ರಾಮನಗರ
ಜಿಲ್ಲೆಯಲ್ಲಿ ಕಾಡು ಪ್ರಾಣಿ ಹಾಗೂ ಮಾನವ ಸಂಘರ್ಷ ಮಿತಿಮೀರಿದ್ದು, ಕಳೆದ ರಾತ್ರಿ ಮಾವಿನ ತೋಟದ ಮೇಲೆ ದಾಳಿ ಮಾಡಿದ ಕಾಡಾನೆನೆ ತೋಟದ ಕಾವಲುಗಾರರನ್ನು ತುಳಿದು ಸಾಯಿಸಿದೆ. ಈ ಘಟನೆ ಬಳಿಕ ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದು, ಕಳೆದ ಕೆಲ ವರ್ಷಗಳಿಂದ ನಿರಂತರವಾಗಿರುವ ಕಾಡಾನೆ ದಾಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಚನ್ನಪಟ್ಟಣದ ವಿರುಪಸಂದ್ರ ಗ್ರಾಮದ ದೇವರಾಜು ಎಂಬುವರಿಗೆ ಸೇರಿದ ಮಾವಿನತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಮಾವಿನ ಫಸಲು ನಾಶಮಾಡುವ ಜೊತಗೆ ತೋಟದ ಕಾವಲುಗಾರ ವೀರಭದ್ರಯ್ಯ ಎಂಬಾತನ್ನು ತುಳಿದು ಸಾಯಿಸಿವೆ. ಮೃತ ವೀರಭದ್ರಯ್ಯ, ಮೂಲತಃ ಕನಕಪುರ ತಾಲೂಕಿನ ಬಸವನಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ.
ಇಂದು ಸಹ ಎಂದಿನಂತೆ ಬೆಳಗಿನ ಜಾವ ತೋಟಕ್ಕೆ ತೆರಳಿದ ಸಮಯದಲ್ಲಿ ಪುಂಡಾನೆ ದಾಳಿ ಮಾಡಿ ವೀರಭದ್ರಯ್ಯ ಅವರನ್ನು ತುಳಿದು ಸಾಯಿಸಿದೆ.
ಹಣದ ಪರಿಹಾರ ಬೇಡ, ಶಾಶ್ವತ ಪರಿಹಾರ ಬೇಕು ಕಾವೇರಿ ವನ್ಯಜೀವಿ ವಲಯದ ಮುತ್ತತ್ತಿ ಅರಣ್ಯ ಪ್ರದೇಶದಿಂದ ವಲಸೆ ಬಂದಿರುವ ಸುಮಾರು 25 ಆನೆಗಳ ಹಿಂಡು, ಚಿಕ್ಕ ಚಿಕ್ಕ ಗುಂಪುಗಳಾಗಿ ಜಿಲ್ಲೆಯ ತೆಂಗಿನಕಲ್ಲು ಅರಣ್ಯ ಪ್ರದೇಶ ಹಾಗೂ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟು, ರೈತರ ಜಮೀನುಗಳ ಮೇಲೆ ದಾಳಿಯಿಟ್ಟು ನಿರಂತರವಾಗಿ ಉಪಟಳ ನೀಡುತ್ತಿವೆ. ಅರಣ್ಯ ಸಿಬ್ಬಂದಿ ಹಲವು ಬಾರಿ ಆನೆ ಓಡಿಸುವ ಕಾರ್ಯಚರಣೆ ನಡೆಸಿದರು ಪ್ರಯೋಜನವಾಗುತ್ತಿಲ್ಲ.
ರೈತರ ಜಮೀನುಗಳ ಮೇಲೆ ದಾಳಿ ಮಾಡುವ ಕಾಡಾನೆಗಳ ಹಿಂಡು ಬೆಳೆ ನಾಶ ಮಾಡುತ್ತಿವೆ. ಆದರೆ ಇದೆ ತಂಡದ ಒಂಟಿ ಸಲಗ ಜನರ ಮೇಲೆ ದಾಳಿ ಮಾಡುವ ಮೂಲಕ ರೈತರಲ್ಲಿ ಆತಂಕ ಮೂಡಿಸಿದೆ. ಕಬ್ಬಾಳು ಅರಣ್ಯ ಪ್ರದೇಶ ಹಾಗೂ ತೆಂಗಿನಕಲ್ಲು ಅರಣ್ಯ ಪ್ರದೇಶ ವ್ಯಾಪ್ತಿಗಳಲ್ಲಿ ಜನರ ಮೇಲೆ ನಡೆದ ಬಹುತೇಕ ದಾಳಿಗಳನ್ನು ಇದೇ ಪುಂಡಾನೆ ಮಾಡಿದೆ. ಪ್ರತಿ ಬಾರಿ ಒಂಟಿ ಸಲಗದ ದಾಳಿಗೆ ಜನರು ಬಲಿಯಾದಾಗ ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ನೀಡಿ ಸುಮ್ಮನಾಗುತ್ತಿದೆ.
ಆನೆ ದಾಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ನಮಗೆ ಹಣದ ಪರಿಹಾರ ಬೇಡ, ಕಾಡನೆಗೆ ದಾಳಿಗೆ ಶಾಶ್ವತ ಪರಿಹಾರ ಬೇಕು ಎಂದು ಗ್ರಾಮಸ್ಥರು ಸರ್ಕಾರ ಹಾಗೂ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಪ್ರಯೋಜನಕ್ಕೆ ಬಾರದ ಪುಂಡಾನೆ ಸೆರೆ ಕಳೆದ ಹಲವು ವರ್ಷಗಳಿಂದ ರಾಮನಗರ ಹಾಗೂ ಚನ್ನಪಟ್ಟಣದ ವ್ಯಾಪ್ತಿಯ ಗಡಿಗ್ರಾಮಗಳಲ್ಲಿ ಆನೆಗಳ ಹಾವಳಿ ವಿಪರೀತವಾಗಿದ್ದು, ಆನೆಗಳ ದಾಳಿಯಿಂದ ರೈತರು ಹೈರಾಣಾಗಿದ್ದರು. ಅಲ್ಲದೇ ಬಿ.ವಿ.ಹಳ್ಳಿ ಬಳಿ ಓರ್ವ ಮಹಿಳೆ ಆನೆ ದಾಳಿಗೆ ಬಲಿಯಾದಗ, ಅರಣ್ಯ ಇಲಾಖೆ ಸಾಕಾನೆಗಳನ್ನು ಬಳಸಿ ಎರಡು ಪುಂಡಾನೆಯನ್ನು ಸೆರೆ ಹಿಡಿದು ಬೇರೆ ಕಾಡಿಗೆ ಸ್ಥಳಾಂತರ ಮಾಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ