ನವದೆಹಲಿ:
ಹಿಂದಿನ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಯುದ್ಧ ವಿಮಾನ ನಿರ್ಮಿಸಲು ಅಗತ್ಯ ಸಾಮರ್ಥ್ಯ ಹೊಂದಿಲ್ಲದ ಕಾರಣಕ್ಕೆ ರಾಫೆಲ್ ಯುದ್ಧ ವಿಮಾನ ಖರೀದಿಯ ಒಪ್ಪಂದ ಮುರಿದುಬಿದ್ದಿತ್ತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವೆಚ್ಚ ಸಮಾಲೋಚನಾ ಸಮಿತಿಯು ಯುದ್ಧ ವಿಮಾನ ಖರೀದಿಗೆ ಒಪ್ಪಂದಕ್ಕೆ ಅಂತಿಮ ರೂಪ ನೀಡುತ್ತಿರುವಾಗ ಅಂದಿನ ರಕ್ಷಣಾ ಸಚಿವ ಎ. ಕೆ. ಆಂಟನಿ ಅತಿಯಾದ ಹಸ್ತಕ್ಷೇಪವೂ ಎಚ್ ಎಎಲ್ ಜೊತೆಗಿನ ಒಪ್ಪಂದ ರದ್ದಾಗಲು ಕಾರಣವಾಗಿತ್ತು ಎಂದು ಸೀತಾರಾಮನ್ ಆರೋಪಿಸಿದ್ದಾರೆ.
ಎಚ್ ಎಎಲ್ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆಸಿದ ನಂತರ ಡಸಾಲ್ಟ್ ಏವಿಯೇಷನ್, ಭಾರತದಲ್ಲಿ ಉತ್ಪಾದಿಸಬೇಕಾದರೆ ರಾಫೆಲ್ ಯುದ್ಧ ವಿಮಾನಗಳ ವೆಚ್ಚ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹೇಳಿತ್ತು ಎಂದು ಸೀತಾರಾಮನ್ ತಿಳಿಸಿದ್ದಾರೆ.
ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಎಚ್ಎಎಲ್ ಜೊತೆಗಿನ ಮಾತುಕತೆಯಲ್ಲಿ ಡಸ್ಸಾಲ್ಟ್ ಪ್ರಗತಿ ಸಾಧಿಸಲಿಲ್ಲ. ಏಕೆಂದರೆ ವಿಮಾನವನ್ನು ಭಾರತದಲ್ಲಿ ಉತ್ಪಾದಿಸಬೇಕಾದರೆ, ಉತ್ಪಾದಿಸುವ ಉತ್ಪನ್ನಕ್ಕೆ ಒಂದು ಗ್ಯಾರಂಟಿ ನೀಡಬೇಕಾಗಿತ್ತು. ಇದು ದೊಡ್ಡ ಸಮಸ್ಯೆಯಾಗಿತ್ತು ಮತ್ತು ಐಎಎಫ್ ಸಹ ಯುದ್ಧ ವಿಮಾನಗಳಿಗೆ ಗ್ಯಾರಂಟಿ ಬೇಕು ಎಂದಿತ್ತು. ಆದರೆ ಎಚ್ ಎಎಲ್ ಗ್ಯಾರಂಟಿ ನೀಡುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.