ಹಂತಕರಿಗೆ ಕಠಿಣ ಶಿಕ್ಷೆ ಆಗಲಿ ಎಂದು ಆಗ್ರಹ
ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಿದೆ? ಎಂದು ಪ್ರಶ್ನೆ
ಬೆಂಗಳೂರು: ರಾಜಸ್ಥಾನದಲ್ಲಿ ಮುಗ್ಧ ಟೈಲರ್ ಶಿರಚ್ಛೇದ ಮಾಡಿರುವ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಂಡಿಸಿದ್ದಾರೆ.
ಇದು ಅತ್ಯಂತ ಹೇಯ ಕೃತ್ಯ. ಕೊಲೆಪಾತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ, ಅಲ್ಲದೆ, ಕೊಲೆಯಾದ ಕನ್ಹಯ್ಯ ಲಾಲ್ ಅವರ ಕುಟುಂಬದ ಜತೆ ನಾವೆಲ್ಲರೂ ನಿಲ್ಲಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಸರಣಿ ಟ್ವೀಟ್ ಮಾಡಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.
ರಾಜಸ್ಥಾನದಲ್ಲಿ ಮುಗ್ಧ ಟೈಲರ್ ಶಿರಚ್ಛೇದ ಮಾಡಿರುವ ಘಟನೆ ನನಗೆ ತೀವ್ರ ಘಾಸಿ ಉಂಟು ಮಾಡಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪೈಶಾಚಿಕ ಕೃತ್ಯ. ಹಿಂಸೆ ಯಾವುದಕ್ಕೂ ಉತ್ತರವಲ್ಲ, ಪರಿಹಾರವೂ ಅಲ್ಲ. ಯಾವ ಧರ್ಮವೂ ಹಿಂಸೆಯನ್ನು ಒಪ್ಪುವುದೂ ಇಲ್ಲ.
ಕನ್ಹಯ್ಯ ಲಾಲ್ ಅವರ ಕಿರಾತಕ ಹತ್ಯೆಯನ್ನು ಪಕ್ಷಾತೀತವಾಗ ಖಂಡಿಸಲೇಬೇಕು. ಆ ಪಾತಕಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕು. ಮತ್ತೊಮ್ಮೆ ಇಂಥ ಘಟನೆಗಳು ಮರುಕಳಿಸಲೇಬಾರದು. ರಕ್ಕಸರಷ್ಟೇ ಇಂಥ ಕೃತ್ಯ ಎಸಗಲು ಸಾಧ್ಯ. ಕಾನೂನು-ಕಾಯ್ದೆ ಎನ್ನುವುದಕ್ಕಿಂತ ಮನಃಪರಿವರ್ತನೆಯಿಂದಲೇ ಇಂಥ ಸ್ಥಿತಿಯಿಂದ ಎಲ್ಲರೂ ಹೊರಬೇಕಿದೆ.
ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಿದೆ? ಕೊಲೆ, ಕೋಮುವಾದ, ಅಸಹಿಷ್ಣುತೆ, ದ್ವೇಷದಿಂದ ಧರ್ಮಗಳು ಉಳಿಯುವುದಿಲ್ಲ. ಮಾನವೀಯತೆ ಸತ್ತರಷ್ಟೇ ಕೋಮುವಾದ ವಿಜೃಂಭಿಸುತ್ತದೆ. ದರ್ಪ ಹೆಚ್ಚಿದಷ್ಟೂ ಧರ್ಮಗಳೂ ಅಳಿಯುತ್ತವೆ. ಕನ್ಹಯ್ಯ ಕೊಲೆ ಇಂಥ ದರ್ಪವನ್ನು ನಾಮಾವಶೇಷ ಮಾಡಲಿ.
ಕನ್ಹಯ್ಯ ಅವರಿಗಾಗಿ ಇಡೀ ಭಾರತ ಕಣ್ಣೀರಿಡುತ್ತಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ. ಕನ್ಹಯ್ಯ ಅವರ ಸಾವು ಕೊಂದು ವಿಜೃಂಭಿಸುವ ಕಿರಾರತಕ ಮನಃಸ್ಥಿತಿಯನ್ನು ಬದಲಿಸಲಿ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.