ಮೇಲ್ಮನೆ ಅಖಾಡದಲ್ಲಿ ಗೆಲುವು ನಮ್ಮದೇ, ರಾಜಕೀಯ ಪಕ್ಷಗಳ ವಕಾಲತ್ತು!

ತುಮಕೂರು:


  ಪ್ರಜಾಪ್ರಗತಿ -ಪ್ರಗತಿ ಟಿವಿಯಿಂದ ನಡೆದ ಪರಿಷತ್ ಅಖಾಡ ವಿಶೇಷ ಸಂವಾದದಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಎಸ್.ನಿರಂಜನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಜೆಡಿಎಸ್ ಗ್ರಾಮಾಂತರ ಯುವ ಕಾರ್ಯಾಧ್ಯಕ್ಷ ಎತ್ತೇನಹಳ್ಳಿ ಮಂಜುನಾಥ್ ಪಾಲ್ಗೊಂಡರು. 

ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸಾರಥಿಯಾಗುವವರ್ಯಾರು? ಪರಿಷತ್ ಅಖಾಡ ವಿಶೇಷ ಚರ್ಚೆ

ಪ್ರಜಾಪ್ರಗತಿ ಹಾಗೂ ಪ್ರಗತಿ ಟಿವಿಯಿಂದ ‘ಪರಿಷತ್ ಚುನಾವಣಾ ಅಖಾಡ’ ವಿಶೇಷ ಸಂವಾದವನ್ನು ಬುಧವಾರ ಏರ್ಪಡಿಸಲಾಗಿತ್ತು. ಸಂವಾದದಲ್ಲಿ ಪಾಲ್ಗೊಂಡ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಗೆಲುವು ನಮ್ಮದೇ ಎಂದು ವಕಾಲತ್ತು ವಹಿಸಿದರಲ್ಲದೆ, ಚುನಾವಣಾ ಅಖಾಡದಲ್ಲಿ ಕೇಳಿಬರುತ್ತಿರುವ ಒಳ ಮೈತ್ರಿ, ಹೊರಗಿನ ಅಭ್ಯರ್ಥಿ, ಸೋಲಿಸಲು ಪಕ್ಷದೊಳಗೆ ಒಳ ಸಂಚು.., ಹೀಗೆ ವಿವಿಧ ವಿಷಯಗಳ ಕುರಿತು ಸಂವಾದದ ವೇದಿಕೆಯಲ್ಲೂ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈದರು. ಸಂವಾದದಲ್ಲಿ ಪಾಲ್ಗೊಂಡ ಕೆಪಿಸಿಸಿ ಮಾಧ್ಯಮ ವಕ್ತಾರರಾದ ಟಿ.ಎಸ್.ನಿರಂಜನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ಎನ್ ಚಂದ್ರಶೇಖರ್ ಹಾಗೂ ತುಮಕೂರು ಗ್ರಾಮಾಂತರ ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ಎತ್ತೇನಹಳ್ಳಿ ಮಂಜುನಾಥ್ ಅವರುಗಳು ಏನೆಲ್ಲ ಚರ್ಚೆ ಮಾಡಿದರು ಅದರ ಸ್ಥೂಲ ಚಿತ್ರಣ ಇಲ್ಲಿದೆ.

ಹಳ್ಳಿಯಿಂದ-ದಿಲ್ಲಿವರೆಗೆ ಬಿಜೆಪಿಗೆ ಬೆಂಬಲ:

ಚರ್ಚೆ ಆರಂಭಿಸಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್ ಅವರು ಹಳ್ಳಿಯಿಂದ ದಿಲ್ಲಿಯವರೆಗೆ ಇಂದು ದೇಶದ ಜನತೆ ಬಿಜೆಪಿಯನ್ನೇ ಬೆಂಬಲಿಸುತ್ತಿದ್ದು, ಮೇಲ್ಮನೆ ಅಖಾಡದಲ್ಲೂ ಬಿಜೆಪಿ ಗೆಲುವುನಿಶ್ಚಿತ. ಕಾಂಗ್ರೆಸ್ ಅಭ್ಯರ್ಥಿಯನ್ನು ನಾವು ಸೋಲಿಸಬೇಕಿಲ್ಲ ಕಾಂಗ್ರೆಸ್‍ನವರೇ ಸೋಲಿಸುತ್ತಾರೆ. ಜೆಡಿಎಸ್ ಹೊಟ್ಟೆಪಾಡಿನ ಪಕ್ಷವಾಗಿದ್ದು, ಕೂಲಿಗಾಗಿ ಕಾಳು ಅಭಿಯಾನದಂತೆ ಚುನಾವಣಾ ಅಖಾಡದಲ್ಲಿದ್ದು, ಪೇಮೆಂಟ್ ಕೊಟ್ಟವರಿಗೆ ಟಿಕೆಟ್ ಕೊಟ್ಟು ಅವರ ಪರ ಪ್ರಚಾರಕ್ಕಿಳಿದಿದ್ದಾರೆ ಎಂದು ವ್ಯಂಗ್ಯವಾಡಿದರು.

ಲೋಕಸಭೆ ಫಲಿತಾಂಶ ಎಂಎಲ್ಸಿ ಚುನಾವಣೆ ಮೇಲೆ ಪರಿಣಾಮ ಬೀರದು:

ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಎಸ್.ನಿರಂಜನ್ ಪ್ರತಿಕ್ರಿಯಿಸಿ ಅವರು ಕಳೆದಲೋಕಸಭೆ ಚುನಾವಣೆಯಲ್ಲಿ ದೇವೇಗೌಡರಿಗಾದ ಸೋಲಿಗೂ ವಿಧಾನಪರಿಷತ್ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಗೌಡರ ಪರವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸಮಾಡಿದ್ದು, ಅಭ್ಯರ್ಥಿ ಜೊತೆಗಿನ ಮ್ಯಾನೇಜರ್‍ಗಳ ಸಂವಹನ ಕೊರತೆಯಿಂದ ಸೋಲುಂಟಾಯಿತು. ಲೋಕಸಭೆ ಚುನಾವಣೆ ಫಲಿತಾಂಶ ವಿಧಾನಪರಿಷತ್ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರದು.

ಪಕ್ಷದ ಅಭ್ಯರ್ಥಿ ರಾಜೇಂದ್ರ ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರಾಗಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸ್ಥಾನದವರೆಗೆ ಬೆಳೆದಿದ್ದು ಕೋವಿಡ್ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಬಡ ಜನರಿಗೆ ನೆರವಾಗಿದ್ದಾರೆ. 2500ಕ್ಕೂ ಅಧಿಕ ಸಂಖ್ಯೆಯ ಸದಸ್ಯರು ಕಾಂಗ್ರೆಸ್ ಬೆಂಬಲಿತರಿದ್ದು, ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮತದಾರರು ಪ್ರಜ್ಞಾವಂತರಿದ್ದು, ಜೆಡಿಎಸ್ -ಬಿಜೆಪಿಯವರು ಏನೇ ಅಪಪ್ರಚಾರ ಮಾಡಿದರು ಯಾರನ್ನು ಬೆಂಬಲಿಸಬೇಕೆಂಬ ಸಂಪೂರ್ಣ ಅರಿವು ಅವರಿಗಿದೆ ಎಂದು ತಿರುಗೇಟು ನೀಡಿದರು.

ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಒಂದೇ ನಾಣ್ಯದ 2 ಮುಖ:

ಜೆಡಿಎಸ್ ಗ್ರಾಮಾಂತರ ಯುವ ಘಟಕದ ಕಾರ್ಯಾಧ್ಯಕ್ಷ ಎತ್ತೇನಹಳ್ಳಿ ಮಂಜುನಾಥ್ ಮಾತನಾಡಿ ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಕಾಂಗ್ರೆಸ್‍ನವರು ಬಿಜೆಪಿಯ ಜೊತೆ ಕೈ ಜೋಡಿಸಿ ಅವರನ್ನು ಸೋಲಿಸಿದ್ದೇ ಸಾಕ್ಷಿ. ಬಿಜೆಪಿ ಅಭ್ಯರ್ಥಿ ಲೋಕೇಶ್‍ಗೌಡರನ್ನು ಹರಕೆಯ ಕುರಿ ರೂಪದಲ್ಲಿ ಬಿಜೆಪಿಯವರು ಕಣಕ್ಕಿಳಿಸಿದ್ದು, ಪೆರಿಯಾರ್ ಚಳುವಳಿಗಳ ಮೂಲಕ ದಕ್ಷಿಣ ಭಾರತದಲ್ಲಿ ಉದಯಿಸಿದ ಪ್ರಾದೇಶಿಕ ಪಕ್ಷದ ಅವಶ್ಯಕತೆ ಈ ರಾಜ್ಯಕ್ಕಿದೆ. ತೊಘಲಕ್ ಸಂಸ್ಕøತಿಯ ಬಿಜೆಪಿಯನ್ನು ಈ ಬಾರಿ 3ನೇಸ್ಥಾನಕ್ಕೆ ಕಳುಹಿಸಲಿದ್ದು, ಮೋದಿ ಅವರ ಪತನವೂ ಈ ಚುನಾವಣೆ ಫಲಿತಾಂಶದಿಂದ ಶುರುವಾಗಲಿದೆ. ಜೆಡಿಎಸ್ ಗೆಲ್ಲುವುದು ಶತಸಿದ್ಧ. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಜಿಲ್ಲೆಯಲ್ಲಿ ಜೆಡಿಎಸ್ 8-10ಸ್ಥಾನ ಗೆಲ್ಲುವುದು ನಿಶ್ಚಿತ ಎಂದರು.

ಚುನಾವಣೆಗೂ ಮುಂಚೆಯೇ ಬಿಜೆಪಿಗೆ ಸೋಲಿನ ಭಯ:

ಕಾಂಗ್ರೆಸ್ ಪ್ರತಿನಿಧಿ ಟಿ.ಎಸ್.ನಿರಂಜನ್ ಸಂವಾದ ಮುಂದುವರಿಸಿ ಮಾತನಾಡಿ ಚುನಾವಣೆಗೂ ಮುಂಚೆಯೇ ಬಿಜೆಪಿ ನಾಯಕರಿಗೆ ಸೋಲಿನ ಭಯ ಕಾಡುತ್ತಿದ್ದು, ದೇಶದ ಉದ್ದಗಲಕ್ಕೂ ಆಡಳಿತ ನಡೆಸುತ್ತಿದ್ದೇವೆ ಎನ್ನುವ ಬಿಜೆಪಿಯವರಿಗೆ 25 ಕ್ಷೇತ್ರಗಳಿಗೆ 25 ಅಭ್ಯರ್ಥಿಗಳನ್ನು ಹಾಕಲಾಗದೆ 20 ಮಂದಿಯನ್ನು ಮಾತ್ರ ಹಾಕಿದ್ದಾರೆ. ಅದರಲ್ಲೂ 15 ಸೀಟು ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳುತ್ತಾರೆ. ಅವರಿಗೆ ಎಲ್ಲಾ ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುವ ವಿಶ್ವಾಸವೂ ಇಲ್ಲ. ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಸ್ಥಳೀಯ ಅಭ್ಯರ್ಥಿಯೊಬ್ಬರನ್ನು ಗುರುತಿಸಿ ಟಿಕೆಟ್ ಕೊಡಲಾರದಷ್ಟು ಪಕ್ಷ ದುರ್ಬಲವಾಗಿದೆ ಎಂದು ಆಪಾದಿಸಿದರು.

ಬಿಜೆಪಿ ಅಭ್ಯರ್ಥಿ ಹೊರಗಿನವರಲ್ಲ, ಮಧುಗಿರಿ ಉಪವಿಭಾಗದಲ್ಲಿ ಪಕ್ಷ ಬಲವರ್ಧನೆ:

ಬಿಜೆಪಿ ಪ್ರತಿನಿಧಿ ಎಚ್.ಎನ್.ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿ ಹೊರಗಿನವರಲ್ಲ. ಕೊರಟಗೆರೆ ತಾಲೂಕು ವಡ್ಡಗೆರೆ ಮೂಲದವರು. ತಳಮಟ್ಟದ ಕಾರ್ಯಕರ್ತರಾಗಿ ತಾಲೂಕು ಅಧ್ಯಕ್ಷರಾಗಿ, ಬಿಬಿಎಂಪಿ ಸದಸ್ಯರಾಗುವ ಮಟ್ಟಕ್ಕೆ ಬೆಳೆದವರು. ಅಂತಹವರನ್ನು ಪಕ್ಷ ಗುರುತಿಸಿ ಅಭ್ಯರ್ಥಿಯಾಗಿಸಿದೆ. ಕೊರಟಗೆರೆ, ಮಧುಗಿರಿ, ಪಾವಗಡ ಭಾಗದಲ್ಲಿ ಆ ಭಾಗದವರೇ ಅಭ್ಯರ್ಥಿಯಾಗಿರುವುದು ಪಕ್ಷ ಸಂಘಟನೆಗೆ ಪೂರಕವಾಗಿದೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಒಬ್ಬರೇ ಶಾಸಕರಿದ್ದರೂ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಎಂ.ಆರ್.ಹುಲಿನಾಯ್ಕರ್ 1700ರಷ್ಟು ಮತ ಪಡೆದಿದ್ದರು. ಜಿಲ್ಲೆಯಲ್ಲಿ ಪ್ರಸ್ತುತ ಐವರು ಶಾಸಕರು ಅದರಲ್ಲಿ ಇಬ್ಬರು ಸಚಿವರು, ಒಬ್ಬರು ಕೇಂದ್ರ ಸಚಿವರು, ಸಂಸದರು, ಇಬ್ಬರು ಎಂಎಲ್ಸಿಗಳಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಪುನರುಚ್ಚರಿಸಿದರು.

ಕಾಂಗ್ರೆಸ್-ಬಿಜೆಪಿಗೆ ಮತಕೇಳುವ ನೈತಿಕತೆ ಇಲ್ಲ:

ಜೆಡಿಎಸ್ ಪ್ರತಿನಿಧಿ ಮಂಜುನಾಥ್ ಮಾತನಾಡಿ ಕಾಂಗ್ರೆಸ್-ಬಿಜೆಪಿಯವರು ಸ್ಥಳೀಯ ಸಂಸ್ಥೆ ಮತದಾರರ ಮತಯಾಚನೆ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ದಲಿತ ನಾಯಕ ಪರಮೇಶ್ವರ್ ಅವರನ್ನು ಸೋಲಿಸಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಲಾಯಿತು. ಕಾಂಗ್ರೆಸ್-ಬಿಜೆಪಿಯಲ್ಲಿ ವಿವಿಧ ಬಣಗಳು ಹುಟ್ಟಿಕೊಂಡಿದ್ದು, ನಾಯಕರಲ್ಲಿ ಒಗ್ಗಟ್ಟಿಲ್ಲ. ಒಬ್ಬರನ್ನೊಬ್ಬರು ಕಾಲೆಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಎಚ್‍ಡಿಡಿ ಹಾಗೂ ಎಚ್‍ಡಿಕೆ ನೇತೃತ್ವದಲ್ಲಿ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆಂದರು. ಇದೇ ವೇಳೆ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸಹ ಜೆಡಿಎಸ್ ಪಕ್ಷದ ಶಾಸಕರಾಗಿಯೇ ಇರುವುದರಿಂದ ಅವರು ಸಹ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಲಿದ್ದಾರೆಂದರು.

ಅಧಿಕಾರ ವಿಕೇಂದ್ರಿಕರಣಕ್ಕೆ ರಾಜೀವ್‍ಗಾಂಧಿ ಬುನಾದಿ:

ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರತಿನಿಧಿ ಟಿ.ಎಸ್.ನಿರಂಜನ್ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರೆಲ್ಲರು ಒಗ್ಗಟ್ಟಾಗಿದ್ದಾರೆ. ಪ್ರಜಾಪ್ರಭುತ್ವ ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಈ ಜಿಲ್ಲೆಗೆ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಟಿ.ಬಿ.ಜಯಚಂದ್ರ, ವೆಂಕಟರಮಣಪ್ಪ, ಷಡಾಕ್ಷರಿ, ಷಫಿ ಅಹಮದ್ ಅವರೆಲ್ಲ ದೊಡ್ಡ ಶಕ್ತಿ. ಖರ್ಗೆ ಬಳಿಕ ದಲಿತ ನಾಯಕರ ಸ್ಥಾನದಲ್ಲಿ ಪರಮೇಶ್ವರ್ ಪ್ರಮುಖವಾಗಿ ನಿಲ್ಲುವ ನಾಯಕ. ಇನ್ನೂ ಗ್ರಾಮ ಪಂಚಾಯತ್‍ಗೆ ಸಬಲೀಕರಣಕ್ಕೆ ಒತ್ತುಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಸಂವಿಧಾನದ 73-74ನೇ ತಿದ್ದುಪಡಿ ಮೂಲಕ ರಾಜೀವ್‍ಗಾಂಧಿ ಅವರು ಅಧಿಕಾರ ವಿಕೇಂದ್ರಿಕರಣಕ್ಕೆ ಬುನಾದಿ ಹಾಕಿದರು ಎಂದರು.

ಅಮೃತ ಯೋಜನೆಯಡಿ ಗ್ರಾಪಂಗಳ ಬಲವರ್ಧನೆ:

ಬಿಜೆಪಿ ಪ್ರತಿನಿಧಿ ಎಚ್.ಜಿ.ಚಂದ್ರಶೇಖರ್ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆ ಸ್ಮರಣೆಯಲ್ಲಿ ಅಮೃತ್ ಗ್ರಾಮ ಪಂಚಾಯತಿ ಯೋಜನೆಯಡಿ ಪಂಚಾಯಿತಿಗಳಿಗೆ ವಿಶೇಷ ಅನುದಾನ ಬಿಡುಗಡೆ, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆಸ್ವಚ್ಛ ಭಾರತ್ ಮತ್ತಿತರ ಯೋಜನೆಯಡಿ ವಿಶೇಷ ಅನುದಾನ ಒದಗಿಸಿರುವುದು ಗ್ರಾಮ ಪಂಚಾಯಿತಿಗಳ ಸದಸ್ಯರ ಗಮನಸೆಳೆದಿದೆ. ಗ್ರಾಮ ಪಂಚಾಯಿತಿ ಸದಸ್ಯರು ಪ್ರಜ್ಞಾವಂತರಾಗಿದ್ದು, ಊರಿನ ಅಭಿವೃದ್ಧಿ ದೃಷ್ಟಿಯಿಂದ ಯಾರು ಸಹಕಾರ ನೀಡುತ್ತಿದ್ದಾರೆ ಎಂಬುದನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ ಅಂತಹ ಪಕ್ಷದ ಅಭ್ಯರ್ಥಿಯನ್ನೇ ತಮ್ಮ ಪ್ರತಿನಿಧಿಯಾಗಿ ಆಯ್ಕೆಮಾಡಿಕೊಳ್ಳಲಿದ್ದಾರೆಂದರು.

ಜೆಡಿಎಸ್ ಪ್ರತಿನಿಧಿ ಎತ್ತೇನಹಳ್ಳಿ ಮಂಜುನಾಥ್ ಮಾತನಾಡಿ ಕಾಂಗ್ರೆಸ್ ಬಿಜೆಪಿ ಎರಡು ಪಕ್ಷಗಳು ನಾಗರಹಾವಿದ್ದಂತೆ. ಕಾಂಗ್ರೆಸ್ ಹುಲ್ಲಿನೊಳಗಿನ ನಾಗರ. ಆದರೆ ಬಿಜೆಪಿ ಎಡೆಮೇಲೆತ್ತಿ ಕಚ್ಚುವ ನಾಗರಹಾವಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಪಕ್ಷಗಳನ್ನು ತ್ಯಜಿಸಿ ಪ್ರಾದೇಶಿಕ ಪಕ್ಷಗಳಿಗೆ ಅಧಿಕಾರ ಕಲ್ಪಿಸಬೇಕಿದೆ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ, ಒರಿಸ್ಸಾದಲ್ಲಿ ಆರಾಜ್ಯದ ಜನತೆ ಇದನ್ನು ಮಾಡಿ ತೋರಿಸಿದ್ದಾರೆ. ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಕನ್ನಡಿಗರು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗಮನಕ್ಕೆ: ಸಂದರ್ಶನವು ಪ್ರಗತಿ ಟಿವಿಯಲ್ಲಿ ಇಂದು ಸಂಜೆ 7ಕ್ಕೆ ಪ್ರಸಾರವಾಗಲಿದೆ.

ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಅತೀ ಹೆಚ್ಚು ಬಾರಿ ಗೆದ್ದಿರುವುದು ಕಾಂಗ್ರೆಸ್. ಭಗವಾನ್, ಕೆಎನ್.ರಾಜಣ್ಣ, ಟಿ.ಎಚ್.ನಾರಾಯಣಸ್ವಾಮಿ, ವಿ.ಎಸ್.ಉಗ್ರಪ್ಪ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಹುಲಿನಾಯ್ಕರ್ ಸಹ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಗೆದ್ದವರು. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಪರಾಭವಗೊಂಡಿದ್ದ ರಾಜೇಂದ್ರ ಅವರು ಈ ಬಾರಿ ಗೆದ್ದೆ ಗೆಲ್ಲುತ್ತಾರೆ. ಬಿಜೆಪಿಗೆ ಪಾರ್ಲಿಮೆಂಟ್ನಲ್ಲಿ ಬರುವಷ್ಟು ಮತ ವಿಧಾನಸಭೆ, ಸ್ಥಳೀಯ ಚುನಾವಣೆಗಳಲ್ಲಿ ಬರೋಲ್ಲ. ಇದಕ್ಕೆ ಎಸ್. ಮಲ್ಲಿಕಾರ್ಜುನಯ್ಯ ಅವರ ಕಾಲದ ಚುನಾವಣೆ ಫಲಿತಾಂಶಗಳೇ ನಿದರ್ಶನ.
       -ಟಿ.ಎಸ್.ನಿರಂಜನ್, ಕೆಪಿಸಿಸಿ ಮಾಧ್ಯಮ ವಕ್ತಾರರು.

ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿದ್ದು, 1824 ಗ್ರಾಪಂ ಸದಸ್ಯರು 122 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ. ಐವರು ಶಾಸಕರು, ಇಬ್ಬರು ಸಂಸದರು, ಇಬ್ಬರು ವಿಧಾನಪರಿಷತ್ ಸದಸ್ಯರು ತುಮಕೂರು ಮಹಾನಗರಪಾಲಿಕೆ ಸೇರಿ ಹಲವು ನಗರಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್‍ಗೌಡ ಗೆಲುವು ಸಾಧಿಸುವುದು ನಿಶ್ಚಿತ.

-ಎಚ್.ಎನ್.ಚಂದ್ರಶೇಖರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು.

ಕಾಂಗ್ರೆಸ್-ಬಿಜೆಪಿ ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನರೋಸಿಹೋಗಿದ್ದಾರೆ. ಪ್ರಾದೇಶಿಕ ಪಕ್ಷದ ಆಡಳಿತ ಬಯಸಿದ್ದಾರೆ. ಅದರಲ್ಲೂ ತುಮಕೂರು ಜೆಡಿಎಸ್ ಭದ್ರಕೋಟೆಯಾಗಿದ್ದು, ಕಳೆದ ಎರಡು ಅವಧಿಯಿಂದ ಗೆದ್ದಿದ್ದವರು ಜೆಡಿಎಸ್ ಅಭ್ಯರ್ಥಿಯೇ. ಕೆಎಎಸ್ ಅಧಿಕಾರಿಯಾಗಿದ್ದ ಅನಿಲ್‍ಕುಮಾರ್ ಅವರನ್ನು ಉತ್ತಮ ಅಭ್ಯರ್ಥಿಯೆಂದು ಗ್ರಾಮ ಪಂಚಾಯಿತಿ ಸದಸ್ಯರು ಸ್ವೀಕರಿಸಿದ್ದಾರೆ. ಈ ಬಾರಿ ಅವರು ಗೆಲ್ಲುವುದು ಶತಸಿದ್ದ.
-ಎತ್ತೇನಹಳ್ಳಿ ಮಂಜುನಾಥ್, ಜೆಡಿಎಸ್ ಗ್ರಾಮಾಂತರ ಯುವ ಘಟಕದ ಕಾರ್ಯಾಧ್ಯಕ್ಷ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link