ಕುಣಿಗಲ್
ರೈತರ ಪರ ಎನ್ನುವ ಬಿಜೆಪಿಯವರು ನೀರಾವರಿ ಯೋಜನೆಗಳಾದ ಮಹದಾಯಿ ಹಾಗೂ ಹೇಮಾವತಿ ವಿಚಾರದಲ್ಲಿ ರೈತರಿಗೆ ಸ್ಪಂದಿಸದೆ ಅಭಿವೃದ್ಧಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಕಿಡಿಕಾರಿದರು.
ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರವನ್ನ ಕೊತ್ತಗೆರೆಯಲ್ಲಿ ಪ್ರಾರಂಭಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಬಿಜೆಪಿ ಪಕ್ಷ ಮಹದಾಯಿ ಯೋಜನೆಯ ನೀರಿಗಾಗಿ ಆ ಭಾಗದ ರೈತರು ನಿರಂತರವಾಗಿ ವರ್ಷಾನುಗಟ್ಟಲೆ ಧರಣಿ, ಪ್ರತಿಭಟನೆ ಮಾಡಿದರೂ ಸಹ ಕೇಂದ್ರದ ಬಿಜೆಪಿ ಸರ್ಕಾರ ಮಧ್ಯಪ್ರವೇಶ ಮಾಡಿ ಈವರೆಗೂ ನ್ಯಾಯ ದೊರಕಿಸಿರುವುದಿಲ್ಲ.
ಮಹದಾಯಿ ಯೋಜನೆಯ ಕುಡಿಯುವ ನೀರನ್ನ ನೀಡುವಲ್ಲಿ ಬಿಜೆಪಿ ಪಕ್ಷವೂ ಸಂಪೂರ್ಣವಾಗಿ ವಿಫಲಗೊಂಡಿದೆ. ಜೊತೆಗೆ ತಾಲ್ಲೂಕಿನ ಕುಣಿಗಲ್‍ನ ದೊಡ್ಡಕೆರೆಗೆ ಹೇಮಾವತಿ ನೀರು ಹರಿಸಲು ಎಕ್ಸ್‍ಪ್ರೆಸ್ ಚಾನಲ್ ಕೈಗೊಳ್ಳಲು ಸಮ್ಮಿಶ್ರ ಸರ್ಕಾರವೂ ಹೊರಟರೆ, ಜಿಲ್ಲೆಯ ಬಿಜೆಪಿ ಮುಖಂಡರು ಇದನ್ನ ವಿರೋಧಿಸಿ ಪ್ರತಿಭಟನೆ ಮಾಡುತ್ತಾರೆ.
ಬಿಜೆಪಿ ಪಕ್ಷಕ್ಕೆ ಯಾವುದೆ ಅಭಿವೃದ್ಧಿ ಬೇಕಾಗಿರುವುದಿಲ್ಲ ಎಂದು ದೂರಿದರು. ಕೇವಲ ಅಧಿಕಾರಕ್ಕಾಗಿ ಬಿಜೆಪಿ ಪಕ್ಷದ ಯಡಿಯೂರಪ್ಪನವರು ಆತೊರೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಳೆದ 2 ಬಾರಿಯಿಂದ ಬೆಂ.ಗ್ರಾಮಾಂತರ ಲೋಕಸಭಾ ಸದಸ್ಯನಾಗಿ ಈ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ರೈತರ ಟ್ರಾನ್ಸ್‍ಫಾರಂಗಳು, ಪಟ್ಟಣದ ಸಮಗ್ರ ಅಭಿವೃದ್ಧಿ, ನಾಲ್ಕು ಪಥದ ರಸ್ತೆ, ಕೆಇಬಿ ವಿಭಾಗ ಕಚೇರಿ, ಪುರಸಭಾ ಕಛೇರಿ, ಮಿನಿ ವಿಧಾನಸೌಧ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದೊಡ್ಡಕೆರೆ ಉದ್ಯಾನವನ, ವಿದ್ಯುತ್ ಚಿತಾಗಾರ, ಗ್ರಾಮಾಂತರ ಪ್ರದೇಶದಲ್ಲಿ ರಸ್ತೆಗಳು ಹಾಗೂ ಮಾರ್ಕೋನಹಳ್ಳಿಯ ರೈತರ ಎಡ ಮತ್ತು ಬಲ ನಾಲೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದು, ತಾಲ್ಲೂಕಿನ ಇನ್ನೂ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕೈಗೊಳ್ಳಲು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕೆಂದರು. ತಾಲ್ಲೂಕಿನ ಎಡೆಯೂರು, ಆಲಪ್ಪನಗುಡ್ಡೆ, ಅಮೃತೂರು, ಜಿನ್ನಾಗರ, ಯಡವಾಣಿ, ಹುಲಿಯೂರುದುರ್ಗ, ಚೌಡನಕುಪ್ಪೆ, ಸಂತೇಮಾವತ್ತೂರು, ಜೋಡಿಹೊಸಹಳ್ಳಿ, ಕುಣಿಗಲ್ ಪಟ್ಟಣದಲ್ಲಿ ಬಿರುಸಿನ ಚುನಾವಣಾ ಪ್ರಚಾರವನ್ನ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ರಂಗನಾಥ್, ಗ್ರಾ.ಪಂ.ಮಾಜಿ ಅಧ್ಯಕ್ಷ ನಾರಾಯಣ್, ಶಿವರಾಮಯ್ಯ, ಮುಖಂಡರುಗಳಾದ ಆಡಿಟರ್‍ನಾಗರಾಜು, ಐ.ಎ.ವಿಶ್ವನಾಥ್, ಐ.ಜಿ.ರಮೇಶ್, ಕೆಂಪೇಗೌಡ, ನಳಿನಾಭೈರಪ್ಪ, ಆಲ್ಕೆರೆನಾರಾಯಣ್, ಬೇಗೂರು ನಾರಾಯಣ್, ರಂಗಣ್ಣಗೌಡ, ರಂಗಸ್ವಾಮಿ, ಜಗದೀಶ್, ಚಂದ್ರಶೇಖರ್, ಬಿ.ಡಿ.ಕುಮಾರ್, ಸೇರಿದಂತೆ ಹಲವಾರು ಮುಖಂಡರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
