ಬೆಂಗಳೂರು ನಗರ ಜಿಲ್ಲೆ: ರೈತರ ಅವಶ್ಯಕತೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಲು ಕುರಿತು ನಡೆದ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆಯು ಉತ್ತಮವಾಗಿದ್ದು ಕೃಷಿ ಚಟುವಟಿಕೆಗಳು ಚುರುಕಾಗಿದೆ ರೈತರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ107ರಷ್ಟು ಅಧಿಕ ಮಳೆಯಾಗಿದೆ, ಮುಂಗಾರಿನಲ್ಲಿ ಶೇ 105ಕ್ಕೂ ಹೆಚ್ಚು ಮಳೆಯಾಗಿದೆ, ಇದರಿಂದ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜೂನ್ 15ರಿಂದ 20ರ ನಡುವೆ ಉತ್ತಮ ಮಳೆಯಾಗಿದ್ದು, ಭೂಮಿಯನ್ನು ಉಳುಮೆ ಮಾಡಿ ಸಿದ್ದತೆ ಮಾಡಿಕೊಳ್ಳಲು ಅನುಕೂಲವಾಗಿದೆ. ಪುಷ್ಯ ಮತ್ತು ಪುನರ್ವಸು ಮಳೆ ಆರಂಭವಾಗಿದ್ದು, ಆಗಸ್ಟ್ 15ರವರೆಗೂ ಉತ್ತಮ ಬಿತ್ತನೆಯಾಗುತ್ತದೆ ಎಂದು ಹೇಳಿದರು.
ಎಷ್ಟು ಹೆಕ್ಟೇರ್??
21880 ಹೆಕ್ಟೇರ್ ನಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಗುರಿ ಇದ್ದು, ಅವುಗಳಲ್ಲಿ ರಾಗಿ 19134 ಹೆಕ್ಟೇರ್ ನಲ್ಲಿ ಬಿತ್ತನೆಯಾಗಲಿದೆ. ಮುಸುಕಿನ ಜೋಳ 837 ಹೆಕ್ಟೇರ್ 1412 ಹೆಕ್ಟೇರ್ ನಲ್ಲಿ ದ್ವಿದಳ ಧಾನ್ಯಗಳು ಬಿತ್ತನೆಯಾಗಲಿವೆ ಎಂದು ಹೇಳಿದರು.
ಜುಲೈ ತಿಂಗಳಿಗೆ 3199 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, 5893 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ. ಡಿಎಪಿ ರಸ ಗೊಬ್ಬರಕ್ಕೆ ಬೇಡಿಕೆ ಇದ್ದು, ದರ ಕಡಿಮೆ ಇರುವುದರಿಂದ ರೈತರು ಅದನ್ನೇ ಕೇಳುತ್ತಿದ್ದಾರೆ. ರೈತರು ಡಿಎಪಿ ಬದಲು 20-20 ರಸಗೊಬ್ಬರ ಹಾಗೂ ಇತರ ಕಾಂಪ್ಲೆಕ್ಸ್ ಗೊಬ್ಬರವನ್ನು ಬಳಸಬೇಕು. ಸಾಕಷ್ಟು ಲಭ್ಯತೆ ಇದ್ದು, ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ಹೇಳಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ :
ಬಿತ್ತನೆ ಬೀಜಕ್ಕೆ ಸಂಬಂಧಿಸಿದಂತೆ ಎಲ್ಲಾ ರೈತ ಸಂಪರ್ಕ ಕೇಂದ್ರದ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ. ಒಟ್ಟು 586 ಕ್ವಿಂಟಲ್ ಬೇಡಿಕೆ ಇದ್ದು, 357ಕ್ವಿಂಟಲ್ ದಾಸ್ತಾನು ಮಾಡಲಾಗಿದೆ. 146 ಕ್ವಿಂಟಾಲ್ ಬಿತ್ತನೆ ಬೀಜವನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಮಳೆ ಪ್ರಾರಂಬವಾಗಿರುವುದರಿಂದ ಇನ್ಮೂ ಹೆಚ್ಚಿನ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗುವುದು, ರೈತರು ರೈತ ಸಂಪರ್ಕ ಕೇಂದ್ರದಿಂದ ಪಡೆದುಕೊಳ್ಳಬಹುದು ಎಂದು ಹೇಳಿದರು.
ಫಸಲ್ ಭಿಮಾ ಯೋಜನೆಗೆ ಈಗಾಗಲೇ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಬೆಂಗಳೂರು ನಗರ ಜಿಲ್ಲೆಗೆ ರಾಗಿ, ಭತ್ತ, ಮುಸುಕಿನ ಜೋಳ ಮತ್ತು ಟೊಮೆಟೊ ಬೆಳೆಗಳಿಗೆ ನೋಂದಣಿ ಮಾಡಲು ರೈತರಿಗೆ ಅವಕಾಶವಿದೆ. ಟೊಮೆಟೊ ಬೆಳೆಗೆ ಜುಲೈ 17 ಕೊನೆಯ ದಿನ ಹಾಗೂ ಮುಸುಕಿನ ಜೋಳ, ರಾಗಿ ಮತ್ತು ಭತ್ತ ನೀರಾವರಿಗೆ ಅಗಸ್ಟ್ 16ರ ರಂದು ಕಡೆಯ ದಿನಾಂಕವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿ ಮಾಡಿಕೊಳ್ಳಬೇಕು. ರೈತರು ನೋಂದಣಿ ಮಾಡಿಕೊಳ್ಳಲು ಹತ್ತಿರದ ಬ್ಯಾಂಕ್ ಗಳಲ್ಲಿ ಅಥವಾ ನೂತನವಾಗಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗಿದ್ದು ಇಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮ ಒನ್ ಕೇಂದ್ರದ ಸಿಬ್ಬಂದಿಗಳಿಗೆ ಬೆಳೆ ವಿಮೆ ನೋಂದಣಿ ಮಾಡುವ ಕುರಿತು ತರಬೇತಿಯನ್ನು ನೀಡಲಾಗುವುದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಮಾ ಕಂಪನಿಗಳು ಆಟೋದಲ್ಲಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದು, ಗ್ರಾಮ ಮಂಚಾಯಿತಿಗಳಿಗೆ ಈಗಾಗಲೆ ಕರಪತ್ರಗಳನ್ನು ಹಂಚಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಕೆ.ಆರ್.ದೇವರಾಜ್, ತಾಲ್ಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರು, ವಿವಿಧ ವಿಮಾ ಕಂಪನಿಗಳ ಪ್ರತಿನಿಧಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.