ತುಮಕೂರು:
ತುಮಕೂರು ಮಹಾನಗರ ಪಾಲಿಕೆಗೆ ಆಗಸ್ಟ್ 31ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಸೋಮವಾರ (ಆಗಸ್ಟ್ 20) ಪಾಲಿಕೆ ಕಚೇರಿಯು ವಿವಿಧ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತ್ತು ಅವರ ಸಮೀಪವರ್ತಿಗಳಿಂದ ಸಂಪೂರ್ಣ ರಂಗೇರಿತ್ತು. ಸ್ಪರ್ಧಾಕಾಂಕ್ಷಿಗಳು ನೂಕು ನುಗ್ಗಲಿನಲ್ಲಿ ಹುರುಪಿನಿಂದ ನಾಮಪತ್ರ ಸಲ್ಲಿಸಿದರು.
ಸರತಿಯಲ್ಲಿ ನಾಮಪತ್ರ ಸಲ್ಲಿಕೆ:
35 ವಾರ್ಡ್ಗಳನ್ನು ಪಾಲಿಕೆ ಹೊಂದಿದ್ದು, ತಲಾ ಐದು ವಾರ್ಡ್ಗಳಿಗೆ ಒಬ್ಬ ಚುನಾವಣಾಧಿಕಾರಿ ಮತ್ತು ಒಬ್ಬ ಸಹಾಯಕ ಚುನಾವಣಾಧಿಕಾರಿಯಂತೆ ಒಟ್ಟು 7 ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಯನ್ನು ನೇಮಿಸಿದ್ದು, ಚುನಾವಣಾ ಪ್ರಕ್ರಿಯೆಗಾಗಿ ಪಾಲಿಕೆ ಕಚೇರಿಯಲ್ಲಿ ಒಟ್ಟು 7 ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ನೆಲ ಅಂತಸ್ತು ಮತ್ತು ಮೊದಲನೇ ಅಂತಸ್ತಿನಲ್ಲಿ ರುವ ಈ ಕೊಠಡಿಗಳ ಹೊರಗೆ ನಾಮಪತ್ರ ಸಲ್ಲಿಕೆಗೆ ಸರತಿ ಸಾಲು ಉಂಟಾಗಿತ್ತು. ಮೊದಲು ಬಂದವರಿಗೆ ಆದ್ಯತೆಯಂತೆ ಟೋಕನ್ ನೀಡಿ ಕ್ರಮವಾಗಿ ನಾಮಪತ್ರ ಸ್ವೀಕಾರ ಕಾರ್ಯ ನಡೆಯಿತು. ಪಾಲಿಕೆ ಕಚೇರಿಯೊಳಗೆ ಆಗಮಿಸುವವರಿಗೆ ನಿರ್ಬಂಧ ಇದ್ದುದರಿಂದ ಸ್ಪರ್ಧಾಕಾಂಕ್ಷಿಗಳೊಂದಿಗೆ ನಿಗದಿತ ಸಂಖ್ಯೆಯವರು ಮಾತ್ರ ಒಳಗೆ ಆಗಮಿಸಿದ್ದರು.
ವಾಹನ ಪ್ರವೇಶಕ್ಕೆ ನಿರ್ಬಂಧ:
ಇದೇ ರೀತಿ ಪಾಲಿಕೆ ಕಚೇರಿ ಹೊರಭಾಗದಲ್ಲೂ ವಿಪರೀತ ಜನಜಂಗುಳಿ ಇತ್ತು. ಸ್ಪರ್ಧಾಕಾಂಕ್ಷಿಗಳೊಂದಿಗೆ ಬಂದಿದ್ದ ಬೆಂಬಲಿಗರೆಲ್ಲರನ್ನೂ ಪೊಲೀಸರು ಪಾರಂಪರಿಕ ಕಟ್ಟಡವಾದ ಶ್ರೀ ಕೃಷ್ಣರಾಜೇಂದ್ರ ಪುರಭವನದ ಬಳಿ ಹೊರಗಡೆಯೇ ತಡೆದು ನಿಲ್ಲಿಸಿದ್ದರು. ಜೊತೆಗೆ ಪುರಭವನದ ಸುತ್ತಮುತ್ತ ವಿಪರೀತ ವಾಹನ ದಟ್ಟಣಿಯೂ ಇತ್ತು. ಇಡೀ ಆವರಣ ಜನ-ವಾಹನಗಳಿಂದ ತುಂಬಿಹೋಗಿತ್ತು. ಹೀಗಾಗಿ ಪುರಭವನ ವೃತ್ತದಿಂದಲೇ ವಾಹನಗಳನ್ನು ಒಳಕ್ಕೆ ಬಿಡದೆ ಪೊಲೀಸರು ತಡೆದರು. ಪಾಲಿಕೆ ಒಳಗೆ ಮತ್ತು ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ರಂಗೇರಿದ ವಾತಾವರಣ:
ನಾಮಪತ್ರ ಸಲ್ಲಿಕೆಗೆ ಬಂದ ಬಹುತೇಕ ಪುರುಷ ಸ್ಪರ್ಧಾಕಾಂಕ್ಷಿಗಳು ತಮ್ಮ ಪಕ್ಷಗಳ ಚಿಹ್ನೆಯುಳ್ಳ ಶಲ್ಯದಂಥ ವಸ್ತ್ರವನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದು, ಬಿಳಿ ಉಡುಪು ಧರಿಸಿ ಆಗಮಿಸಿದ್ದರು. ಮಹಿಳಾ ಸ್ಪರ್ಧಿಗಳೂ ಇದೇ ರೀತಿಯ ಶಲ್ಯವನ್ನು ಧರಿಸಿದ್ದರು. ಸ್ವತಂತ್ರವಾಗಿ ಸ್ಪರ್ಧಿಸಬಯಸಿ ಆಗಮಿಸಿದ್ದವರೂ ಎದ್ದುಕಾಣುವ ಉಡುಪಿನಲ್ಲಿ ಬಂದಿದ್ದರು. ಮಹಿಳಾ ಸ್ಪರ್ಧಾಳುಗಳ ಜೊತೆ ಅವರ ಪತಿರಾಯರುಗಳೂ ಆಗಮಿಸಿದ್ದರು. ‘‘ಓಹ್.. ಇವರೇ ಅಭ್ಯರ್ಥಿ ಇರಬೇಕು’’ ಎಂದು ಅಲ್ಲಿದ್ದವರು ಉದ್ಗರಿಸುವಂತೆ ಸ್ಪರ್ಧಾಕಾಂಕ್ಷಿಗಳೆಲ್ಲರೂ ವಿಶೇಷ ಗೆಟಪ್ನಲ್ಲಿ ವರ್ಣರಂಜಿತವಾಗಿ ಕಾಣಿಸುತ್ತಿದ್ದುದರಿಂದ, ಪಾಲಿಕೆ ಕಚೇರಿಯೊಳಗೆ ವಾತಾವರಣ ರಂಗೇರಿತ್ತು.
ಸೋಮವಾರ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಯಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾದ ಪ್ರಯುಕ್ತ ಆಗಸ್ಟ್ 17 ರಂದು ಶುಕ್ರವಾರ ಸರ್ಕಾರಿ ರಜೆ ಘೋಷಣೆ ಆಗಿದ್ದ ಹಿನ್ನೆಲೆಯಲ್ಲಿ ಅಂದು ನಾಮಪತ್ರ ಸಲ್ಲಿಕೆಗೆ ಅವಕಾಶ ಲಭಿಸಿರಲಿಲ್ಲ. ಹೀಗಾಗಿ ಸೋಮವಾರ ಕಡೆಯ ದಿನವೂ ಆಗಿದ್ದುದರಿಂದ ಸಹಜವಾಗಿಯೇ ಆಕಾಂಕ್ಷಿಗಳೆಲ್ಲರೂ ನಾಮಪತ್ರ ಸಲ್ಲಿಸಲು ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು. ನಾಮಪತ್ರ ಸಲ್ಲಿಕೆಗೆ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ಕಾಲಾವಕಾಶ ಇದ್ದುದರಿಂದ ಅಷ್ಟರೊಳಗೆ ಚುನಾವಣಾಧಿಕಾರಿ ಕಚೇರಿ ಒಳಗೆ ಬಂದವರಿಗೆ ಟೋಕನ್ ನೀಡಿ, ಬಳಿಕ ಕ್ರಮವಾಗಿ ನಾಮಪತ್ರ ಸ್ವೀಕರಿಸಲಾಯಿತು.
ಮೋಸದ ವಿರುದ್ಧ ಸ್ಪರ್ಧೆ:
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ನಲ್ಲಿ ಟಿಕೆಟ್ ನಿರೀಕ್ಷಿಸಿ, ಕಡೆ ಗಳಿಗೆಯಲ್ಲಿ ಆಯಾ ಪಕ್ಷದಿಂದ ಅವಕಾಶ ವಂಚಿತರಾದವರು ಮತ್ತೊಂದು ಪಕ್ಷದ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿದರು. ಅದೇ ಹೊತ್ತಿಗೆ ಪಕ್ಷಗಳಿಂದ ಟಿಕೆಟ್ ಸಿಗದೆ ಅಸಮಾಧಾನಗೊಂಡವರು ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.
‘‘ಪಕ್ಷಕ್ಕಾಗಿ ಕೆಲಸ ಮಾಡಿದೆವು. ಪಾಲಿಕೆಗೆ ಟಿಕೆಟ್ ನೀಡುವ ಭರವಸೆಯನ್ನೂ ಮುಖಂಡರು ಕೊಟ್ಟಿದ್ದರು. ಆದರೆ ಈಗ ನಮ್ಮನ್ನು ನಿರ್ಲಕ್ಷಿಸಿ ಬೇರೆಯವರಿಗೆ ಟಿಕೆಟ್ ಕೊಟ್ಟಿದ್ದಾರೆ. ಕೆಲಸ ಮಾಡಲು ಮಾತ್ರ ಆಗ ನಾವು ಬೇಕಾಗಿತ್ತು. ಈಗ ನಾವು ಬೇಡವೇ? ಈ ರೀತಿ ನಮಗೆ ಮುಖಂಡರುಗಳಿಂದ ಮೋಸ ಆಗಿರುವುದರಿಂದ ಅದನ್ನು ವಿರೋಧಿಸಿ ನಾವು ಈಗ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದೇವೆ’’ ಎಂದು ನಾಮಪತ್ರ ಸಲ್ಲಿಕೆಗೆ ಬಂದಾಗಲೂ ಅನೇಕರು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದರು. ಒಂದೇ ವಾರ್ಡ್ನಿಂದ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸುವವರು ಆಕಸ್ಮಿಕವಾಗಿ ಸಿಕ್ಕಾಗ ಪರಸ್ಪರ ಶುಭಾಶಯ ಹೇಳಿಕೊಂಡರು.
‘‘ನಾವಿಬ್ಬರೂ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸುತ್ತಿದ್ದೇವೆ. ಬಳಿಕ ನಮ್ಮಿಬ್ಬರಲ್ಲಿ ಒಬ್ಬರು ಮಾತ್ರ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿ ನಮಗಾದ ಅನ್ಯಾಯಕ್ಕೆ ಸೆಡ್ಡು ಹೊಡೆಯುತ್ತೇವೆ’’ ಎಂದು ಸ್ವತಂತ್ರ ಅಭ್ಯರ್ಥಿಯೊಬ್ಬರು ಹೇಳಿದರು.
ಬಿ ಫಾರಂ ಸಿಕ್ಕರೂ ಬೇರೆಯವರಿಗೆ ಸ್ಥಾನ ಬಿಟ್ಟು ಕೊಟ್ಟವರು
‘‘16 ನೇ ವಾರ್ಡ್ನಿಂದ ಸ್ಪರ್ಧಿಸಲು ನನಗೇ ಕಾಂಗ್ರೆಸ್ ಬಿ ಫಾರಂ ಕೊಟ್ಟಿತ್ತು. ಆದರೆ ಮತ್ತೊಬ್ಬರು ನನಗೆ ತುಂಬ ಒತ್ತಡ ಹಾಕಿದರು. ಆದ್ದರಿಂದ ಇಂದು ಬೆಳಗ್ಗೆ ನಾನು ಸ್ಪರ್ಧಿಸುವುದು ಬೇಡವೆಂದು ನಿರ್ಧರಿಸಿ, ಆ ನನ್ನ ಗೆಳೆಯರಿಗೆ ನನ್ನ ಸ್ಥಾನ ಬಿಟ್ಟುಕೊಟ್ಟೆ. ಅವರೀಗ ನಾಮಪತ್ರ ಸಲ್ಲಿಸುತ್ತಿದ್ದಾರೆ’’ ಎಂದು ಓರ್ವರು ಅಲ್ಲಿ ತಣ್ಣಗೆ ಹೇಳಿಕೊಂಡರು.
ಹಾಲಿ ಪಾಲಿಕೆ ಸದಸ್ಯರುಗಳು, ಮಾಜಿ ನಗರಸಭಾ ಸದಸ್ಯರುಗಳು ಹಾಗೂ ಹೊಸಬರು, ಪ್ರಭಾವಿಗಳ ಕುಟುಂಬ ವರ್ಗದವರು, ಹಾಲಿ ಸದಸ್ಯರ ಪತ್ನಿಯರು-ಹೀಗೆ ಅನೇಕ ಜನರು ಬಂಧು-ಬಳಗದೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಅಲ್ಲೇ ಸಿಕ್ಕಿದವರ ‘‘ಆಶೀರ್ವಾದ’’ ಬಯಸುತ್ತಿದ್ದರು.
ಇಂದು ನಾಮಪತ್ರ ಪರಿಶೀಲನೆ:
ಆಗಸ್ಟ್ 21 ರಂದು (ಮಂಗಳವಾರ) ಬೆಳಗ್ಗೆ 11 ಗಂಟೆಯಿಂದ ಪಾಲಿಕೆ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯ ಆರಂಭವಾಗುವುದು.
23 ರಂದು ವಾಪಸ್ ಗೆ ಅವಕಾಶ:
ನಾಮಪತ್ರ ವಾಪಸ್ ಪಡೆಯಲು ಆಗಸ್ಟ್ 23 (ಗುರುವಾರ) ರಂದು ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶವಿದೆ. ಈ ಬಗೆಗಿನ ನೋಟಿಸನ್ನು ಅಭ್ಯರ್ಥಿ/ಅವರ ಸೂಚಕರು/ ಅವರ ಚುನಾವಣಾ ಏಜೆಂಟ್ ಸಲ್ಲಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ