಕರ್ ಅವರ ಸುದ್ದಿಗೋಷ್ಟಿಯನ್ನು ಪೋಸ್ಟ್ ಮಾಡಿರುತ್ತಾರೆ. ಇದರಲ್ಲಿ ಆ. 28 ರಂದು ಶಾಸಕರ ಕುಮ್ಮಕ್ಕಿನಿಂದ ಅವರ ಬೆಂಬಲ ಇರುವುದಾಗಿ ಹೇಳಿಕೊಂಡು ಪ್ರವೀಣ್ ಸೌಮ್ಯ ಎಂಬುವವನು ಸುರೇಶಗೌಡನನ್ನು ಸಾಯಿಸಿಬಿಡಾನ (ಸಾಯಿಸಿಬಿಡೋಣ) ಅಂತ ಹೇಳಿ ಪ್ರಚೋದನಾಕಾರಿ ಆಗಿ ಕಮೆಂಟ್ ಮಾಡಿರುತ್ತಾನೆ.
ಇವನ ಮುಖ ಚರ್ಯೆ ಗಮನಿಸಿದಾಗ ಕೂಡ ಕೊಲೆ ಮಾಡುವ ಮನಸ್ಥಿತಿ ಉಳ್ಳವನಂತೆ ಕಾಣುತ್ತಾನೆ. ಮಾಜಿ ಶಾಸಕ ಬಿ.ಸುರೇಶಗೌಡ ಈ ಸಮಾಜದ ಆಸ್ತಿ. ಸಮಾಜಕ್ಕಾಗಿ ಸರ್ವಸ್ವವನ್ನು ಅರ್ಪಣೆ ಮಾಡಿ, ಹಗಲು ಇರುಳು ಕೆಲಸ ಮಾಡಿರುವ ನಿಸ್ವಾರ್ಥ ವ್ಯಕ್ತಿ. ಇಲ್ಲಿ 2 ಬಾರಿ ಶಾಸಕರಾಗಿರುವ ಸುರೇಶಗೌಡರಿಗೆ ಈ ರೀತಿ ಕೊಲೆ ಬೆದರಿಕೆ ಹಾಕುತ್ತಿರುವಾಗ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನ ಪಾಡೇನು ಆಗಿರಬಹುದು? ಇಂತಹ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಆಗಿಲ್ಲವೆಂದರೆ ನಾವು ಖಂಡಿತ ಇದನ್ನು ಉಗ್ರವಾಗಿ ಪ್ರತಿಭಟಿಸುತ್ತೇವೆ. ಸೆ.5 ರೊಳಗೆ ಇವನನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ 5 ಸಾವಿರ ಜನ ಸೇರಿಸಿ ಪ್ರತಿಭಟಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ, ಹಾಲಿ ಸದಸ್ಯರು ಆಗಿರುವ ವೈ.ಎಚ್ ಹುಚ್ಚಯ್ಯ ತಿಳಿಸಿದ್ದಾರೆ.
ಫೇಸ್ ಬುಕ್‍ನ ಕಾನೂನುಗಳ ಅರಿವು ಇದ್ದರೂ, ಗ್ರಾಮಾಂತರ ಶಾಸಕರ ಬೆಂಬಲ ಇದೆ, ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಮನಸೋ ಇಚ್ಚೆ ವಿರೋಧ ಪಕ್ಷದವರನ್ನು ಬೈಯುವುದು, ವಾಚಾಮ ಗೋಚರವಾಗಿ ಕಮೆಂಟ್ ಮಾಡುವುದು ಯಾರಿಗೂ ಶೋಭೆ ತರುವಂತಹದ್ದÀಲ್ಲ. ಇದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತ ಪ್ರವೃತ್ತಿ. ಇಂತಹ ಮನಸ್ಥಿತಿ ಇರುವವರಿಗೆ ಶಿಕ್ಷೆ ಆಗಲೇಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
