ರಾಜ್ಯ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ: ಖರ್ಗೆ

ಬೆಂಗಳೂರು:

                 ಮಹಾರಾಷ್ಟ್ರದ ಸಿಎಂ ಫಡ್ನವೀಸ್ ಇರಲಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಬಂದರೂ ರಾಜ್ಯ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

                 ಕಲಬುರ್ಗಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮಹಾರಾಷ್ಟ್ರ ಸಿ.ಎಂ. ದೇವೀಂದ್ರ ಫಡ್ನವಿಸ್ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಫಡ್ನವಿಸ್ ಆಗಲಿ, ಸ್ವತಹ ಅಮಿತ್ ಷಾನೇ ಬಂದರೂ ಏನೂ ಮಾಡಲಾಗುವುದಿಲ್ಲ. ಕನ್ನಡಿಗರ ಸ್ವಾಭಿಮಾನಿಗಳಾಗಿದ್ದು, ಬೇರೆಯವರ ಆಮಿಷಗಳಿಗೆ ಬಲಿಯಾಗೋದಿಲ್ಲ ಎಂದರು.

                 ರಾಜ್ಯ ರಾಜಕೀಯಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ಅವರು ಜಾರಕಿಹೊಳಿ ಸಹೋದರರನ್ನು ಭೇಟಿಯಾದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದರು.

                 ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೆಪ್ಟೆಂಬರ್ 23 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಾಗಿ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಅವರು ಹಗಲು ಕನಸು ಕಾಣುತ್ತಿದ್ದಾರೆ. ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಹಗಲು ಕನಸು ಕಾಣಲಿ ಬಿಡಿ. ಆದರೆ ಯಾರಿಂದಲೂ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್,-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಮುಂದುರಿಯಲಿದೆ ಎಂದರು.

             ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರುತ್ತಾರೆ ಎಂಬುದು ಕೇವಲ ವದಂತಿ. ವದಂತಿಗಳನ್ನು ಹಬ್ಬಿಸಿ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

             ರಮೇಶ್ ಜಾರಕಿಹೊಳಿ ನಿಷ್ಟಾವಂತ ಕಾಂಗ್ರೆಸ್ಸಿಗನಿದ್ದಾನೆ. ಸ್ವಾಭಿಮಾನಿ ಇದ್ದಾನೆ, ಆದರೆ ಹೇಳಿದರೆ ತಿಳಿದುಕೊಳ್ಳುವ ಸ್ವಭಾವದ ವ್ಯಕ್ತಿಯಿದ್ದಾನೆ. ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರುವಂತೆ ಹೇಳುತ್ತೇನೆ. ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡುತ್ತೇನೆ ಎಂದರು.

ಎಲ್ಲ ಗೊಂದಲಗಳೂ ಶೀಘ್ರದಲ್ಲಿಯೇ ನಿವಾರಣೆಯಾಗಲಿವೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು

Recent Articles

spot_img

Related Stories

Share via
Copy link