ಮೂಕಪ್ರಾಣಿಗಳಿಗೆ ಕಾಲಕಾಲಕ್ಕೆ ಚಿಕಿತ್ಸೆ ಅವಶ್ಯ

ಚಿತ್ರದುರ್ಗ:

        ಜಾನುವಾರುಗಳಿಗೆ ಸಕಾಲದಲ್ಲಿ ಲಸಿಕೆ ಮತ್ತು ಔಷಧಿಗಳನ್ನು ನೀಡುವ ಮೂಲಕ ಜೋಪಾನ ಮಾಡಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಪಶುವೈದ್ಯರು ಕೆಲಸ ಮಾಡಬೇಕೆಂದು ಜಿ.ಪಂ.ಪ್ರಭಾರೆ ಅಧ್ಯಕ್ಷೆ ಸುಶೀಲಮ್ಮ ತಿಳಿಸಿದರು.ಜಿ.ಪಂ., ಪಶುಸಂಗೋಪನಾ ಇಲಾಖೆಯಿಂದ ಎ.ಪಿ.ಎಂ.ಸಿ.ಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯರುಗಳಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

       ಮನುಷ್ಯನಿಗೆ ಆರೋಗ್ಯದಲ್ಲಿ ಏರುಪೇರಾದರೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಾನೆ. ಆದರೆ ಮೂಕ ಪ್ರಾಣಿಗಳು ಯಾರ ಬಳಿಯೂ ಹೋಗಿ ಹೇಳಿಕೊಳ್ಳುವುದಿಲ್ಲ. ಇದನ್ನರಿತು ಪಶುವೈದ್ಯರುಗಳು ಕುರಿ, ಮೇಕೆ, ಜಾನುವಾರುಗಳನ್ನು ಕಾಲ ಕಾಲಕ್ಕೆ ಪರೀಕ್ಷಿಸಿ ಚುಚ್ಚುಮದ್ದುಗಳನ್ನು ನೀಡಿ ಕಾಪಾಡಿದರೆ ನಿಜವಾಗಿಯೂ ಸಂಕಷ್ಟದಲ್ಲಿರುವ ರೈತನನ್ನು ಕೈಹಿಡಿದಂತಾಗುತ್ತದೆ ಎಂದು ಹೇಳಿದರು.

         ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನ ಡೀನ್ ಕೆ.ಸಿ.ವೀರಣ್ಣ ಬರಗಾಲದಲ್ಲಿ ರಾಸುಗಳ ನಿರ್ವಹಣೆ ಎಂಬ ವಿಷಯ ಕುರಿತು ಮಾತನಾಡಿ ಬರಗಾಲ ನೈಸರ್ಗಿಕ ವಿಕೋಪವಾಗಿರುವುದರಿಂದ ಬೇಸಿಗೆಯಲ್ಲಿ ಜಾನುವಾರುಗಳನ್ನು ಯಾವ ರೀತಿ ರಕ್ಷಿಸಬೇಕು ಎನ್ನುವ ಕುರಿತು ಪಶುವೈದ್ಯರುಗಳು ಜಾಗೃತಿ ಮೂಡಿಸಿಕೊಳ್ಳಬೇಕು. ಕಳೆದ ಹತ್ತು ವರ್ಷಗಳಿಂದಲೂ ಚಿತ್ರದುರ್ಗ ಜಿಲ್ಲೆ ಬರಗಾಲವನ್ನು ಎದುರಿಸುತ್ತಿದೆ.

         ಪ್ರತಿ ವರ್ಷವೂ ಬರಗಾಲ ಬಂದಾಗ ಪರದಾಡುವ ಬದಲು ಬರಗಾಲಕ್ಕೆ ಮೊದಲೆ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಾಗ ಬರಗಾಲವನ್ನು ಸಮರ್ಥವಾಗಿ ಎದುರಿಸಿ ರೈತರ ಜಾನುವಾರುಗಳನ್ನು ಕಾಪಾಡಬಹುದಾಗಿದೆ ಎಂದರು.ಜನಪ್ರತಿನಿಧಿಗಳು ಹೆಚ್ಚು ಒತ್ತು ಕೊಡಬೇಕು. ಜೊತೆಯಲ್ಲಿ ಪಾಲಿಸಿಯಲ್ಲಿ ಸ್ವಲ್ಪ ಬದಲಾವಣೆಯಾಗಬೇಕು. ಮುಂದಿನ ವರ್ಷದಿಂದ ಬರಗಾಲವನ್ನು ಹೇಗೆ ನಿಭಾಯಿಸಬೇಕು ಎನ್ನುವುದರ ಕುರಿತು ಈಗಿನಿಂದಲೇ ಸಿದ್ದತೆ ನಡೆಸಿಕೊಂಡರೆ ಮುಂದೆ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಪಶುವೈದ್ಯರುಗಳಿಗೆ ಕರೆ ನೀಡಿದರು.

        ತಾಂತ್ರಿಕ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಸಿ.ತಿಪ್ಪೇಸ್ವಾಮಿ ಮಾತನಾಡಿ ಚಿತ್ರದುರ್ಗ ಜಿಲ್ಲೆ ಮೊದಲೇ ಬರಪೀಡಿತ ಪ್ರದೇಶ. ಆರು ತಾಲೂಕುಗಳಲ್ಲಿಯೂ ಬರಗಾಲವಿದೆ. ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದೇವೆ. ಹೋಬಳಿಗೆ ಎರಡು ಮೇವು ಬ್ಯಾಂಕ್ ತೆರೆಯುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಕ್ಷೇತ್ರಮಟ್ಟದಲ್ಲಿ ಪಶುವೈದ್ಯರುಗಳು ಕಾರ್ಯನಿರ್ವಹಿಸುವಾಗ ರಾಸುಗಳನ್ನು ಹೇಗೆ ರಕ್ಷಣೆ ಮಾಡಬೇಕೆಂಬುದನ್ನು ಅರಿತಿರಬೇಕು ಎಂದು ಹೇಳಿದರು.

         ಕುರಿ ಮೇಕೆ ಸೇರಿದಂತೆ ರಾಸುಗಳು ರೈತರನ್ನು ಬರಗಾಲದಲ್ಲಿ ಕೈಹಿಡಿಯುತ್ತವೆ. ರಾಷ್ಟ್ರದಲ್ಲಿಯೇ ಪ್ರಥಮ ಬಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಜಾನುವಾರು ಗಣತಿಯನ್ನು ಮುಗಿಸಲಾಗಿದೆ. ಬರಗಾಲ ಹಾಗೂ ಬೇಸಿಗೆಯಲ್ಲಿ ಜಾನುವಾರುಗಳ ಪ್ರಾಣಕ್ಕೆ ಅಪಾಯವಾಗದಂತೆ ಪಶುವೈದ್ಯರುಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

        ಪಶುವೈದ್ಯಕೀಯ ಇಲಾಖೆಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಕೃಷ್ಣಪ್ಪ ಮಾತನಾಡುತ್ತ ಬರಗಾಲ ಎಂದಾಕ್ಷಣ ರೈತರು ಮೊದಲು ರಾಸುಗಳನ್ನು ಮಾರಲು ಮುಂದಾಗುತ್ತಾರೆ. ಆರಂಭದಲ್ಲಿ ಬಡಕಲು ಬರಡು ರಾಸುಗಳನ್ನು ಮಾರುತ್ತಾರೆ. ನಂತರ ಹಾಲು ಕೊಡುವ ಹಸುಗಳಿಗೂ ಕೂಡ ಮೇವು ನೀರು ಪೂರೈಸಲು ಆಗದೆ ಮಾರಾಟ ಮಾಡುತ್ತಾರೆ. ಚಿತ್ರದುರ್ಗ ಜಿಲ್ಲೆ ಬರಪೀಡಿತ ಪ್ರದೇಶ ಮೇವಿನ ಕೊರತೆ ಇದ್ದೇ ಇರುತ್ತದೆ. ಬಹಳಷ್ಟು ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಜಾನುವಾರುಗಳ ಮೇವಿಗೆ ಅಭಾವವಾಗುವುದು ಸಹಜ. ಸರ್ಕಾರದ ನೀತಿಯಲ್ಲಿ ಕೆಲವೊಂದು ಬದಲಾವಣೆಯಾಗಬೇಕು. ಪಶುವೈದ್ಯರುಗಳು ತಮ್ಮ ವೃತ್ತಿಗೆ ಧಕ್ಕೆ ತಂದುಕೊಳ್ಳದ ರೀತಿಯಲ್ಲಿ ಜಾನುವಾರುಗಳ ರಕ್ಷಣೆ ಕಡೆ ಗಮನ ಕೊಡಬೇಕು ಎಂದು ಕಿವಿಮಾತು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap