ರಸ್ತೆ, ಚರಂಡಿ ನಿರ್ಮಾಣಕ್ಕೆ ಆಗ್ರಹಿಸಿ ಗಜ್ಜಿಗರಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ಶಿರಾ : 

    ತಾಲ್ಲೂಕಿನ ಗಜ್ಜಿಗರಹಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಊರಿನ ಗ್ರಾಮಸ್ಥರು ರಸ್ತೆಯಲ್ಲಿ ರಾಗಿ ಪೈರು ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

      ಈ ವೇಳೆ ಜಿಪಂ ಶಕ್ತಿ ಕೇಂದ್ರದ ಘಟಕ ಅಧ್ಯಕ್ಷ ಶ್ರೀನಿವಾಸ್ ಜಿ.ವಿ ಮಾತನಾಡಿ, ಗಜ್ಜರಹಳ್ಳಿ ಗ್ರಾಮವು ದಶಕಗಳಿಂದಲೂ ಮುನ್ನೆಲೆಗೆ ಬಾರದೆ ಅಭಿವೃದ್ಧಿಯಿಂದ ವಂಚಿತವಾಗಿದೆ. ಗ್ರಾಮಕ್ಕೆ ಡಾಂಬರು ರಸ್ತೆ, ಸಿಸಿ ರಸ್ತೆ, ಚರಂಡಿ ನಿರ್ಮಾಣದ ಅವಶ್ಯಕತೆಯಿದೆ. ಮಳೆಗಾಲದಲ್ಲಿ ಊರಿನ ಮುಖ್ಯ ರಸ್ತೆ ನೀರಿನಿಂದ ಆವೃತವಾಗಿ ಬೈಕ್ ಸವಾರರು, ವಯೋವೃದ್ಧರು, ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲಿ ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ತ್ವರಿತವಾಗಿ ಗಮನಹರಿಸಿ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಒತ್ತು ಕೊಡಬೇಕೆಂಬುದು ಗ್ರಾಮಸ್ಥರ ಮನವಿ ಎಂದರು.

      ತಾವರೆಕೆರೆ ಗ್ರಾಪಂ ಉಪಾಧ್ಯಕ್ಷ ನಿತ್ಯಾನಂದ ಜಿ.ಎಲ್. ಮಾತನಾಡಿ ಮಳೆಗಾಲದಲ್ಲಿ ಊರಿನ ರಸ್ತೆಗಳೆಲ್ಲ ಮಳೆ ನೀರಿನಿಂದ ಕೆಸರು ಗದ್ದೆಗಳಾಗುತ್ತವೆ. ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಇದುವರೆಗೆ ಗ್ರಾಮದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಸಾಧ್ಯವಾಗಿಲ್ಲ. ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಭರವಸೆ ನೀಡಿದ್ದ ಶಾಸಕರು ಈವರೆಗೆ ತಿರುಗಿಯೂ ನೋಡಿಲ್ಲ ಎಂದರು.

      2021-22 ನೇ ಸಾಲಿನ ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ತಾಲ್ಲೂಕಿನ ಸುಮಾರು 60 ಹಳ್ಳಿಗಳ ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಹಲವು ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಿ, ಈಗಾಗಲೇ ಹಲವೆಡೆ ಚಾಲನೆ ನೀಡಲಾಗಿದೆ. ಆದರೆ, ಗಜ್ಜಿಗರಹಳ್ಳಿ ಗ್ರಾಮದ ಮುಖ್ಯ ರಸ್ತೆ ಹಾಗೂ ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದರೂ ಸಹ ಗ್ರಾಮವನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಚಿಕ್ಕ ಗ್ರಾಮವನ್ನು ಪರಿಗಣಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾಯೋನ್ಮುಖರಾಗಬೇಕು ಎಂದು ನಿತ್ಯಾನಂದ ಮನವಿ ಮಾಡಿದರು.

     ಪ್ರತಿಭಟನೆಯಲ್ಲಿ ರಾಜಪ್ಪ, ರಾಮಕೃಷ್ಣಪ್ಪ, ಗೋಪಾಲಕೃಷ್ಣ, ಚಂದ್ರೇಗೌಡ, ದಲಿತ ಮುಖಂಡರಾದ ರಂಗನಾಥ್ ಜಿ.ಎಸ್, ಮಹೇಶ್, ನರಸಿಂಹಯ್ಯ, ನವೀನ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link