ಚಳ್ಳಕೆರೆ:
ರಾಜ್ಯದ ಪ್ರತಿಷ್ಠಿತ ವಾಲ್ಮೀಕಿ ಪ್ರಶಸ್ತಿ ವಿಜೇತ, ಮಾಜಿ ಸಚಿವ, ವಾಲ್ಮೀಕಿ ಸಮುದಾಯದ ಜನಾನೂರಾಗಿ ಮುಖಂಡ ತಿಪ್ಪೇಸ್ವಾಮಿ ಆಗಸ್ಟ್ 8ರ ಬುಧವಾರ ನಿಧನರಾಗಿದ್ದು, ಇವರ ವೈಕುಂಠ ಸಮಾರಾಧನೆ ಕಾರ್ಯಕ್ರಮವನ್ನು ಆಗಸ್ಟ್ 16ರ ಗುರುವಾರ ಇಲ್ಲಿನ ಕಾಟಪ್ಪನಹಟ್ಟಿಯ ಸ್ವಗೃಹದಲ್ಲಿ ನಡೆಸಲಾಯಿತು.
ಮಾಜಿ ಸಮಾಜಕಲ್ಯಾಣಸಚಿವ ಎಚ್.ಆಂಜನೇಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಮಾಜಿ ಸಚಿವ ತಿಪ್ಪೇಸ್ವಾಮಿ ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದು ಎಲ್ಲಾ ಪಕ್ಷಗಳ ಮುಖಂಡರ ವಿಶ್ವಾಸವನ್ನು ಗಳಿಸಿದ್ದು, ಅನೇಕ ಸಾರಿ ಸರ್ಕಾರಕ್ಕೆ ಸಲಹೆಗಳನ್ನು ಸಹ ನೀಡಿದ್ದರು. ನಾನು ಸುಮಾರು ಮೂರು ದಶಕಗಳಿಂದ ಅವರ ರಾಜಕೀಯ ಚಟುವಟಿಕೆಗಳನ್ನು ಹತ್ತಿರದಿಂದ ವೀಕ್ಷಿಸಿದ್ದೇನೆ. ಅವರು ಮಾಡಿದ ಸೇವಾ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ ಎಂದರು. ಅವರು ಪುತ್ರ ಕೆ.ಟಿ.ಕುಮಾರಸ್ವಾಮಿ ಹಾಗೂ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ತಮ್ಮ ಸುಧೀರ್ಘ ಜೀವನದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಯಾವುದೇ ದ್ವೇಷ ಭಾವನೆ ಇಲ್ಲದೆ ರಾಜಕೀಯ ಜೀವನವನ್ನು ಯಶಸ್ಸಿಯಾಗಿ ಪೂರೈಸಿದ ಕೀರ್ತಿ ತಿಪ್ಪೇಸ್ವಾಮಿಯವರದ್ದು, ವಿಶೇಷವಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಹಾಗೂ ರಾಜ್ಯದ ಜನತೆಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಸೇವೆಯನ್ನು ಸಲ್ಲಿಸಿದ್ಧಾರೆ. ಅವರ ಸೇವಾ ಕಾರ್ಯಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕವೆಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ ಹಾಗೂ ಇನ್ನಿತರ ಮುಖಂಡರೂ ಸಹ ಭೇಟಿ ನೀಡಿ ಸಾಂತ್ವನ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ