ಬಿಬಿಎಂಪಿ ವ್ಯಪ್ತಿಯಲ್ಲಿ ಮುಖ್ಯ ಆಯುಕ್ತರಿಂದ ವಿವಿಧ ಸ್ಥಳಗಳ ಭೇಟಿ ಪರಿಶೀಲನೆ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು ವಿವಿಧ ಸ್ಥಳಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಜಕ್ಕೂರು ಕ್ರಾಸ್‍ನಿಂದ ಕೃಷ್ಣ ಸಾಗರ್ ಹೋಟೆಲ್, ಕೆಂಪೇಗೌಡ ವೃತ್ತದವರೆಗಿನ ರಸ್ತೆ ಅಭಿವೃದ್ದಿಯನ್ನು ಕೈಗೊಂಡಿದ್ದು, ಚರಂಡಿ, ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಿ 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸೂಚನೆ : ಎಂ.ಇ.ಹೆಚ್.ಸಿ.ಎಸ್ ಬಡಾವಣೆಯಲ್ಲಿರುವ ಉದ್ಯಾನವನ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬೇಕು. ಜೊತೆಗೆ ಕೆಂಪೇಗೌಡ ವೃತ್ತವರೆಗಿನ ಅರ್ಕಾವತಿ ಬಿಡಿಎ ಬಡಾವಣೆಯ ರಸ್ತೆಯಲ್ಲಿ ಗುಂಡಿಗಳಿದ್ದು, ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಕ್ರೀಯಾ ಯೋಜನೆ ಅನುಮೋದನೆಯಾಗಿದ್ದು, ಕೂಡಲೆ ಟೆಂಡರ್ ಪ್ರಕ್ರಿಯೆ ಆರಂಭಿಸಿ, ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈಲ್ವೇ ಮೇಲು ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ : ಜಕ್ಕೂರು ರೈಲ್ವೇ ಮೇಲು ಸೇತುವೆ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆಯಿಂದ ವಿಳಂಬವಾಗಿದ್ದು, ಕಾಮಗಾರಿಗೆ ಅವಶ್ಯವಿರುವ ಒಟ್ಟು 48 ಸ್ವತ್ತುಗಳ ಜಾಗದ ಪೈಕಿ 38 ಸ್ವತ್ತುಗಳನ್ನು ಪಾಲಿಕೆಯ ಸ್ವಾಧೀನಕ್ಕೆ ಪಡೆದಿದ್ದು, ಉಳಿಕೆ 10 ಸ್ವತ್ತುಗಳನ್ನು ಭೂಸ್ವಾಧೀನ ಕಾಯ್ದೆಯಂತೆ ಶೀಘ್ರವೇ ಸ್ವಾಧೀನಪಡಿಸಿಕೊಂಡು ಮೇಲುಸೇತುವೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ರೈಲ್ವೇ ಮೇಲು ಸೇತುವೆಯಲ್ಲಿ ಪಾದಚಾರಿ ಸಬ್‍ವೇ ನಿರ್ಮಿಸಿದ್ದು, ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಸೂಚಿಸಿದರು. ಹಾಗೂ ಜಕ್ಕೂರು ಗ್ರಾಮ(ರೈಲ್ವೇ ಮೇಲು ಸೇತುವೆ)ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಿಡಿಎ ವತಿಯಿಂದ ಅಭಿವೃದ್ಧಿಗೊಳಿಸಬೇಕಾಗಿದ್ದು, ಈ ಬಗ್ಗೆ ಬಿಡಿಎಯೊಂದಿಗೆ ಸಮನ್ವಯ ಸಾಧಿಸಿ ರಸ್ತೆ ಅಭಿವೃದ್ದಿಗೊಳಿಸಲು ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.
ವಿವಿಧ ಸ್ಥಳಗಳ ಭೇಟಿ ಪರಿಶೀಲನೆ : ಜಕ್ಕೂರು ಡಬಲ್ ರಸ್ತೆಯನ್ನು ಥಣಿಸಂದ್ರ, ಶ್ರೀರಾಮಪುರ ರೈಲ್ವೇ ಕೆಳ ಸೇತುವೆಯಿಂದ ಸಂಪಿಗೆಹಳ್ಳಿಯ ಥಣಿಸಂದ್ರ ರಸ್ತೆ, ಕೋಗಿಲು ರಸ್ತೆಗಳನ್ನು ಪರಿಶೀಲಸಿ, ರಸ್ತೆಗಳಲ್ಲಿನ ಚರಂಡಿ ಬದಿ ಕಸ, ಶೇಖರಣೆಗೊಂಡ ಡೆಬ್ರೀಸ್, ಮಿಡಿಯೇನ್‍ಗಳನ್ನು ಶುಚಿಗೊಳಿಸಿ, ಉತ್ತಮ ಗುಣಮಟ್ಟ ಕಾಪಾಡಬೇಕು. ಕೋಗಿಲು ಕ್ರಾಸ್ ಬಳಿ ವಾಟರ್ ಲಾಗಿಂಗ್ ಪಾಯಿಂಟ್ ಪರಿಶೀಲಿಸಿ ರಸ್ತೆ ಬದಿಯ ಚರಂಡಿಯ ಹೂಳನ್ನು ತೆಗೆದು, ಮಳೆಗಾಲದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಗಾಗಿ ತಾತ್ಕಾಲಿಕವಾಗಿ ಪಂಪ್ ಅಳವಡಿಸಲು ಸೂಚಿಸಿದರು.
ಶೀಘ್ರ ರಸ್ತೆ ಸರಿಪಡಿಸಲು ಸೂಚನೆ : ಬಳ್ಳಾರಿ ಮುಖ್ಯರಸ್ತೆಯ(ಎನ್‍ಹೆಚ್-7) ಯಲಹಂಕದಿಂದ ಹೆಬ್ಬಾಳಕ್ಕೆ ಸಂಚಾರಿಸುವ ಹಾದಿಯಲ್ಲಿ ದಾಸರಹಳ್ಳಿ ಜಂಕ್ಷನ್ ಮುಂಚಿತವಾಗಿ ರಸ್ತೆ ಬದಿಯ ಚರಂಡಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ನಿರ್ಮಿಸದಿರುವುದರಿಂದ ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಲ್ಲದೆ ರಸ್ತೆಯ ಪಕ್ಕದಲ್ಲಿರುವ ವಸತಿ ಸಮುದಾಯದವರು ಕೊಳಚೆ ನೀರನ್ನು ಹರಿಬಿಟ್ಟಿದ್ದಾರೆ. ಹಾಗಾಗಿ ಜಲಮಂಡಳಿ ಸಹಾಕರದಿಂದ ಕ್ರಮವಹಿಸುವಂತೆ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಾಫಿ ಬೋರ್ಡ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಈಜುಕೊಳ ಹಾಗೂ ಒಳಾಂಗಣ ಕ್ರೀಡಾಂಗಣ ಕಟ್ಟಡದ ನಿರ್ಮಾಣ, ಟಾಟಾನಗರದಲ್ಲಿನ ಆಧಾರ್ ಕಟ್ಟಡದ ಎದುರು ರಸ್ತೆಯಲ್ಲಿ ವಾಟರ್ ಲಾಗಿಂಗ್ ಪಾಯಿಂಟ್, ಎಂ.ಎಸ್.ಪಾಳ್ಯ ವೃತ್ತದ ಬಿಎಂಟಿಸಿ ಬಸ್ ಡಿಪೆÇ ಹತ್ತಿರದ ವಾಟರ್ ಲಾಗಿಂಗ್ ಪಾಯಿಂಟ್, ಹಾಗೂ ತಾತ್ಕಾಲಿಕವಾಗಿ ರಸ್ತೆ ಬದಿ ಚರಂಡಿಯನ್ನು ಶುಚಿಗೊಳಿಸಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಪರಿಶೀಲನೆಯ ವೇಳೆ ವಲಯ ಆಯುಕ್ತರಾದ ರಂಗಪ್ಪ, ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ಮುಖ್ಯ ಅಭಿಯಂತರರಾದ ರಂಗನಾಥ್, ಲೋಕೇಶ್, ಮೋಹನ್ ಕೃಷ್ಣಾ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.