ಬೆಂಗಳೂರು:
ರೇಣುಕಾಸ್ವಾಮಿ ಹತ್ಯೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಸ್ಯಾಂಡಲ್ ವುಡ್ ನಟ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಮೈಸೂರಿನ ಟಿ ನರಸೀಪುರದಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ನಾಲ್ಕು ಬಾರ್ ಹೆಡೆಡ್ ಗೂಸ್ (ವಿಶಿಷ್ಟ ಪ್ರಭೇದದ ಬಾತುಕೋಳಿ)ಗಳನ್ನು ಸಾಕಿದ್ದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದರ್ಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.
ಅರಣ್ಯ ಇಲಾಖೆಯ ವಿಚಕ್ಷಣಾ ವಿಭಾಗದಿಂದ ಎಫ್‌ಐಆರ್ ದಾಖಲಿಸಲಾಗಿದೆ. ಅಗತ್ಯವಿರುವ ಸೆಕ್ಷನ್‌ಗಳ ಅಡಿಯಲ್ಲಿ ಐದು ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ, ಆದರೆ ಇದೂವರೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿಲ್ಲ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸದಿರುವುದು ದುರದೃಷ್ಟಕರ ಸಂಗತಿ ಅರಣ್ಯ ಇಲಾಖೆಯ ಹಿರಿಯರೊಬ್ಬರು ಹೇಳಿದ್ದಾರೆ. ತನಿಖಾಧಿಕಾರಿಯನ್ನು ವರ್ಗಾವಣೆಯಾದ ಬಳಿಕ ಯಾವುದೇ ಅಧಿಕಾರಿಗಳು ಈ ಕಡತದ ಬಗ್ಗೆ ಗಮನಕೊಟ್ಟಿಲ್ಲ. ಪ್ರಸ್ತುತ ಕಾರ್ಯನಿರ್ವಹಿಸಿರುವ ಅಧಿಕಾರಿಗಳೂ ಕೂಡ ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ವಿವರವಾದ ಮಾಹಿತಿ ಕೇಳಲಾಗಿದೆ ಎಂದು ತಿಳಿಸಿದ್ದಾರೆ.
ಬಾರ್ ಹೆಡೆಡ್ ಗೂಸ್ (ವಿಶಿಷ್ಟ ಪ್ರಭೇದದ ಬಾತುಕೋಳಿ)ಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ಪಟ್ಟಿ-1 ರ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ಅವುಗಳನ್ನು ಸಾಕುವುದು ಅಥವಾ ಹಿಡಿಯುವುದು ನಿಯಮಗಳ ಪ್ರಕಾರ ಅಪರಾಧವಾಗಿದ್ದು, ಈ ಪ್ರಕರಣ ಜಾಮೀನು ರಹಿತ ಅಪರಾಧವಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವವರು ಸೆಲೆಬ್ರಿಟಿಗಳಾದ್ದರಿಂದ ಅವರಿಗೆ ಸಮಯಾವಕಾಶ ನೀಡಲಾಗುತ್ತಿದೆ. ಅವರು ತಲೆಮರೆಸಿಕೊಳ್ಳದ ಕಾರಣ ಅವರನ್ನು ಬಲವಂತವಾಗಿ ಬಂಧಿಸಲು ಸಾಧ್ಯವಿಲ್ಲ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ದರ್ಶನ್ ಅವರು 2021 ರಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಇದೀಗ ಮತ್ತೆ ಅವರನ್ನು ನೇಮಕ ಮಾಡಿಕೊಳ್ಳುವ ಯಾವುದೇ ಚಿಂತನೆ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಹುಲಿ ಉಗುರು ಪ್ರಕರಣದಲ್ಲಿಯೂ ದರ್ಶನ್ ಅವರ ಹೆಸರು ಸುದ್ದಿಯಲ್ಲಿತ್ತು. ಬೆಂಗಳೂರು ವೃತ್ತದ ಅಧಿಕಾರಿಗಳು ದರ್ಶನ್ ಅವರಿಗೆ ನೋಟಿಸ್ ನೀಡಿ ಅವರ ಮನೆಯನ್ನು ಪರಿಶೀಲಿಸಿದ್ದರು. ಈ ವೇಳೆ 8 ಹುಲಿ ಉಗುರಿನ ಪೆಂಡೆಂಟ್ ದರ್ಶನ್ ಮನೆಯಲ್ಲಿ ಸಿಕ್ಕಿದ್ದವು. ಆದರೆ, ಅದೆಲ್ಲ ಅಸಲಿ ಹುಲಿ ಉಗುರು ಅಲ್ಲ ಎನ್ನುವುದಾಗಿ ತಿಳಿದುಬಂದಿತ್ತು