ಚಿತ್ರದುರ್ಗ :
ರಂಗಭೂಮಿಯ ಚಲನಶೀಲತೆಯು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ. ರಂಗಭೂಮಿಯ ಚಟುವಟಿಕೆಗಳು ತನ್ನ ಚಲನಶೀಲತೆ ಮತ್ತು ನಿರಂತರತೆಯಿಂದ ಸಾಮಾಜಿಕವಾಗಿ ಸಂದೇಶವನ್ನು ಬೀರುತ್ತಾ ಇಡೀ ಸಮಾಜದಲ್ಲಿ ಜಾಗೃತಿಯ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗುತ್ತಿವೆ ಎಂದು ಹಿರಿಯ ರಂಗಭೂಮಿ ಕಲಾವಿದ ಮಲ್ಲಪ್ಪನಹಳ್ಳಿ ಮಹಲಿಂಗಯ್ಯ ಹೇಳಿದರು.
ರಂಗಸೌರಭ ಕಲಾ ಸಂಘದ ವತಿಯಿಂದ ಹಿರಿಯೂರಿನ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣಕ್ಕೆ ರಂಗಭೂಮಿ ಒಂದು ಶಕ್ತಿಶಾಲಿ ಮಾಧ್ಯಮವಾಗೆದೆ. ರಂಗಚಟುವಟಿಕೆಗಳು ವ್ಯಕ್ತಿಯ ಮತ್ತು ಸಮಾಜದ ವಿಕಸನಕ್ಕೆ ಪರಿಣಾಮಕಾರಿಯಾದ ಕೊಡುಗೆ ನೀಡುತ್ತವೆ. ಪ್ರಸ್ತುತ ಸಂದರ್ಭಗಳಲ್ಲಿ ರಂಗಭೂಮಿ ರಾಜಕೀಯ ಪಕ್ಷಗಳ ಪ್ರಚಾರದ ಮಾಧ್ಯಮವಾಗಿ ದುರ್ಬಳಕೆಯಾಗುತ್ತಿರುವುದು ವಿಷಾಧನೀಯ ದೂರದರ್ಶನ ಮಾಧ್ಯಮಗಳಿಗಂದ ಗ್ರಾಮೀಣ ಪ್ರದೇಶಗಳಲ್ಲೂ ಸಾಂಸ್ಕøತಿಕ ಪಲ್ಲಟವಾಗುತ್ತಿದೆ.
ಅಗೋಚರವಾದ ದೃಶ್ಯಗಳನ್ನು ಕಣ್ಣಿಗೆ ಕಟ್ಟಿಕೊಡುವ ಕೆಲಸವನ್ನು ರಂಗಭೂಮಿ ಮಾಡಿಕೊಡುತ್ತದೆ ಎಂದರು. ಶಿಕ್ಷಣಶಾಸ್ತ್ರದ ಪ್ರಾಧ್ಯಾಪಕ ಮತ್ತು ರಂಗ ವಿಮರ್ಶಕ ಡಾ.ವಿ.ಬಸವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳು ರಂಗಭೂಮಿಯ ಆಯಾಮಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಶಿಕ್ಷಕರಾಗಿ ರೂಪುಗೊಳ್ಳಬಹುದು. ರಂಗಭೂಮಿಯು ಶಿಸ್ತು ಏಕಾಗ್ರತೆಯನ್ನು ಬೆಳಸುವುದರಿಂದ ಪಠ್ಯದ ವಿಷಯದ ವಿಸ್ತಾರತೆಯನ್ನುಂಟುಮಾಡಿ ಅರ್ಥಪೂರ್ಣ ಕಲಿಕೆಯನ್ನು ರಂಗಭೂಮಿ ಕಲಿಸುತ್ತದೆ. ಪ್ರಶಿಕ್ಷಕರಿಗೆ ರಂಗಭೂಮಿ ಪರಿಚಯವಿರಬೇಕು, ಆಂಗಿಕ. ವಾಚಿಕ, ಆಹಾರ್ಯ, ಸಾತ್ವಿಕ ಅಭಿನಯಗಳ ಜೊತೆಗೆ ನವರಸಗಳನ್ನು ರೂಢಿಸಿಕೊಳ್ಳಬೇಕು. ಆಗಲೆ ಉತ್ತಮ ಶಿಕ್ಷಕನಾಗಿ ಹೊರಹೊಮ್ಮಲು ಸಾಧ್ಯ ಎಂದರು.
ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ರಂಗಭೂಮಿ ಮುಖೇನ ಶಿಕ್ಷಣ ವಿಷಯವಾಗಿ ಉಪನ್ಯಾಸ ಮತ್ತು ಕ್ಯೂಬಾದ ರಂಗಕರ್ಮಿ, ನಾಟಕಕಾರ, ರಂಗಶಿಕ್ಷಕ ಕಾರ್ಲೋಸ್ ಸೆಲ್ಡ್ರಾನ್ ವಿರಚಿತ ರಂಗಸಂದೇಶ ವಾಚನ ಮಾಡಿದರು. ಪ್ರಾಚಾರ್ಯ ಎನ್.ಧನಂಜಯ, ಜ್ಞಾನಭಾರತಿ ವ್ಯವಸ್ಥಾಪಕ ಕೆ. ದೊರೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರಂಗಭೂಮಿ ನಟ ಎಂ.ಕೆ.ಹರೀಶ್ ಮತ್ತು ಸಂಗಡಿಗರು ರಂಗಗೀತೆ ಗಾಯನ ನೆರವೇರಿಸಿದರು. ಹಿರಿಯ ಉಪನ್ಯಾಸಕ ಎಮ್.ಬಸವರಾಜ್ ನಿರೂಪಿಸಿದರು.