ರಾಯಚೂರು :
ಕೃಷ್ಣ ನದಿಯಲ್ಲಿ ಮೊಸಳೆಯೊಂದು ಬಾಲಕನ ಮೇಲೆ ದಾಳಿ ಮಾಡಿ ಬಲಿಪಡೆದಿರುವ ಮನಕಲಕುವ ಘಟನೆ ಜಿಲ್ಲೆಯ ಡೊಂಗಾರಾಂಪುರ ಗ್ರಾಮದಲ್ಲಿ ನಡೆದಿದೆ.
12 ವರ್ಷದ ಮಲ್ಲಿಕಾರ್ಜುನ ಮೊಸಳೆಗೆ ಬಲಿಯಾದ ಬಾಲಕ. ಬುಧವಾರದಂದು ಮಲ್ಲಿಕಾರ್ಜುನ ತನ್ನ ಸ್ನೇಹಿತರೊಂದಿಗೆ ದನ ಮೇಯಿಸಲು ತೆರಳಿದ್ದನು. ಈ ವೇಳೆ ನೀರು ಕುಡಿಯಲು ಆತ ಕೃಷ್ಣ ನದಿಯಲ್ಲಿ ಇಳಿದಿದ್ದನು. ಆಗ ಮೊಸಳೆಯೊಂದು ಆತನ ಮೇಲೆ ದಾಳಿ ಮಾಡಿ ಎಳೆದೊಯ್ದಿದೆ. ಇದನ್ನು ಕಣ್ಣಾರೆಕಂಡ ಮಲ್ಲಿಕಾರ್ಜುನ್ ಸ್ನೇಹಿತರು ತಕ್ಷಣವೇ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳೀಯ ಮೀನುಗಾರರ ಎರಡು ತೆಪ್ಪ ಬಳಸಿ ಮಲ್ಲಿಕಾರ್ಜುನನಿಗಾಗಿ ಶೋಧಕಾರ್ಯ ನಡೆಸಿದರು ಬಾಲಕ ಸುಳಿವು ಪತ್ತೆಯಾಗಲಿಲ್ಲ.
ಬುಧವಾರ ರಾತ್ರಿ ಬಾಲಕನ ತಲೆ ಬುರುಡೆ ದೊರೆತಿದ್ದು, ಮೊಸಳೆ ಬಾಲಕನ ಇಡೀ ದೇಹವನ್ನು ಸಂಪೂರ್ಣವಾಗಿ ತಿಂದು ಹಾಕಿದೆ.
ವಿದ್ಯಾಗಮ್ ಯೋಜನೆ ಸದ್ಯ ಬಂದ್ ಆದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ನಿತ್ಯ ಕೂಲಿ ಕೆಲಸಕ್ಕೆ ತೆರಳುತ್ತಿದ್ದನು. ಆದರೆ, ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ನಿನ್ನೆ ಕೂಲಿ ಕೆಲಸ ಬಿಟ್ಟು ದನ ಕಾಯಲು ತೆರಳಿದ್ದನು. ಮಧ್ಯಾಹ್ನ ಉಟ ಮಾಡಿ ನದಿ ದಂಡೆಯಲ್ಲಿ ನೀರು ಕುಡಿಯಲು ಹೋಗಿದ್ದಾಗ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಾಪಲದಿನ್ನಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ