ದಾವಣಗೆರೆ :
ಯುವಕರು ಮಾದಕ ವಸ್ತುಗಳ ಬಳಕೆಯಿಂದ ಹಾಳಾಗುತ್ತಿದ್ದು, ಅದರಿಂದ ಮುಕ್ತಗೊಂಡು ಸಮಾಜಕ್ಕೆ ದಾರಿದೀಪವಾಗಬೇಕು. ಸಮಾಜಮುಖಿಯಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೇತನ್ ಕಿವಿಮಾತು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಎಂ.ಬಿ.ಎ ಸಭಾಂಗಣದಲ್ಲಿಂದು ಗ್ರಾಮಾಂತರ ಉಪ ವಿಭಾಗ ಪೋಲೀಸ್ ಠಾಣೆ ವತಿಯಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಮುಖ್ಯತಿಥಿಯಾಗಿ ಅವರು ಮಾತನಾಡಿದರು.
ವಿದ್ಯಾವಂತರೇ ಕಾನೂನು ಪಾಲಿಸದಿರುವುದು ನಮ್ಮ ಸಮಾಜಕ್ಕೆ ಹಾನಿಕಾರಕ. ಡ್ರಗ್ ಸೇವನೆ, ಅತ್ಯಾಚಾರ, ಕಾನೂನು ಉಲ್ಲಂಘನೆಯಂಥ ಸಮಾಜ ವಿದ್ರೋಹಿ ಘಟನೆಗಳು ಎಲ್ಲಿಯೇ ಕಂಡುಬಂದರೂ ಪೋಲಿಸರಿಗೆ ತಿಳಿಸಿ ನಮ್ಮ ಜೊತೆ ಕೈ ಜೋಡಿಸಿ ಎಂದರು. ಅದಕ್ಕಾಗಿಯೇ ಹೊಸ ಆ್ಯಪ್ ಒಂದನ್ನು ನಮ್ಮ ಇಲಾಖೆಯಿಂದ ಅಭಿವೃದ್ಧಿಗೊಳಿಸಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾದಕ ವ್ಯಸನದ ಬಗ್ಗೆ ಮಾತನಾಡಿದ ಎಸ್.ಪಿ. ದೇವರಾಜ್ ಪ್ರತೀ ವರ್ಷ ನಮ್ಮ ದೇಶದಲ್ಲಿ ಐದು ಲಕ್ಷದ ಎಪ್ಪತ್ತು ಸಾವಿರ ಜನ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಈಗಾಗಲೇ ದೇಶದಲ್ಲಿ 238 ಡ್ರಗ್‍ಗಳನ್ನು ನಿಷೇಧಿಸಲಾಗಿದೆ. ನ್ಯಾಕ್ರೋಟಿಕ್ ಮತ್ತು ಸೈಕೋಟ್ರೋಫಿಕ್ ಎಂಬ ಎರಡು ವಿಧದ ಡ್ರಗ್‍ಗಳಿದ್ದು ಅವು ಮೆದುಳಿನ ನರಕೋಶದ ಮೇಲೆ ಪ್ರಭಾವ ಬೀರಿ ಪ್ರಚೋದಕದಂತೆ ವರ್ತಿಸುತ್ತವೆ. ಅದೊಂದು ಭ್ರಮಾಲೋಕವಾಗಿದ್ದು ಅದರಿಂದ ಎಷ್ಟೋ ಕುಟುಂಬಗಳು ನಾಶವಾಗುತ್ತಿವೆ. ಅಂತಹ ಡ್ರಗ್ಸ್ ಸಾಗಾಣಿಕೆ, ಬಳಕೆ ಕಂಡು ಬಂದಲ್ಲಿ ಯಾವುದೇ ಭಯವಿಲ್ಲದೇ ಪೋಲೀಸರಿಗೆ ತಿಳಿಸಿ ಉತ್ತಮ ಸಮಾಜ ನಿರ್ಮಾಣದಲ್ಲಿ ಸಹಕರಿಸಿ ಎಂದು ಹೇಳಿದರು.
ಎ.ಎಸ್.ಪಿ ಉದೇಶ್ ಮಾತನಾಡಿ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಸಿಗ್ನಲ್ ಪಾಲಿಸುವುದು, ಹೆಲ್ಮೆಟ್ ಕಡ್ಡಾಯವಾಗಿ ಧರಿಸುವುದು, ಸೀಟ್ ಬೆಲ್ಟ್ ಹಾಕುವುದರಿಂದ ಒಂದು ಅಮೂಲ್ಯ ಜೀವ ಮತ್ತು ಆತನ ಕುಟುಂಬ ಉಳಿಯುತ್ತದೆ ಎಂದು ಹಲವು ವೀಡಿಯೋಗಳ ಮೂಲಕ ತಿಳಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ವಿ. ಹಲಸೆ ಮಾತನಾಡಿ ಸಂದರ್ಭಕ್ಕೆ ತಕ್ಕ ಹಾಗೆ ವಿವೇಚನೆಯಿಂದ ವರ್ತಿಸಿ, ಕಾನೂನು ಪಾಲಿಸಿ ಪೊಲೀಸ್ ಇಲಾಖೆಯ ಜೊತೆ ಕೈಗೂಡಿಸಿದಾಗ ಮಾತ್ರ ಮಾದಕ ದ್ರವ್ಯದಂಥ ಸಾಮಾಜಿಕ ಕಳಂಕಗಳಿಂದ ದೂರವಾಗಬಹುದು ಎಂದು ಹೇಳಿದರು.
ಡಿ.ವೈ.ಎಸ್.ಪಿ ಎಂ.ಕೆ. ಗಂಗಲ್ ಮಾತನಾಡಿ ಮಹಿಳಾ ಕಾನೂನಿನ ಬಗ್ಗೆ, ಅತ್ಯಾಚಾರದ ಸೆಕ್ಷನ್‍ಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಪೋಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು, ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಪಿ. ಕಣ್ಣನ್, ಹಣಕಾಸು ಅಧಿಕಾರಿ ಜೆ.ಕೆ ರಾಜು ಉಪಸ್ಥಿತರಿದ್ದರು, ವಿದ್ಯಾರ್ಥಿ ಕಲ್ಯಾಣ ಘಟಕ ನಿರ್ದೇಶಕ ಪ್ರೊ. ಕೆ.ವಿ. ರಂಗಪ್ಪ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ