ಬೆಂಗಳೂರು:
ಮುಂದಿನ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರನ್ನೂ ಪರಿಗಣಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕೃಷ್ಣ ಬೈರೇಗೌಡ ಅವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್‌ಗೆ ಜಯ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಸಿಎಂ ಆಗುವ ಅರ್ಹತೆ ಹೊಂದಿದ್ದಾರೆ. “ಇಬ್ಬರಿಗೂ ಅವಕಾಶ ಸಿಗಬೇಕು. ಜನರು ಮತ್ತು ಪಕ್ಷದ ಕಾರ್ಯಕರ್ತರು ಹೇಳುತ್ತಿರುವುದು ಇದೇ. ಅದು ನನ್ನ ಅಭಿಪ್ರಾಯ ಕೂಡ ಹೌದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದ್ದು, ನೂತನ ಮುಖ್ಯಮಂತ್ರಿಯನ್ನು ಯಾವುದೇ ಅಡ್ಡಿಗಳಿದ್ದಂತೆ ಆಯ್ಕೆ ಮಾಡಲಾಗುವುದು. ಸಿದ್ದರಾಮಯ್ಯ ಅವರು “ಅತ್ಯಂತ ಜನಪ್ರಿಯ” ನಾಯಕರಾಗಿದ್ದಾರೆ. ನಾವು ಅದನ್ನು ಗೌರವಿಸಬೇಕು ಎಂದು ತಿಳಿಸಿದರು,
ಪಕ್ಷ ಸಂಘಟನೆ ಮತ್ತು ಸವಾಲುಗಳನ್ನು ಎದುರಿಸುವಾಗ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸಾಮರ್ಥ್ಯ ಡಿಕೆ ಶಿವಕುಮಾರ್ ಅವರಿಗಿದೆ. ಡಿಕೆ.ಶಿವಕುಮಾರ್ ರಂತಹ ನಾಯಕ ಇನ್ನಾವುದೇ ಪಕ್ಷದಲ್ಲಿಯೂ ಇಲ್ಲ. ಹೀಗಾಗಿ ಇಬ್ಬರೂ ನಾಯಕರಿಗೂ “ಮನ್ನಣೆ” ನೀಡಬೇಕಿದೆ ಎಂದರು.
ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರ ಕುರಿತು ಮಾತನಾಡಿ, ಇದು ಶಿಸ್ತಿನ ಕಲ್ಪನೆಗೆ ಅನುಗುಣವಾಗಿಲ್ಲ ಎಂಬುದು ನನ್ನ ಭಾವನೆ. ನಿಮಗೆ ತಿಳಿದಿರುವಂತೆ, ಸಂವಿಧಾನದ ಪ್ರಕಾರ ಯಾವುದೇ ಉಪ ಮುಖ್ಯಮಂತ್ರಿ ಹುದ್ದೆ ಇಲ್ಲ. ಆದರೆ, ವ್ಯಕ್ತಿಯ ಹಿರಿತನ ಅಥವಾ ಕೊಡುಗೆಯನ್ನು ಗೌರವಿಸಲು ಇದನ್ನು ರಚಿಸಲಾಗಿದೆ. ಇದು ತಪ್ಪಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ