ತುಮಕೂರು
ದೇಶದ ಬೆನ್ನೆಲುಬಾದ ರೈತರ ಬದುಕನ್ನು ಕೋವಿಡ್-19 ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಸಂದರ್ಭದಲ್ಲಿ ಕೃಷಿ ಇಲಾಖೆಯು ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಅವರು, ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡರು ಹಾಗೂ ಜಿಲ್ಲೆಯ ರೈತರೊಂದಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿದ ಮುರಳೀಧರ ಹಾಲಪ್ಪ ಅವರು, ಕೋವಿಡ್-19 ಮಹಾಮಾರಿ ರೈತರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ರೈತರ ಸ್ಥಿತಿ ಇಂದು ಚಿಂತಾಜನಕವಾಗಿದೆ. ರೈತರು ಸಾಲಸೋಲ ಮಾಡಿ ಬೋರ್‍ವೆಲ್ ಕೊರೆಸಿ ಹಣ್ಣು, ತರಕಾರಿ ಬೆಳೆದ ಬೆಳೆಗಾರರ ಬದುಕು ಅತಂತ್ರವಾಗಿದ್ದು, ನಿರೀಕ್ಷೆಯಷ್ಟು ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲಿ ರೈತರನ್ನು ಇಲಾಖೆಗೆ ಅಲೆದಾಡಿಸದೆ ಸಮಸ್ಯೆ ನಿವಾರಿಸಬೇಕೆಂದರು.
ಫಸಲ್ ಬಿಮಾ ಯೋಜನೆಯಡಿಯಲ್ಲಿ ಇದುವರೆಗೂ ಎಷ್ಟು ರೈತರಿಗೆ ಪರಿಹಾರ ವಿತರಿಸಲಾಗಿದೆ. ಎಷ್ಟು ರೈತರು ನೊಂದಾಯಿಸಿ ಕೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಫಸಲ್ ಬಿಮಾ ಯೋಜನೆಯಡಿಯಲ್ಲಿ ರೈತರಿಗೆ ಸಿಗಬೇಕಾದ ಪರಿಹಾರವನ್ನು ತ್ವರಿತವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರು ಬಿತ್ತನೆ ವೇಳೆಯಲ್ಲಿ ಬಿತ್ತನೆ ಬೀಜ ರಸಗೊಬ್ಬರ ಸೇರಿದಂತೆ ಅಗತ್ಯ ಕೃಷಿ ಸಲಕರಣೆಗಳನ್ನು ಕೊರತೆಯಾಗದಂತೆ ನೋಡಿಕೊಳ್ಳಬೇಕು , ಎಂಆರ್‍ಪಿ ಧರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಯೂರಿಯಾಗಾಗಿ ರೈತರು ಪರದಾಡುತ್ತಿದ್ದು, ರಾಜ್ಯದಲ್ಲಿ ಪ್ರಸ್ತುತ 13 ಲಕ್ಷ ಟನ್ ಯೂರಿಯಾ ಬೇಡಿಕೆ ಇದೆ. ಕೇವಲ 3.8 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ರೈತರ ಬೇಡಿಕೆಗನುಗುಣವಾಗಿ ಯೂರಿಯಾ ಒದಗಿಸಬೇಕು ಎಂದರು.
ರಿಯಾಯಿತಿಯಲ್ಲಿ ಕೃಷಿ ಸಲಕರಣೆ ವಿತರಿಸಿ
ಕೃಷಿ ಉತ್ಪನ್ನಗಳಿಗೆ ಹಾಗೂ ಕೃಷಿ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಒದಗಿಸಬೇಕು. ಸಾವಯವ ಕೃಷಿ ಉತ್ಪಾದನೆಗೆ ಪ್ರೋತ್ಸಾಹ ಧನ ಕಲ್ಪಿಸಬೇಕು ಎಂದು ಹೇಳಿದರು.ರೈತರ ಬೆಳೆ ಸಮೀಕ್ಷೆ ಆ್ಯಪ್ ಕುರಿತು ರೈತರಿಗೆ ಅರಿವು ಮೂಡಿಸಬೇಕು. ಸಾಕಷ್ಟು ಕೃಷಿಕರ ಬಳಿ ಸ್ಮಾರ್ಟ್ ಫೋನ್‍ಗಳು ಇಲ್ಲದೇ ಇರುವ ಕಾರಣ ಹಾಗೂ ಆ್ಯಪ್ ಬಳಕೆ ಬಗ್ಗೆ ತಿಳುವಳಿಕೆ ಮೂಡಿಸುವುದರ ಜೊತೆಗೆ ಗ್ರಾಮಗಳಲ್ಲಿ ನೆಟ್‍ವರ್ಕ್ ಸಮಸ್ಯೆಯನ್ನು ಪರಿಹರಿಸಬೇಕು.
ರೈತರಿಗೆ ರಿಯಾಯಿತಿಯಲ್ಲಿ ಸ್ಮಾರ್ಟ್ ಫೋನ್ ಒದಗಿಸಲು ಕ್ರಮ ಕೈಗೊಳ್ಳಬೇಕು, ರೈತರಿಗೆ ಪರಿಹಾರ ಒದಗಿಸಲು ತುರ್ತಾಗಿ ಬೆಳೆ ಹಾನಿ ಕುರಿತು ದೃಡೀಕರಣ ನೀಡಬೇಕು ಎಂದರು.
ಯುವ ಕೃಷಿಕರಿಗೆ ಪ್ರೋತ್ಸಾಹ ಧನ ಒದಗಿಸಬೇಕು. ರೈತರಿಗೆ ಸಬ್ಸಿಡಿ ಯೋಜನೆಗಳ ಸಮಗ್ರ ಮಾಹಿತಿ ಒದಗಿಸುವುದು. ಪ್ರತಿಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿಕರಿಗೆ ಮಾಹಿತಿ, ಸಲಹೆ ನೀಡಲು ಸ್ಥಳೀಯವಾಗಿ ರೈತ ಮಿತ್ರರನ್ನು ಸರ್ಕಾರ ನೇಮಕಾತಿ ಮಾಡಬೇಕು.
ಮನವಿ ಸ್ವೀಕರಿಸಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ, ಈಗಾಗಲೇ ಫಸಲ್ ಬಿಮಾ ಯೋಜನೆಯಡಿಯಲ್ಲಿ 2017ರಿಂದ ಇದುವರೆಗೂ ಸುಮಾರು 63 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.
ಇನ್ನೂ ಕೆಲವು ಆಧಾರ್ ಲಿಂಕ್ ಆಗದ ಕಾರಣ ವಿಳಂಬವಾಗಿವೆ. ಬಾಕಿ ಉಳಿದಿದ್ದ 117 ಮಂದಿ ರೈತರ ದಾಖಲೆಯನ್ನು ಸರಿಪಡಿಸಿ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.ನಿಗಧಿತ ಬೆಲೆಗಿಂತ ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವವರ ಮೇಲೆ ಈಗಾಗಲೇ ಕ್ರಮ ಕೈಗೊಂಡು ಅಂಗಡಿಯ ಲೈಸೆನ್ಸ್ ಅಮಾನತ್ತು ಮಾಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆಂಚರಾಮಯ್ಯ, ಸಿದ್ಧರಾಮಣ್ಣ, ಮುಖಂಡರಾದ ರೇವಣಸಿದ್ಧಯ್ಯ, ಡಾ. ಇಮ್ತಿಯಾಜ್ ಅಹಮ್ಮದ್, ಮಂಜುನಾಥ್, ಹುಲಿಕುಂಟೆ ಮಲ್ಲಿಕಾರ್ಜುನ್, ಗಿರೀಶ್, ಅತೀಕ್ ಅಹಮ್ಮದ್, ಬಸವರಾಜು, ಚಂದ್ರಶೇಖರ್, ನಟರಾಜು, ವಾಲೆಚಂದ್ರಯ್ಯ, ನಿರಂಜನ್, ದಿಲೀಪ್, ಗೀತಾ, ದೀಪಿಕಾ ಸೇರಿದಂತೆ ಕಾಂಗ್ರೆಸ್ ಕಿಸಾನ್ ಘಟಕದ ರೈತ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ