ದಾವಣಗೆರೆ
ಜನರನ್ನು ತಪ್ಪು ದಾರಿಗೆ ಎಳೆದು, ರಸವೈದ್ಯ ಪದ್ಧತಿಗೆ ಕಳಂಕ ತರದಂತೆ ಸೇವೆ ಸಲ್ಲಿಸಬೇಕು ಎಂದು ಹೆಬ್ಬಾಳು ವಿರಕ್ತಮಠದ ಶ್ರೀಮಹಾಂತ ರುದ್ರೇಶ್ವರ ಸ್ವಾಮೀಜಿಯವರು ಪಾರಂಪರಿಕ ಹಾಗೂ ರಸ ವೈದ್ಯರಿಗೆ ಕಿವಿಮಾತು ಹೇಳಿದ್ದಾರೆ.
ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ ಹಾಗೂ ಪಾರಂಪರಿಕ ವೈದ್ಯ ಗುರುಕುಲ ವತಿಯಿಂದ ಏರ್ಪಡಿಸಿದ್ದ 10 ದಿನಗಳ ರಸವೈದ್ಯ ತರಬೇತಿಯ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೆಲ ರಸವೈದ್ಯರು ಚಿನ್ನ ತಯಾರಿಸುವುದಾಗಿ ಹೇಳಿ ಜನರನ್ನು ವಂಚಿಸುವ ಘಟನೆಗಳು ನಡೆಯುತ್ತಿವೆ. ಈ ರೀತಿ ಜನರನ್ನು ತಪ್ಪು ದಾರಿಗೆಳೆಯುವ ಮೂಲಕ ವೈದ್ಯ ಪದ್ಧತಿಗೆ ಯಾವುದೇ ಕಾರಣಕ್ಕೂ ಕಳಂಕ ಕಳಂಕ ತರಬೇಡಿ. ಬದಲಿಗೆ ಸ್ವಾರ್ಥ ಬಿಟ್ಟು ಸೇವಾ ಮನೋಭಾವದಿಂದ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ರಸವೈದ್ಯ ಪದ್ಧತಿಯು ಪಾರಂಪರಿಕ ವೈದ್ಯ ಪರಂಪರೆಯ ಭಾಗವಾಗಿದ್ದು, ಪಾದರಸ ಸೇರಿದಂತೆ ವಿವಿಧ ಲೋಹ, ಖನಿಜಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಗಿಡಮೂಲಿಕೆಗಳೊಂದಿಗೆ ಬೆರೆಸಿ, ರೋಗವನ್ನು ಗುಣಪಡಿಸುತ್ತದೆ. ಹೀಗಾಗಿ ಈ ವೈದ್ಯ ಪದ್ಧತಿಯನ್ನು ಬಳಸಿಕೊಂಡು ಸಮಾಜಕ್ಕೆ ಅನುಕೂಲವಾಗುವ ರೀತಿಯಲ್ಲಿ ಮನುಷ್ಯನ ರೋಗ-ರುಜಿನ ದೂರಮಾಡಬೇಕೆಂದು ಕರೆ ನೀಡಿದರು.
ಹೊಸ ಕಾಲದ ರೋಗಗಳನ್ನು ಸಹಹ ಗುಣ ಪಡಿಸುವ ಶಕ್ತಿ ರಸವೈದ್ಯ ಪದ್ಧತಿಗಿದೆ. ಆದ್ದರಿಂದ ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ ಎಂದ ಅವರು, ಆಧುನಿಕ ವೈದ್ಯಕೀಯ ಪದ್ಧತಿಯಿಂದಾಗಿ ಔಷಧವೇ ರೋಗಿಗಳ ಪಾಲಿಗೆ ವಿಷವಾಗುತ್ತಿದೆ. ರೋಗ ಗುಣವಾದರೂ ಅಡ್ಡ ಪರಿಣಾಮಗಳಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಪ್ರಾಚೀನ ಋಷಿಮುನಿಗಳ ಕೊಡುಗೆಯಾದ ಪಾರಂಪರಿಕ ವೈದ್ಯ ಪದ್ಧತಿಯು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ, ರೋಗವನ್ನು ಸಮೂಲವಾಗಿ ನಿವಾರಿಸುವ ಶಕ್ತಿ ಹೊಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ನೇರ್ಲಿಗಿ ಗುರುಸಿದ್ಧಪ್ಪ, ಗುರು-ಶಿಷ್ಯ ಪರಂಪರೆಯಲ್ಲಿ ರಸವೈದ್ಯ ಪದ್ಧತಿ ಬೆಳೆದು ಬಂದಿದೆ. ಋಷಿಗಳ ಸೇವೆ ಮಾಡುವ ಮೂಲಕ ಶಿಷ್ಯರು ಈ ವಿದ್ಯೆಯನ್ನು ಸಂಪಾದಿಸುತ್ತಿದ್ದರು. ಸಮಾಜ ಸೇವೆಗಾಗಿ ಕೈಗೊಳ್ಳುತ್ತಿದ್ದ ಈ ವಿದ್ಯೆಯು ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್.ದೇವರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಛಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ, ರಸವೈದ್ಯ ಪ್ರವೀಣ ಸುರೇಶ್ ಆಚಾರ್ ಮುದ್ದೇಬಿಹಾಳ್, ಗುರುಕುಲದ ಪ್ರಾಚಾರ್ಯ ಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.