ಯತ್ನಾಳ್‌ ವಿರುದ್ಧ ಡಿಕೆಶಿ ಗರಂ….!

ಬೆಂಗಳೂರು

    ಕಾಂಗ್ರೆಸ್ ಪಕ್ಷದಲ್ಲಿದ್ದಿದ್ದರೆ ನಿಮ್ಮನ್ನು ಪಕ್ಷದಿಂದ ವಜಾ ಮಾಡುತ್ತಿದ್ದೆ ಎಂದು ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ ಬೆಳವಣಿಗೆ ವಿಧಾನಸಭೆಯಲ್ಲಿಂದು ನಡೆಯಿತು. ಮುಖ್ಯಮಂತ್ರಿ ಹುದ್ದೆ ಪಡೆಯಲು ಸಾವಿರಾರು ಕೋಟಿ ರೂಪಾಯಿ ಬೇಕು ಎಂದು ನೀವು ಹೇಳಿಕೆ ನೀಡಿದ್ದಿರಿ.ಅದನ್ನು ಸಾಬೀತು ಮಾಡದೆ ಸುಮ್ಮನಾಗಿದಿರಿ.ನೀವೇನಾದರೂ ನಮ್ಮ ಪಕ್ಷದಲ್ಲಿದ್ದಿದ್ದರೆ ನಿಮ್ಮನ್ನು ಪಕ್ಷದಿಂದ ವಜಾ ಮಾಡುತ್ತಿದ್ದೆ ಎಂದು ಡಿ.ಕೆ.ಶಿವಕುಆರ್ ಗುಡುಗಿದರು.

      ಶೂನ್ಯ ವೇಳೆಯಲ್ಲಿ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್, ಸರ್ಕಾರ ಬಂದಾಗ ವರ್ಗಾವಣೆಗಳಾಗುವುದು ಸಹಜ. ಐಎಎಸ್, ಕೆಎಎಸ್ ಕೇಡರ್ ಹುದ್ದೆಗೆ ಅದೇ ಕೇಡರ್‌ನ ಅಧಿಕಾರಿ ನೇಮಕ ಮಾಡಬೇಕು. ಆದರೆ, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾಗಿ ಅರ್ಹತೆ ಇಲ್ಲದವರನ್ನು ವರ್ಗಾವಣೆ ಮಾಡಲಾಗಿದೆ. ವಲಯ ಆಯುಕ್ತರ ಕೇಡರ್‌ಗಿಂತ ಕಡಿಮೆ ಇರುವವರನ್ನು ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು.

     ಇದಕ್ಕೆ ಉತ್ತರ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಗೆ ಕೆಎಂಎಎಸ್ ಕೇಡರ್ ಅಧಿಕಾರಿ ನಿಯೋಜಿಸಲಾಗಿದೆ. ಅಧಿಕಾರಿಯ ಜಾತಿ ಯಾವುದು ಎಂದು ನೋಡಿಲ್ಲ. ಸರ್ಕಾರಿ ಅಧಿಕಾರಿ ಎಂಬದನ್ನಷ್ಠೇ ನೋಡಲಾಗಿದೆ. ವರ್ಗಾವಣೆಗೆ ಸಂಬಂಧಿಸಿದಂತೆ ಬಳಸಿದ ಶಬ್ದಕ್ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಶೂನ್ಯವೇಳೆಯಲ್ಲಿ ವಿಸ್ತೃತ ಚರ್ಚೆಗೆ ಅವಕಾಶವಿಲ್ಲ ಎಂದರು. ಆಗ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನಚಕಮಕಿ ನಡೆಯಿತು.

     ಈ ಹಂತದಲ್ಲಿ ಆಡಳಿತ ಪಕ್ಷದ ಹಿರಿಯ ಸದಸ್ಯ ಬಸವರಾಜ ರಾಯರೆಡ್ಡಿ ಕ್ರಿಯಾಲೋಪ ಎತ್ತಿ ನಿಯಮಾವಳಿ ಪಾಲಿಸಬೇಕು. ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ. ಯತ್ನಾಳ್ ಬಳಸಿದ ಶಬ್ದವನ್ನು ಕಡತದಿಂದ ತೆಗೆಯಬೇಕು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅರ್ಹತೆ ಇಲ್ಲದ ಅಧಿಕಾರಿ ಹಾಕಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಯಾವ ಆಧಾರದ ಮೇಲೆ ಆ ಅಧಿಕಾರಿ ವರ್ಗಾವಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

    ಆಡಳಿತ ಪಕ್ಷದ ಸದಸ್ಯ ಕೆ.ಎಂ.ಶಿವಲಿAಗೇಗೌಡ ಮಾತನಾಡಿ, ಯತ್ನಾಳ್ ಮಾತ್ರ ಸತ್ಯಹರಿಶ್ಚಂದ್ರರೇ ಎಂದು ಪ್ರಶ್ನಿಸಿದರು. ವಾಗ್ವಾದ ನಡುವೆ ಮಾತನಾಡಿದ ಬೈರತಿ ಸುರೇಶ್ ಅವರು ಯತ್ನಾಳ್‌ಗೆ ಹೇಳಿರುವುದರ ಅಗತ್ಯವಿಲ್ಲ ನನಗಿಲ್ಲ. ಸೌಜನ್ಯಕ್ಕಾದರೂ ಅಧಿಕಾರಿ ಶಾಸಕರನ್ನು ಭೇಟಿಯಾಗಿಲ್ಲ ಎಂದರೆ ಏನರ್ಥ? ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಆಗ ಬಿಜೆಪಿಯ ಬಹುತೇಕ ಸದಸ್ಯರು ಎದ್ದು ನಿಂತು ಗದ್ದಲವೆಬ್ಬಿಸಿದರು. ಸುರೇಶ್ ಮಾತು ಮುಂದುವರೆಸಿ ಆ ಅಧಿಕಾರಿ ಕೆಎಂಎಎಸ್ ಕೇಡರ್‌ನವರು ಅದಕ್ಕೆ ಹಾಕಲಾಗಿದೆ. ಹಳಬರನ್ನೇ ಮುಂದುವರೆಸಿ ಎನ್ನುವುದರ ಬಗ್ಗೆ ಸಂಶಯವಿದೆ. ನೀವು ಏನೇ ಹೇಳಿದರೂ ಆ ಅಧಿಕಾರಿ ವರ್ಗಾವಣೆ ಮಾಡುವುದಿಲ್ಲ ಎಂದು ಸಮರ್ಥಿಸಿಕೊಂಡರು.

    ಮಧ್ಯೆ ಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಡರ್ ಬಿಟ್ಟು ಅಧಿಕಾರಿ ವರ್ಗಾವಣೆ ಮಾಡುವುದು ಎಲ್ಲಾ ಸರ್ಕಾರದಲ್ಲೂ ನಡೆದಿದೆ. ಯತ್ನಾಳ್ ಅವರು, ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ರೂಪಾಯಿ ಕೊಡಬೇಕೆಂದು ಆರೋಪ ಮಾಡಿದ್ದರು. ಮಾತಿನ ಮೇಲೆ ಹಿಡಿತವಿರಬೇಕು, ನಮ್ಮ ಪಕ್ಷದಲ್ಲಿ ಇದ್ದಿದ್ದರೆ, 24 ಗಂಟೆಯಲ್ಲಿ ಯತ್ನಾಳ್ ಅವರನ್ನು ಪಕ್ಷದಿಂದ ವಜಾ ಮಾಡುತ್ತಿದೆ ಎಂದರು.

    ಇದಕ್ಕೆ ಯತ್ನಾಳ್ ನಾನು ಭ್ರಷ್ಟರ ಪಕ್ಷದಲ್ಲಿ ಇರುವುದಿಲ್ಲ. ನನ್ನ ಹೇಳಿಕೆ ಬಗ್ಗೆ ಸಿಬಿಐ ತನಿಖೆ ಮಾಡಲಿ ಎಂದು ಹೇಳಿದರು. ಬಸವರಾಜ ಬೊಮ್ಮಾಯಿ ಮಾತನಾಡಿ, ಅಧಿಕಾರವಿದೆ ಎಂದು ಹಾಕಲ್ಲ, ಮಾಡಲ್ಲ ಎಂದು ಹೇಳಿದರೆ ಹೇಗೆ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿ ಯಾವ ಅಧಿಕಾರಿಯನ್ನಾದರೂ ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟರಲ್ಲಿ ಯತ್ನಾಳ್ ಸೇರಿದಂತೆ ಬಿಜೆಪಿ ಸದಸ್ಯರು ಸಚಿವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿ ಘೋಷಣೆ ಕೂಗಲಾರಂಭಿಸಿದರು.

    ಆಗ ಮುಖ್ಯಮಂತ್ರಿ ಮಾತನಾಡಿ ಒಬ್ಬ ಅಧಿಕಾರಿ ವರ್ಗಾವಣೆ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತೀರಿ. ಶೂನ್ಯವೇಳೆಯಲ್ಲಿ ಇಂದೇ ಉತ್ತರ ಕೊಡಬೇಕು ಎಂಬುದಿಲ್ಲ. ಯತ್ನಾಳ ಬಳಸಿದ ಶಬ್ದವನ್ನು ಕಡತದಿಂದ ತೆಗೆಯಿರಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

    ಈ ಹಂತದಲ್ಲಿ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆದು ಸದನದಲ್ಲಿ ಕೋಲಾಹಲದ ವಾತಾವರಣ ಉಂಟಾದ್ದರಿAದ ಸಭಾಧ್ಯಕ್ಷರು ಸದನವನ್ನು ಹತ್ತು ನಿಮಿಷ ಮುಂದೂಡಿದರು.

    ಮತ್ತೆ ಸದನ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು. ಬಸವರಾಜ ಬೊಮ್ಮಾಯಿ ಅವರು ಸಚಿವರಿಂದ ಸಮರ್ಪಕ ಉತ್ತರ ಬೇಕು. ಬೇರೇನೂ ಅಲ್ಲ ಎಂದರು. ಆಗ ಬಸವರಾಜ ರಾಯರೆಡ್ಡಿ ಅವರು ಕ್ರಿಯಾಲೋಪದ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಮಾತನಾಡಿ, ಉಭಯ ಸದಸ್ಯರು ಆಡಿರುವ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿ ಸದನ ನಡೆಯಲು ಅವಕಾಶ ಕಲ್ಪಿಸಲಿ ಎಂಬ ಸಲಹೆ ಮಾಡಿದರು.

    ಯತ್ನಾಳ್ ಮಾತನಾಡಿ, ನಾನು ಸಚಿವ ಬೈರತಿ ಸುರೇಶ್ ಅವರ ಮೇಲೆ ಆರೋಪಿಸಿಲ್ಲ. ವರ್ಗಾವಣೆ ವಿಚಾರದಲ್ಲಿ ಏನು ಕೇಳಿಬರುತ್ತಿದೆ ಅದನ್ನು ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು. ಮತ್ತೆ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭಾಧ್ಯಕ್ಷರು ಉತ್ತರ ಕೊಡಿಸುವ ಭರವಸೆ ನೀಡಿದಾಗ ಬಿಜೆಪಿ ಸದಸ್ಯರು ಧರಣಿ ಕೈಬಿಟ್ಟರು. ಸಚಿವ ಬೈರತಿ ಸುರೇಶ್ ಅವರು, ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಮೊದಲಿನಿಂದಲೂ ಕಿರಿಯ ಶ್ರೇಣಿ ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಿಸುತ್ತಿದ್ದು, ನಮ್ಮ ಸರ್ಕಾರ ಅದನ್ನೇ ಮುಂದುವರೆಸಿದೆ. ಒಂದು ವೇಳೆ ಲೋಪವಿದ್ದರೆ ಸರಿಪಡಿಸುವೆ ಎಂದು ಹೇಳಿದರು.

     ಈ ಹಂತದಲ್ಲಿ ಯತ್ನಾಳ್ ಅವರು ಸ್ಪಷ್ಟನೆ ಕೇಳಲು ಎದ್ದು ನಿಂತಾಗ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap