ರಾಜ್ಯದ 154 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಸಿದ್ದವಾದ ಸರ್ಕಾರ

ಬೆಂಗಳೂರು :

    ಮಳೆಯ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ಮುಂಗಾರು ಬಿತ್ತನೆ ವಿಫಲವಾಗಿದ್ದು ಇದರ ಬೆನ್ನಲ್ಲೇ ರಾಜ್ಯದ 154 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಧಿಕೃತ ತೀರ್ಮಾನವಾಗಲಿದ್ದು ತದನಂತರ ಬರಪೀಡಿತ ತಾಲ್ಲೂಕುಗಳ ಹೆಸರನ್ನು ಸರ್ಕಾರ ಪ್ರಕಟಿಸಲಿದೆ.

    ಬರಪೀಡಿತ ತಾಲ್ಲೂಕುಗಳ ಕುರಿತು ಪರಿಶೀಲಿಸಲು ಸೆಪ್ಟೆಂಬರ್ 13 ರ ಬುಧವಾರ ಸಂಪುಟ ಉಪಸಮಿತಿ ಸಭೆ ನಡೆಯಲಿದ್ದು,ಈ ಸಭೆ ರಾಜ್ಯದ ಒಟ್ಟಾರೆ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ನಂತರ ಸಂಪುಟಕ್ಕೆ ಶಿಫಾರಸು ವರದಿ ನೀಡಲಿದೆ.

    ಅದು ನೀಡುವ ವರದಿಯ ಆಧಾರದ ಮೇಲೆ 14 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆ ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಪ್ರಕಟಿಸಲಿದೆ. ಈಗಾಗಲೇ ಕಂದಾಯ ಇಲಾಖೆಗೆ ತಲುಪಿರುವ ಮಾಹಿತಿಗಳ ಪ್ರಕಾರ ಬತ್ತ,ರಾಗಿ ಸೇರಿದಂತೆ ಮುಂಗಾರು ಹಂಗಾಮಿನಲ್ಲಿ ನಡೆದ ಬಿತ್ತನೆ ಕಾರ್ಯ ಬಹುತೇಕ ವಿಫಲವಾಗಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ರಾಗಿ ಬೆಳೆಗೆ ಅಕ್ಟೋಬರ್ ಹತ್ತರ ಒಳಗೆ ಸಮರ್ಪಕ ಪ್ರಮಾಣದ ನೀರು ಪೂರೈಕೆಯಾಗಬೇಕಿತ್ತಾದರೂ ಮಳೆಯ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

    ಇದೇ ರೀತಿ ಬತ್ತ ಸೇರಿದಂತೆ ಮತ್ತಿತರ ಬೆಳೆಗಳ ಪರಿಸ್ಥಿತಿಯೂ ಇದೇ ರೀತಿ ಆತಂಕಕ್ಕೆ ಗುರಿಯಾಗಿದ್ದು ಒಟ್ಟಾರೆಯಾಗಿ ಮುಂಗಾರು ಹಂಗಾಮು ವಿಫಲವಾಗಿದೆ ಎಂದು ಕಂದಾಯ ಇಲಾಖೆಗೆ ಮಾಹಿತಿ ತಲುಪಿದೆ.

     ಈ ಕಾರಣದಿಂದ ರಾಜ್ಯಾದ್ಯಂತ ಕೈಗೆ ಬರಬೇಕಿದ್ದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬೆಳೆ ಕೈಗೆ ಬರುವ ಲಕ್ಷಣಗಳು ಕ್ಷೀಣಿಸಿದ್ದು ಈ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ಮೇವಿನ ವಿಷಯದಲ್ಲಿ ತಕ್ಷಣವೇ ಗಮನ ಹರಿಸುವ ಅನಿವಾರ್ಯತೆ ಎದುರಾಗಿದೆ. ಬರಪೀಡಿತ ತಾಲ್ಲೂಕುಗಳ ಘೋಷಣೆ ಯಾಗುತ್ತಿದ್ದಂತೆಯೇ ಕುಡಿಯುವ ನೀರು ಮತ್ತು ಮೇವಿನ ವಿಷಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರ ಮಾರ್ಗಸೂಚಿ ಸೂತ್ರಗಳನ್ನು ಪ್ರಕಟಿಸಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

    ರಾಜ್ಯದ ಜಲಾಶಯಗಳಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಸಂಗ್ರಹಿಸುವುದು ಮತ್ತು ಜಾನುವಾರುಗಳಿಗೆ ಅಗತ್ಯವಾದ ಮೇವನ್ನು ರಾಜ್ಯ ಮಾತ್ರವಲ್ಲದೆ ಪರರಾಜ್ಯಗಳಿಂದಲೂ ತರಿಸಿ ಸಂಗ್ರಹಿಸುವ ಕುರಿತು ಸರ್ಕಾರ ಈಗಾಗಲೇ ಪರಿಶೀಲನೆ ನಡೆಸಿದೆ.

    ಮುಂಗಾರು ಹಂಗಾಮಿನ ಈ ವೈಫಲ್ಯ ಹಿಂಗಾರು ಬೆಳೆಗೆ ವಿಸ್ತರಿಸುವ ಸಾಧ್ಯತೆ ಜಾಸ್ತಿ ಇರುವುದರಿಂದ ಬತ್ತ,ರಾಗಿ,ಜೋಳ ಸೇರಿದಂತೆ ಜನರ ದಿನನಿತ್ಯದ ಬಳಕೆಯ ವಸ್ತುಗಳ ಪೂರೈಕೆಯಲ್ಲಿ ಕೊರತೆ ಉಂಟಾಗಲಿದ್ದು,ಬೆಲೆ ಗಗನಕ್ಕೆ ಏರಲಿದೆ.

   ಮೂಲಗಳ ಪ್ರಕಾರ,ಬರಗಾಲದ ಛಾಯೆ ಕಾಣುತ್ತಿದ್ದಂತೆಯೇ ಅಕ್ಕಿ,ರಾಗಿ,ಜೋಳ,ದ್ವಿದಳ ಧಾನ್ಯ,ಎಣ್ಣೆ ಮತ್ತಿತರ ಜೀವನಾವಶ್ಯಕ ವಸ್ತುಗಳ ಬೆಲೆ ಏರು ಮುಖ ಕಂಡಿದ್ದು,ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸುವುದು ನಿಶ್ಚಿತ. ಹೀಗಾಗಿ ಇಂತಹ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ವಿವಿಧ ಇಲಾಖೆಗಳನ್ನು ಚುರುಕುಗೊಳಿಸಲು ಮತ್ತು ಪಡಿತರ ಪದಾರ್ಥಗಳ ಬೆಲೆಯ ಮೇಲೆ ನಿಯಂತ್ರಣ ಹೇರುವ ಕುರಿತು ಸರ್ಕಾರ ಪರಿಶೀಲನೆ ನಡೆಸಿದೆ.

     ಸರ್ಕಾರದ ಹಣಕಾಸು ಇಲಾಖೆಯ ಮೂಲಗಳ ಪ್ರಕಾರ,ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇರುವುದರಿಂದ ಪರಿಹಾರ ಕಾರ್ಯಕ್ಕಾಗಿ ದೊಡ್ಡ ಪ್ರಮಾಣದ ಹಣ ಬೇಕಿದ್ದು,ಕೇಂದ್ರ ಸರ್ಕಾರದಿಂದ ನೆರವು ಕೋರಲು ಈಗಾಗಲೇ ಸಿದ್ದತೆ ನಡೆದಿದೆ.

    ಮುಂಗಾರು ಹಂಗಾಮು ವಿಫಲವಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು,ಸರ್ಕಾರದ ಬೊಕ್ಕಸದ ಮೇಲೂ ತೀವ್ರ ಪರಿಣಾಮ ಉಂಟಾಗಲಿದೆ.ಹೀಗಾಗಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಎಷ್ಟು ಪ್ರಮಾಣದ ಆದಾಯ ನಿರೀಕ್ಷಿಸಲಾಗಿತ್ತೋ?ಅದರಲ್ಲಿ ಕೊರತೆಯಾಗಲಿದ್ದು,ಇದರಿಂದಾಗಿ ಸರ್ಕಾರದ ವಿವಿಧ ಇಲಾಖೆಗಳಿಗೆ ಮಂಜೂರು ಮಾಡಿರುವ ಅನುದಾನದ ಪ್ರಮಾಣವನ್ನು ಕಡಿತ ಮಾಡುವುದು ಅನಿವಾರ್ಯವಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap