ಬೆಂಗಳೂರು
ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತ ಪತ್ರ ಹೊರಡಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಇಂದಿಲ್ಲಿ ಘೋಷಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಆರ್ಥಿಕ ಸ್ಥಿತಿಗತಿ ಒಳಗೊಂಡ ಶ್ವೇತ ಪತ್ರ ಹೊರಡಿಸುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಶೀಘ್ರದಲ್ಲೇ ಅವರ ಬೇಡಿಕೆ ಈಡೇರಿಸಲಾಗುವುದು ಎಂದರು.
ಬಿಜೆಪಿಯವರಿಗೆ ಶ್ವೇತ ಪತ್ರ ಬೇಕೋ, ಕೇಸರಿ ಪತ್ರ ಬೇಕೋ ತಮಗೆ ತಿಳಿದಿಲ್ಲ. ಆದರೆ ಆರ್ಥಿಕ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲುವ ಪತ್ರವನ್ನಂತೂ ಹೊರಡಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಸಮಾಧಾನ ತಂದಿದೆ. ಜನತೆ ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ. ದೊಡ್ಡ ಮಟ್ಟದ ಪ್ರಚಾರ ಭರಾಟೆಯನ್ನು ನಾವು ನಡೆಸಿಲ್ಲ. ಅಭ್ಯರ್ಥಿಗಳು ಸ್ಥಳೀಯವಾಗಿ ಚುನಾವಣೆ ಎದುರಿಸಲಿ ಎಂದು ತೀರ್ಮಾನಿಸಿದ್ದೇವು. ಆದರೆ ಬಿಜೆಪಿಯವರು ಜಿಲ್ಲಾವಾರು ತಂಡಗಳನ್ನು ರಚಿಸಿಕೊಂಡು ಪ್ರಚಾರ ಮಾಡಿದ್ದರು. ಅವರಂತೆ ನಾವು ಅಬ್ಬರದ ಪ್ರಚಾರದಲ್ಲಿ ತೊಡಗಿರಲಿಲ್ಲ ಎಂದರು.
ಬಿಜೆಪಿಗೆ ನಗರ ಪ್ರದೇಶಗಳಲ್ಲಿ ಬಿಜೆಪಿಗೆ ಹೆಚ್ಚಿನ ಒಲವಿದೆ ಎನ್ನುವುದನ್ನು ಈ ಫಲಿತಾಂಶ ಸುಳ್ಳು ಮಾಡಿದೆ. ರಾಜ್ಯದ ನೂರು ದಿನಗಳ ಆಡಳಿತವನ್ನು ಜನತೆ ಬೆಂಬಲಿಸಿದ್ದಾರೆ. ಹೀಗಾಗಿ ಮತದಾರರಿಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಫಲಿತಾಂಶ ನಮಗೆ ಪೂರ್ಣ ಪ್ರಮಾಣದಲ್ಲಿ ಸಂತಸವಾಗಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಕುಮಾರ ಸ್ವಾಮಿ ಹೇಳಿದರು.
ರಾಜ್ಯದ ಯಾವುದೇ ಭಾಗದಲ್ಲಿ ಬಿಜೆಪಿ ಜತೆ ನಗರ ಸ್ಥಳೀಯ ಸಂಸ್ಥೆಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅತಂತ್ರ ಇರುವ ಕಡೆಗಳಲ್ಲಿ ಜೆಡಿಎಸ್ – ಕಾಂಗ್ರೆಸ್ ಪಕ್ಷಗಳು ಒಟ್ಟಾರೆಯಾಗಿ ಅಧಿಕಾರ ಹಿಡಿಯಲಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳು ಹಂಚಿಕೆಯಾಗಲಿವೆ ಎಂದು ಹೇಳಿದರು.
ಮೈತ್ರಿ ಸರ್ಕಾರ ಸರ್ಕಾರ ಬಿದ್ದೇ ಹೋಯಿತು ಎನ್ನುವ ಭಾವನೆ ಕೆಲವರಲ್ಲಿದೆ. ಇದು ಅಭಿವೃದ್ಧಿಗೆ ಪೂರಕವಲ್ಲ. ಅಭದ್ರ ಸರ್ಕಾರ ಎಂದು ಬಿಂಬಿಸಲು ಬಿಜೆಪಿ ನಾಯಕರು ಹೊರಟಿದ್ದಾರೆ. ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳಿಗೆ ಚಾಟಿ ಬೀಸುವ ಕೆಲಸ ನಾವು ಮಾಡಿ, ಆಡಳಿತ ಯಂತ್ರವನ್ನು ಸುಸ್ಥಿತಿಗೆ ತರುತ್ತೇವೆ ಎಂದು ಹೇಳಿದರು.
ಬಿಜೆಪಿ ನಾಯಕರು ಪದೇ ಪದೇ ಸರ್ಕಾರ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಜತೆಗೆ ತಾವು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ನೂರು ದಿನಗಳಲ್ಲಿ ಎಲ್ಲೆಲ್ಲಿ ಪ್ರವಾಸ ಕೈಗೊಂಡಿದ್ದರು. ಎಷ್ಟು ಭಾರಿ ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದರು ಎನ್ನುವ ಕುರಿತು ದಾಖಲೆ ಸಮೇತ ಮಾಹಿತಿ ಬಹಿರಂಗ ಪಡಿಸುವುದಾಗಿ ಕುಮಾರ ಸ್ವಾಮಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ