ರಾಜ್ಯ ಸರ್ಕಾರದಿಂದ ಕನ್ನಡಿಗರಿಗೆ ಅವಮಾನ  : ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ

ಕೇಂದ್ರನಾಯಕರ ಓಲೈಕೆಗೆ ಕನ್ನಡ ಭಾಷೆ ತುಳಿತ
ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರ ಬಿಜೆಪಿ ನಾಯಕರ ಓಲೈಕೆಗಾಗಿ ಮತ್ತೆ ಮತ್ತೆ ಕನ್ನಡವನ್ನು ತುಳಿದು ಹಿಂದಿಯನ್ನು ಮೆರೆಸಿ‌‌ ಕನ್ನಡ ಭಾಷೆ, ಕನ್ನಡಿಗಿರನ್ನು, ಹಾಗೂ ಕರ್ನಾಟಕಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು ರಾಜ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಅವರು ಹೇಳಿದ್ದಿಷ್ಟು,
ಕೇಂದ್ರ ಸಚಿವ ಅಮಿತ್ ಶಾ ಭಾಗವಹಿಸಿದ್ದ ‘ಸಂಕಲ್ಪ್ ಸೆ ಸಿದ್ಧಿ’ ಎಂಬ ಕಾರ್ಯಕ್ರಮದ ಬ್ಯಾನರ್ ಸಂಪೂರ್ಣ ಹಿಂದಿಮಯವಾಗಿತ್ತು.‌ ಇನ್ನೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತನ್ನ ಜಾಲತಾಣದಲ್ಲಿ ಹಿಂದಿಯ ಕಿರೀಟ ಇಟ್ಟುಕೊಂಡು ಮೆರೆಸುತ್ತಿದೆ’ ಎಂದು ಆರೋಪಿಸಿದ್ದಾರೆ.
‘ರಾಜ್ಯದ ಬಿಜೆಪಿ ಸರ್ಕಾರ ತನ್ನತನವನ್ನು ಅಡವಿಟ್ಟು‌ ಹಿಂದಿ ಭಾಷೆಗೆ ಸಂಪೂರ್ಣ ಶರಣಾಗತವಾಗಿದೆ ಎಂಬುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣವೇ ಸಾಕ್ಷಿ. ಮೊದಲು ಈ ಜಾಲತಾಣದಿಂದ ಹಿಂದಿಯನ್ನು ಕಿತ್ತೊಗೆದು, ಕನ್ನಡಿಗರ ಸ್ವಾಭಿಮಾನ ಉಳಿಸಿ’ ಎಂದು ಒತ್ತಾಯಿಸಿದ್ದಾರೆ.
‘ರಾಜ್ಯದಲ್ಲಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ? ಅಥವಾ ಹಿಂದಿ‌ ಮತ್ತು ಸಂಸ್ಕೃತಿ ಇಲಾಖೆಯೇ? ಎನ್ನುವುದನ್ನು ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ಸ್ಪಷ್ಟಪಡಿಸಬೇಕು’ ಎಂದು ಟ್ವೀಟ್‌ ಮೂಲಕ ಆಗ್ರಹಿಸಿದರು.
ಕನ್ನಡ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು‌ ಪೋಷಣೆಗಾಗಿ ಇರುವ ಇಲಾಖೆಯೇ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವನ್ನು ಹೊರಗಿಟ್ಟು ಹಿಂದಿ ಭಾಷೆಯ ಪ್ರಚಾರಕ್ಕೆ ಇಳಿದರೆ ಕನ್ನಡ ಭಾಷೆಯನ್ನು ರಕ್ಷಿಸುವವರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
‘ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಕನ್ನಡಿಗರ ಸ್ವಾಭಿಮಾನವನ್ನು ‘ಉತ್ತರ ಕುಮಾರ’ರ ಕಾಲಡಿ ಯಾಕೆ ಅಡವು ಇಡುತ್ತೀರಾ?’ ಎಂದು ಕೇಳಿದ್ದಾರೆ.
‘ಶರಣಾಗತಿ ಕನ್ನಡದ ಮಣ್ಣಿನ ಗುಣವಲ್ಲ, ವೀರರಾಣಿ ಅಬ್ಬಕ್ಕನ ನೆಲದಿಂದ ಬಂದ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಇಂಥಾ ಗುಲಾಮಿ‌ ಮನಸ್ಥಿತಿ ಬರಬಾರದಿತ್ತು’ ಎಂದೂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap