ಮುಖ್ಯಮಂತ್ರಿಗಳಿಗೆ ಮನವಿಗಳ ಮಹಾಪೂರ

ದಾವಣಗೆರೆ:

      ಸರ್ಕಾರಿ ವೈದ್ಯಾಧಿಕಾರಿಗಳ ಸಮ್ಮೇಳನದಲ್ಲಿ ಭಾಗವಹಿಸಲು ಶನಿವಾರ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ವಿವಿಧ ಸಂಘಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಮನವಿಗಳ ಮೇಲೆ ಮನವಿ ಸಲ್ಲಿಸಿದರು.

ರೈತ ಸಂಘ:

      ರಾಷ್ಟ್ರೀಕೃತ ಬ್ಯಾಂಕಿನ ಸಾಲಮನ್ನಾ, ದಲ್ಲಾಳರಿಂದ ವಂಚನೆಗೊಳಗಾದ ರೈತರಿಗೆ ನ್ಯಾಯ ಒದಗಿಸಬೇಕೆಂದು ರೈತ ಮುಖಂಡ ಚಿಕ್ಕನಹಳ್ಳಿ ಮಲ್ಲೇಶಪ್ಪ ಅವರು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು. ರೈತರ ಸಾಲಮನ್ನಾ, ಖರೀದಿ ಕೇಂದ್ರ ಪ್ರಾರಂಭಕ್ಕೆ ಒತ್ತಾಯಿಸಿ ರೈತರು ತಮ್ಮ ಅಹವಾಲು ಸಲ್ಲಿಸಿದರು. ಮೆಕ್ಕೆಜೋಳ,ಭತ್ತ, ಹತ್ತಿ, ಸೂರ್ಯಕಾಂತಿ ಬೆಳೆಗೆ ಬೋನಸ್ ನೀಡಬೇಕು. ಬೆಳೆನಷ್ಟ ಪರಿಹಾರ ಶೀಘ್ರ ವಿತರಣೆ ಮಾಡಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿದರು.

 ಸಿಪಿಐ:

      ನಿವೇಶನ ಮತ್ತು ವಸತಿ ರಹಿತ ಬಡವರಿಗೆ ನಿವೇಶನ ಸೌಲಭ್ಯ ನೀಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಂ. ಹೆಚ್.ಕೆ.ರಾಮಚಂದ್ರಪ್ಪ ಒತ್ತಾಯಿಸಿದರು.

ಏಕತಾ ವೇದಿಕೆ:

      ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕೆಂದು ಹಲವಾರು ವರ್ಷಗಳಿಂದ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡ ಅಭಿಮಾನಿಗಳು ಹೋರಾಟ ಮಾಡುತ್ತಾ ಬಂದಿದ್ದು, ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಮೊದಲ ವಾರದಲ್ಲಿ ಚಿತ್ರ ಪ್ರದರ್ಶಿಸಿ ನಂತರ ಕನ್ನಡೇತರ ಚಿತ್ರಗಳನ್ನು ಪ್ರದರ್ಶಿಸುತ್ತಾ ತಮ್ಮ ಭಂಡತನವನ್ನು ಪ್ರದರ್ಶಿಸುತ್ತಿದ್ದಾರೆ. ಹಾಗಾಗಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಾ ಕನ್ನಡೇತರ ಚಿತ್ರಗಳಿಗೆ ಅವಕಾಶ ನೀಡದಂತೆ ಚಿತ್ರೋದ್ಯಮ ಹಾಗೂ ಸರ್ಕಾರದ ಮುಖಾಂತರ ನವೆಂಬರ್ ತಿಂಗಳಲ್ಲಿ ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸುವಂತೆ ಆದೇಶ ಹೊರಡಿಸಬೇಕೆಂದು ಕರ್ನಾಟಕ ಏಕತಾ ವೇದಿಕೆಯ ರಾಜ್ಯಾಧ್ಯಕ್ಷರಾದ ಎನ್.ಹೆಚ್. ಹಾಲೇಶ್ ಮತ್ತಿತರರು ಮನವಿ ಸಲ್ಲಿಸಿದರು.

      ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವ 3312 ಡಿ ಗ್ರೂಪ್ ಹೊರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕದೆ ಸೇವೆಯಲ್ಲಿ ಮುಂದುವರೆಸಬೇಕೆಂದು ಒತ್ತಾಯಿಸಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಮಂಜುನಾಥ್ ಕೈದಾಳೆ ನೇತೃತ್ವದಲ್ಲಿ ಹಲವರು ತಮ್ಮ ಬೇಡಿಕೆ ಸಲ್ಲಿಸಿದರು.

      ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಕೂಡಲೇ ಜಾರಿ ಮಾಡಬೇಕು ಹಾಗೂ ವೀರಶೈವ ಜಂಗಮರಿಗೆ ಬೇಡ ಜಂಗಮ ಎಂದು ಪ.ಜಾತಿ ಪ್ರಮಾಣ ಪತ್ರ ನೀಡುವುದನ್ನು ತಡೆಯಬೇಕೆಂದು ಒತ್ತಾಯಿಸಿ ದಲಿತ, ಶೋಷಿತ ಸಮಾಜ ಸಂಘರ್ಷ ಸಮಿತಿ (ಡಿಎಸ್4) ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ ಮನವಿ ಮಾಡಿದರು. ನಿರ್ಗತಿಕ, ಬಡ, ಅಂಗವಿಕಲರಿಗೆ ಆಶ್ರಯ ಮನೆ ಕಲ್ಪಿಸುವಂತೆ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರು ತಮ್ಮ ಅಹವಾಲು ಸಲ್ಲಿಸಿದರು.

      ಇನ್ನು ಬೀದಿಬದಿ ವ್ಯಾಪಾರಿಗಳಿಗೆ ಮಳಿಗೆ ನಿರ್ಮಿಸಿಕೊಡಬೇಕೆಂದು ಜಿಲ್ಲಾ ಫುಟ್ ಪಾತ್ ವ್ಯಾಪಾರಿಗಳ ಸಂಘದ ಸದಸ್ಯರು ಒತ್ತಾಯಿಸಿದರು. ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುನ ಕ್ವಾರಿ ಕಾರ್ಮಿಕರ ಸಂಘದ ಸದಸ್ಯರು ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಸಲ್ಲಿಸಿದರು. ನಿಶ್ಚಿತ ಪಿಂಚಣಿ ಯೋಜನೆ ಮರುಜಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರು ಮನವಿ ಸಲ್ಲಿಸಿದರು. ಇ-ಸ್ಟಾಂಪ್ ಸೇವೆಯನ್ನು ಸೇವಾಸಿಂಧು ಯೋಜನೆಯಡಿ ನೀಡುವಂತೆ ಒತ್ತಾಯಿಸಿ ಜನಸೇವಾ ಸಾಮಾನ್ಯ ಸೇವಾ ಕೇಂದ್ರದ ಎಂ.ಜಿ.ಶ್ರೀಕಾಂತ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಸುಮಾರು ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಡಾ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಹಳೇಚಿಕ್ಕನಹಳ್ಳಿ ಎರಗುಂಟೆ ಗ್ರಾಮದ ದಲಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಮನವಿ ಸಲ್ಲಿಸಿದರು.

      ವಿವಿಧ ಸಂಘ-ಸಂಸ್ಥೆಗಳಿಂದ ಹಾಗೂ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link