ರೈತರ ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ

 ದಾವಣಗೆರೆ: 

      ರೈತರ ಜ್ವಲಂತ ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸಬೇಕೆಂದು ರೈತ ಹುತಾತ್ಮ ಸ್ಮರಣಾರ್ಥ ಸಮಿತಿ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.

      ತಾಲೂಕಿನ ಆನಗೋಡು ಗ್ರಾಮದಲ್ಲಿ ಗುರುವಾರ ನಡೆದ 1992ರಲ್ಲಿ ಆನಗೋಡಿನಲ್ಲಿ ನಡೆದ ರೈತ ಹೋರಾಟದಲ್ಲಿ ಮೃತ ಪಟ್ಟು ಹುತಾತ್ಮರಾದ ಓಬೇನಹಳ್ಳಿ ಕಲ್ಲಿಂಗಪ್ಪ, ಸಿದ್ದನೂರು ನಾಗರಾಜಾಚಾರ್‍ರ ಅವರ 26ನೇ ಹುತಾತ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಪ್ರಸ್ತುತ ರೈತ ಹೋರಾಟಗಳಿಗೆ ಸರ್ಕಾರಗಳು ಸ್ಪಂದಿಸದ ಕಾರಣ ರೈತ ಚಳವಳಿ ಯಶಸ್ಸುಗೊಳ್ಳದಿರುವುದರಿಂದ ರೈತರು ಹತಾಶರಾಗಿ ಮಾನಸಿಕವಾಗಿ ಕುಗ್ಗಿದ್ದಾರೆ. ಅಂತಹ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಜವಾಬ್ದಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲಿದೆ. ಆದರೆ, ರೈತ ಪರ ಇರಬೇಕಾದ ಕೃಷಿ ಮಾರುಕಟ್ಟೆ ಸಮಿತಿಗಳು ಈಗ ರೈತರ ಶೋಷಣೆ ಕೇಂದ್ರಗಳಾಗುತ್ತಿವೆ. ಹೀಗಾಗಿ ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ರೈರಿಗೆ ಆಗುತ್ತಿರುವ ಶೋಷಣೆಯನ್ನು ತಪ್ಪಿಸುವ ಮೂಲಕ ಎಪಿಎಂಸಿಗಳಲ್ಲಿ ರೈತರಿಗೆ ಆಗುವ ಅನ್ಯಾಯವನ್ನು ತಡೆಯಬೆಕೆಂದು ಒತ್ತಾಯಿಸಿದರು.

      1992ರ ಸೆಪ್ಟೆಂಬರ್ 13ರಂದು ತಾಲೂಕಿನ ಆನಗೋಡು ಗ್ರಾಮದಲ್ಲಿ ಅಂದಿನ ಕೇಂದ್ರ ಸರ್ಕಾರದ ರಸಗೊಬ್ಬರ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಐತಿಹಾಸಿಕ ಹೋರಾಟ ನಡೆಸಿದ್ದ ರೈತರ ಮೇಲೆ ಪೆÇಲೀಸರು ಗುಂಡು ಹಾರಿಸಿದ್ದರಿಂದ ರೈತರಾದ ಓಬೇನಹಳ್ಳಿ ಕಲ್ಲಿಂಗಪ್ಪ, ಸಿದ್ದನೂರು ನಾಗರಾಜಾಚಾರ್ ಬಲಿಯಾಗಿದ್ದರು. ಆ ಹುತಾತ್ಮ ರೈತರ ಸ್ಮರಣಾರ್ಥ ಪ್ರತಿ ವರ್ಷ ಹುತಾತ್ಮ ದಿನಾಚರಣೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸ್ಮರಿಸಿದರು.

      ರಸಗೊಬ್ಬರ ಬೆಲೆ ಏರಿಕೆ ವಿರುದ್ಧದ ಐತಿಹಾಸಿಕ ರೈತ ಹೋರಾಟದಲ್ಲಿ ಹುತಾತ್ಮರಾದ ಓಬೇನಹಳ್ಳಿ ಕಲ್ಲಿಂಗಪ್ಪ, ಸಿದ್ದನೂರು ನಾಗರಾಜಾಚಾರ್ ಸ್ಮಾರಕ ಸ್ಥಳಾಂತರಕ್ಕೆ ಸೂಕ್ತ ನಿವೇಶನ ಒದಗಿಸಿರುವ ಆನಗೋಡು ಗ್ರಾಮ ಪಂಚಾಯತ್‍ನ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.

      ಆನಗೋಡು ಕ್ಷೇತ್ರದ ಜಿಪಂ ಸದಸ್ಯ ಕೆ.ಎಸ್.ಬಸಂತಪ್ಪ ಮಾತನಾಡಿ, ರೈತರಿಗೆ ಬರಬೇಕಾದ ಬೆಳೆ ವಿಮೆ ಬಾರದೇ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಮದ ಸಕಾಲದಲ್ಲಿ ಬೆಳೆ ವಿಮೆ ಹಣವನ್ನು ವಿಮಾ ಕಂಪನಿಗಳು ರೈತರ ಖಾತೆಗಳಿಗೆ ಪಾವತಿ ಮಾಡುವ ಮೂಲಕ ಅನ್ನದಾತರ ಕಣ್ಣೀರೊರೆಸುವ ಕೆಲಸ ಮಾಡಬೇಕು. ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತ ಕಾಪಾಡುವ ಬದ್ಧತೆ ಪ್ರದರ್ಶಿಸಬೇಕೆಂದು ಆಗ್ರಹಿಸಿದರು.

     ರೈತ ಮುಖಂಡರಾದ ಎಚ್.ಆರ್.ಲಿಂಗರಾಜು ಮಾತನಾಡಿ, ಆನಗೋಡಿನಲ್ಲಿ ನಡೆದ ಚಾರಿತ್ರಿಕ ಹೋರಾಟದ ಫಲವಾಗಿ ಅಂದು ರಸಗೊಬ್ಬರದ ಬೆಲೆಯನ್ನು ಸರ್ಕಾರ ಇಳಿಸಬೇಕಾಯಿತು. ಇಡೀ ರಾಷ್ಟ್ರೀಯ ಹೆದ್ದಾರಿ-4ನ್ನೇ ಅನೇಕ ದಿನಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಿದ್ದ ಐತಿಹಾಸಿಕ ಹೋರಾಟ ಅದಾಗಿತ್ತು ಎಂದು ನೆನೆದರು.

      ಈ ವೇಳೆ ಹುತಾತ್ಮರ ಕುಟುಂಬಗಳಿಗೆ ಶಾಬನೂರು ಜಿ.ಎಚ್.ರಾಮಚಂದ್ರಪ್ಪ ಮತ್ತು ಸಹೋದರರು, ಹೆದ್ನೆ ಮುರುಗೇಂದ್ರಪ್ಪ ಧನ ಸಹಾಯ ಮಾಡಿದರು.

     ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ನ್ಯಾಯವಾದಿ ಎಲ್.ಎಚ್.ಅರುಣಕುಮಾರ, ಗ್ರಾಪಂ ಅಧ್ಯಕ್ಷ ರವಿ, ಮುಖಂಡರುಗಳಾದ ಹೆದ್ನೆ ಮುರುಗೇಂದ್ರಪ್ಪ, ಆರ್.ಜಿ.ಹಳ್ಳಿ ರಾಜಶೇಖರ, ಆವರಗೊಳ್ಳ ಬಿ.ಎಂ.ಷಣ್ಮುಖಯ್ಯ, ಹೊನ್ನನಾಯಕನಹಳ್ಳಿ ಮುರುಗೇಂದ್ರಪ್ಪ, ತೋಳಹುಣಸೆ ಗೌಡ್ರ ಮಹೇಶ್ವರಪ್ಪ, ಆವರಗೆರೆ ಚಂದ್ರು, ಪಾಲವ್ವನಹಳ್ಳಿ ಪ್ರಸನ್ನಕುಮಾರ, ಬಲ್ಲೂರು ರವಿಕುಮಾರ್, ಮಲ್ಲಾಪುರ ದೇವರಾಜ, ಬುಳ್ಳಾಪುರ ಹನುಮಂತಪ್ಪ, ಶ್ರೀನಿವಾಸ, ಕೆ.ಪಿ.ಕಲ್ಲಿಂಗಪ್ಪ, ಚಿಕ್ಕನಹಳ್ಳಿ ಮಲ್ಲೇಶಪ್ಪ, ರಾಜಶೇಖರ, ಕೆ.ಎಸ್.ಮೋಹನ, ತೋಳಹುಣಸೆ ಮಹೇಶ್ವರಪ್ಪ, ಆವರಗೆರೆ ರುದ್ರಮುನಿ, ಜಿ.ಎಚ್.ಲಿಂಗರಾಜು ಮತ್ತಿತರರು ಹಾಜರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap