ರೈತರ ಚಿನ್ನಾಭರಣ ಹರಾಜಿಗೆ ಯತ್ನ: ಪ್ರತಿಭಟನೆ

 ದಾವಣಗೆರೆ:

 

      ಕೃಷಿ ಚಟುವಟಿಕೆಗಾಗಿ ಸಾಲ ಪಡೆಯಲು ರೈತರು ಅಡಮಾನ ಇಟ್ಟಿದ್ದ ಚಿನ್ನಾಭರಣ ಹರಾಜು ಮಾಡಲು ಮುಂದಾಗಿದ್ದ ವಿಜಯಾ ಬ್ಯಾಂಕ್‍ನ ಆನಗೋಡು ಶಾಖೆ ಕ್ರಮ ವಿರೋಧಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯ ತಾಲೂಕು ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

      ತಾಲೂಕಿನ ಆನಗೋಡು ವಿಜಯಾ ಬ್ಯಾಂಕ್ ಶಾಖೆ ಎದುರು ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು, ರೈತರು ಕೃಷಿ ಚಟುವಟಿಕೆಗಾಗಿ ಅಡ ಇಟ್ಟಿದ್ದ ಚಿನ್ನಾಭರಣ ಹರಾಜು ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಗುಮ್ಮನೂರು, ಆನಗೋಡು ವಿಜಯಾ ಬ್ಯಾಂಕ್ ಶಾಖೆಯಲ್ಲಿ ರೈತರು ಕೃಷಿ ಚಟುವಟಿಕೆಗಾಗಿ ಸಾಲ ಪಡೆಯಲು ಅಡಮಾನ ಇಟ್ಟಿರುವ ಬಂಗಾರವನ್ನು ಹರಾಜು ಮಾಡಲು ಮುಂದಾಗಿರುವ ಬ್ಯಾಂಕ್ ಅಧಿಕಾರಿಗಳ ಕ್ರಮ ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ನಿರಂತರ ಬರಗಾಲ ಮನೆ ಮಾಡಿ, ರೈತರು ಸಂಕಷ್ಟದಲ್ಲಿರುವ ಕಾರಣ ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಬ್ಯಾಂಕ್‍ಗಳು ರೈತರಿಂದ ಒತ್ತಾಯ ಪೂರ್ವಕವಾಗಿ ಸಾಲ ವಸೂಲಿ ಮಾಡಬಾರದು ಎಂಬುದಾಗಿ ಸೂಚಿಸಿದೆ. ಆದರೆ, ಈ ಸೂಚನೆಯನ್ನು ಗಾಳಿಗೆ ತೂರಿರುವ ವಿಜಯಾ ಬ್ಯಾಂಕ್‍ನ ಆನಗೋಡು ಶಾಖೆಯ ಅಧಿಕಾರಿಗಳು ರೈತರ ಚಿನ್ನಾಭರಣ ಹರಾಜು ಹಾಕಲು ಮುಂದಾಗಿದೆ. ಹರಾಜು ಹಾಕುವ ಉದ್ದೇಶದಿಂದ ರೈತರ ಬಂಗಾರ ಹರಾಜು ಮಾಡುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ರೈತರನ್ನು ಅವಮಾನಿಸಿದೆ. ಅಧಿಕಾರಿಗಳ ಈ ವರ್ತನೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೇ ಯಾರು ಹೊಣೆ ಎಂದು ಪ್ರಶ್ನಿಸಿದರು.

      ಸತತ ಬರಗಾಲದಿಂದ ತತ್ತರಿಸಿ, ಸಂಕಷ್ಟದಲ್ಲಿರುವ ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ರೈತರಿಗೆ ಕಾಲಾವಕಾಶ ನೀಡಿ, ಕಂತಿನ ಪ್ರಕಾರ ಸಾಲ ವಸೂಲಾತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿದ ಪ್ರತಿಭಟನಾನಿರತ ರೈತರು, ಅಕಾಸ್ಮಾತ್ ಇನ್ನೂ ಮುಂದೆಯೂ ಚಿನ್ನಾಭರಣ ಹರಾಜು ಮಾಡಲು ಮುಂದಾದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.

      ಪ್ರತಿಭಟನಾನಿರತ ರೈತರಿಂದ ಮನವಿ ಸ್ವೀಕರಿಸಿದ ಆನಗೋಡು ವಿಜಯಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ನಾರಾಯಣಸ್ವಾಮಿ ಮಾತನಾಡಿ, ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ವಾಪಾಸ್ ಪಡೆಯಲಾಯಿತು.

      ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರುಗಳಾದ ಆಲೂರು ಪರಶುರಾಮ, ಹುಚ್ಚವ್ವನಹಳ್ಳಿ ಪ್ರಕಾಶ, ಗುಮ್ಮನೂರು ಕೃಷ್ಣಮೂರ್ತಿ, ಗುಡಾಳ್ ಕೆ.ಆರ್.ರಾಜಪ್ಪ, ಹುಚ್ಚವ್ವನಹಳ್ಳಿ ಹನುಮಂತಪ್ಪ, ಸಾದಿಕ್, ರಜಾಕ್, ಕದರಪನಹಟ್ಟಿ ವೆಂಕಟೇಶ, ಪ್ರಕಾಶ, ಗುರುಮೂರ್ತಿ ಗುಡಾಳ್, ವಾಮದೇವಪ್ಪ, ಗೊಲ್ಲರಹಟ್ಟಿ ಮಹೇಶಪ್ಪ, ಚಿಕ್ಕನಹಳ್ಳಿ ಶಿವಣ್ಣ, ಮ್ಯಾಸರಹಳ್ಳಿ ಸಂಜೀವಪ್ಪ, ನೇರ್ಲಿಗೆ ತಿಪ್ಪೇಶ, ಅಣ್ಣೇಶ, ಪ್ರವೀಣ ಮತ್ತಿತರರು ಪಾಲ್ಗೊಂಡಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link