ಮುಂಬೈ : ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌ ನೀಡಿದ ಮುಂಬೈ ಹೈಕೋರ್ಟ್…!

ಮುಂಬೈ:

     ಬಾಂಬೆ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ನೀಡಿದೆ. ಮಾನನಷ್ಟ ಪ್ರಕರಣದಲ್ಲಿ ಹೊಸದಾಗಿ ಮತ್ತು ಹೆಚ್ಚುವರಿ ದಾಖಲೆ ಸಲ್ಲಿಸುವಂತೆ ಆರ್ ಎಸ್ ಎಸ್ ಕಾರ್ಯಕರ್ತನಿಗೆ ಅನುಮತಿ ನೀಡಿದ್ದ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸಿದೆ.

    ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆಯಲ್ಲಿ ಮಹಾತ್ಮ ಗಾಂಧಿ ಹತ್ಯೆಗೆ ಬಲಪಂಥೀಯ ಸಂಘಟನೆ ಕಾರಣ ಎಂದು ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಆರ್ ಎಸ್ ಎಸ್ ಕಾರ್ಯಕರ್ತ ರಾಜೇಶ್ ಕುಂಟೆ 2014ರಲ್ಲಿ ಭಿವಾಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.

     2023ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ಥಾಣೆ ಜಿಲ್ಲೆಯ ಭಿವಂಡಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಗಾಂಧಿಯವರ ಭಾಷಣದ ಪ್ರತಿಲಿಪಿ   ಸಲ್ಲಿಸಲು ಕುಂಟೆ ಅವರಿಗೆ ಅನುಮತಿ ನೀಡಿತ್ತು. ರಾಹುಲ್ ಗಾಂಧಿ ಮ್ಯಾಜಿಸ್ಟ್ರೇಟ್ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಶುಕ್ರವಾರ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರಿದ್ದ ಏಕ ಸದಸ್ಯ ಪೀಠ, ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ