ಕೊಚ್ಚಿನ್:
‘ನಗ್ನತೆಯನ್ನು ಲೈಂಗಿಕತೆಯೊಂದಿಗೆ ಹೋಲಿಸಬಾರದು’ ಎಂದು ಹೇಳುವ ಮೂಲಕ ಸಾಮಾಜಿಕ ಹೋರಾಟಗಾರ್ತಿ ರೆಹಾನಾ ಫಾತಿಮಾ ವಿರುದ್ಧದ ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದು ಮಾಡಿದೆ.
ತನ್ನ ಅರೆ ನಗ್ನದೇಹದ ಮೇಲೆ ಹೆತ್ತ ಮಕ್ಕಳು ಚಿತ್ರ ಬಿಡಿಸುತ್ತಿರುವ ವೀಡಿಯೊ ಪ್ರಸಾರ ಮಾಡಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ವಿರುದ್ಧ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ದಾಖಲಿಸಿದ್ದ ಪ್ರಕರಣವನ್ನು ಕೇರಳ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ನಗ್ನತೆ ಮತ್ತು ಅಶ್ಲೀಲತೆ ಸದಾ ಸಮಾನಾರ್ಥಕವಲ್ಲ. ಅರ್ಜಿದಾರರ ವಿರುದ್ಧ ಅಪರಾಧ ನಡೆದಿದೆ ಎನ್ನಲು ಆಕೆಗೆ ಲೈಂಗಿಕ ಉದ್ದೇಶ ಇತ್ತು ಎಂಬುದು ಅಗತ್ಯ ಅಂಶವಾಗುತ್ತದೆ ಎಂದು ನ್ಯಾ. ಕೌಸರ್ ಎಡಪ್ಪಗತ್ ತೀರ್ಪು ನೀಡಿದ್ದಾರೆ.
ನ್ಯಾಯಾಲಯದಲ್ಲಿ ವೀಡಿಯೊ ವೀಕ್ಷಿಸಿದ ಪೀಠ, ಅರ್ಜಿದಾರೆ ತಮ್ಮ ವೀಡಿಯೊದ ಕೆಳಭಾಗದಲ್ಲಿ ವಿವರವಾದ ಸಂದೇಶ ನೀಡಿರುವುದನ್ನು ಗಮನಿಸಿತು. ಲೈಂಗಿಕವಾಗಿ ಹತಾಶೆಗೊಂಡ, ನಿಯಂತ್ರಿಸಲು ಬಯಸುವ ಸಮಾಜಕ್ಕೆ ಪ್ರತಿಕ್ರಿಯೆಯಾಗಿ ಬೆತ್ತಲೆ ದೇಹವನ್ನು ನೀಡಲಾಗಿದೆ ಎಂದು ಆಕೆ ತಿಳಿಸಿದ್ದಾರೆ. ತನ್ನ ತಾಯಿಯ ನಗ್ನತೆಯನ್ನು ನೋಡಿ ಬೆಳೆದ ಯಾವುದೇ ಮಗು ಮತ್ತೊಂದು ಸ್ತ್ರೀ ದೇಹವನ್ನು ನಿಂದಿಸದು ಎಂದು ಕೂಡ ವೀಡಿಯೊದ ಒಕ್ಕಣೆಯಲ್ಲಿ ತಿಳಿಸಿದ್ದಾರೆ.
ಪುರುಷ ಪ್ರಧಾನ ವ್ಯವಸ್ಥೆ ಮತ್ತು ಸಮಾಜದಲ್ಲಿ ಮಹಿಳೆಯನ್ನು ಅತಿಯಾಗಿ ಲೈಂಗಿಕವಾಗಿ ಬಿಂಬಿಸಿರುವುದರ ವಿರುದ್ಧ ಹೋರಾಡಿರುವ ಸುದೀರ್ಘ ಇತಿಹಾಸ ಅರ್ಜಿದಾರರಿಗೆ ಇದೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದ್ದು, ಆಕೆ 2014ರಲ್ಲಿ ‘ಕಿಸ್ ಆಫ್ ಲವ್’ ಆಂದೋಲನದ ಭಾಗವಾಗಿದ್ದರು. ಇದು ʼಅನೈತಿಕʼ ಪೊಲೀಸ್‌ಗಿರಿ ವಿರುದ್ಧ ಕೊಚ್ಚಿಯಲ್ಲಿ ನಡೆದ ಚಳವಳಿಯಾಗಿತ್ತು. ಅಲ್ಲದೆ ಆಕೆ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಹೋರಾಟ ನಡೆಸಿದ್ದರು ಇದನ್ನೂ ಕೂಡ ನ್ಯಾಯಾಲಯ ಗಮನಿಸಿದೆ.
ಮಕ್ಕಳ ಹೇಳಿಕೆಗಳು ಮತ್ತು ಕಾರ್ಯಕರ್ತೆಗೆ ಇರುವ ಸುದೀರ್ಘ ಹೋರಾಟದ ಇತಿಹಾಸದ ಹಿನ್ನಲೆಯಲ್ಲಿ ವೀಡಿಯೊವನ್ನು ವಿಶ್ಲೇಷಿಸಿದ ನ್ಯಾಯಾಲಯ, ಅರ್ಜಿದಾರರು ಲೈಂಗಿಕ ಉದ್ದೇಶದಿಂದ ಕೃತ್ಯ ನಡೆಸಿದ್ದಾರೆ ಎನ್ನುವುದನ್ನು ಮೇಲ್ನೋಟಕ್ಕೆ ಸೂಚಿಸುವಂತಹ ದಾಖಲೆ ಇಲ್ಲ. ಅರ್ಜಿದಾರರ ವಿರುದ್ಧ ಆರೋಪಿಸಿದ ಯಾವುದೇ ಅಪರಾಧಗಳು ಆಕೆಯ ವಿರುದ್ಧ ಇಲ್ಲ ಎಂದು ಕಂಡುಕೊಂಡ ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿ ಅರ್ಜಿದಾರರನ್ನು ಆರೋಪ ಮುಕ್ತಗೊಳಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ